Home News ಸಂಕ್ರಾಂತಿ ಸಂಭ್ರಮ – ಮಳೆಯಿಲ್ಲದೆ ಬೆಲೆ ಏರಿಕೆ

ಸಂಕ್ರಾಂತಿ ಸಂಭ್ರಮ – ಮಳೆಯಿಲ್ಲದೆ ಬೆಲೆ ಏರಿಕೆ

0

ತಾಲ್ಲೂಕಿನೆಲ್ಲೆಡೆ ಮನೆ-ಮನಗಳಲ್ಲಿ ಸಂಕ್ರಾಂತಿ ಸಂಭ್ರಮ ನೆಲೆಸಿದೆ. ಎಳ್ಳು-ಬೆಲ್ಲ ಹಬ್ಬದ ತಯಾರಿ ಜೋರಾಗಿದ್ದು ಮಾರುಕಟ್ಟೆಗೆ ಜನ ತೆರಳುತ್ತಿರುವುದು ಬುಧವಾರ ಕಂಡುಬಂದಿತು.
ತಾಲ್ಲೂಕಿನಲ್ಲಿ ಸಂಕ್ರಾಂತಿ ಪ್ರಯುಕ್ತ ಅವರೆಕಾಯಿ, ಕಬ್ಬು, ಗೆಣಸು, ಕಡಲೆಕಾಯಿ, ಹೂಗಳು ಮಾರಾಟ ಪೇಟೆ ಬೀದಿಗಳಲ್ಲಿ ಜೋರಾಗಿತ್ತು. ಆದರೆ ಸರಿಯಾಗಿ ಮಳೆಯಾಗದ ಕಾರಣ ಬೆಲೆ ಏರಿಕೆಯಾದ್ದರಿಂದ ಸರಿಯಾಗಿ ವ್ಯಾಪಾರವಾಗುತ್ತಿಲ್ಲವೆಂದು ಅಂಗವಿಕಲ ಅವರೆಕಾಯಿ ವ್ಯಾಪಾರಿ ನಾಗರಾಜ್ ದೂರಿದರು.
ವರ್ಷಪೂರ್ತಿ ಕಷ್ಟ ಪಟ್ಟು ಬೆಳೆದ ಫಸಲುಗಳು ಕೈಗೆ ಬರುವ ಹೊತ್ತು ಇದಾಗಿದ್ದರಿಂದ ಸಹಜವಾಗಿ ಈ ಹಬ್ಬದ ಸಮಯದಲ್ಲಿ ರೈತರಲ್ಲಿ ಸಂಭ್ರಮ ಮನೆ ಮಾಡಿರುತ್ತದೆ. ಜೀವಜಾಲಕ್ಕೆ ಜಡತ್ವ ತುಂಬಿ ಏಕಚಕ್ರಾಧಿಪತ್ಯ ಸ್ಥಾಪಿಸಿದ್ದ ಚಳಿಯನ್ನು ಓಡಿಸುವುದರ ಜೊತೆಗೆ ಮರಣಶಯ್ಯೆಯಲ್ಲಿ ಮಲಗಿ ಭೀಷ್ಮ ಪಿತಾಮಹ ಬಾಳಯಾತ್ರೆಯ ಅಂತಿಮ ಕ್ಷಣಗಳನ್ನು ಪ್ರಾಣತ್ಯಾಗಕ್ಕೆ ಮೀಸಲಿಟ್ಟಿದ್ದು ಕೂಡ ಇದೇ ಉತ್ತರಾಯಣದ ಪುಣ್ಯಕಾಲದಲ್ಲಿ. ನೇಸರ ತನ್ನ ಚಲನೆಯನ್ನು ಉತ್ತರಾಭಿಮುಖವಾಗಿ ಆರಂಭಿಸುವ ಮಹತ್ವದ ದಿನವನ್ನು ಮಳೆ ಸಾಲದೆನ್ನುತ್ತಲೇ ರೈತ ಸಮೂಹ ಸಂಭ್ರಮದಿಂದಲೇ ಬರಮಾಡಿಕೊಳ್ಳುತ್ತಿದೆ.
ಎಳ್ಳು ಬೆಲ್ಲ ತಯಾರಿಯೇ ಒಂದು ಸಂಭ್ರಮ. ಮನೆಗಳಲ್ಲಿ ಹೆಣ್ಣು ಮಕ್ಕಳು ಈ ಎಳ್ಳು ಬೆಲ್ಲ ತಯಾರಿಯಲ್ಲಿ ತೊಡಗಿದ್ದರು.