Home News ಸಂಘಟಿತರಾದಾಗ ಮಾತ್ರ ಸವಲತ್ತುಗಳನ್ನು ಪಡೆಯಬಹುದು

ಸಂಘಟಿತರಾದಾಗ ಮಾತ್ರ ಸವಲತ್ತುಗಳನ್ನು ಪಡೆಯಬಹುದು

0

ವಿಶ್ವಕರ್ಮ ಸಮಾಜದ ಏಳಿಗೆ ಹಾಗು ಸಮಾಜಕ್ಕೆ ಅಗತ್ಯವಾದ ಸವಲತ್ತುಗಳನ್ನು ಸರ್ಕಾರಗಳಿಂದ ಪಡೆದುಕೊಳ್ಳಬೇಕಾದರೆ ಮೊದಲು ನಾವು ಸಂಘಟಿತರಾಗಬೇಕು ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಅಧ್ಯಕ್ಷ ಹಾಗು ರಾಜ್ಯ ಬಿಜೆಪಿ ಉಪಾಧ್ಯಕ್ಷ ಕೆ.ಪಿ.ನಂಜುಂಡಿ ಅಭಿಪ್ರಾಯಪಟ್ಟರು.
ನಗರದ ಕಾಳಿಕಾಂಬ ಕಮಠೇಶ್ವರ ಸಮುದಾಯ ಭವನದಲ್ಲಿ ಶನಿವಾರ ತಾಲ್ಲೂಕು ವಿಶ್ವಕರ್ಮ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ ರಾಜ್ಯಮಟ್ಟದ ೯ ನೇ ವಿಶ್ವಕರ್ಮ ಜಯಂತ್ಯುತ್ಸವದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಮುಂದಿನ ಅಕ್ಟೋಬರ್ ೮ ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿರುವ ರಾಜ್ಯಮಟ್ಟದ ೯ ನೇ ವಿಶ್ವಕರ್ಮ ಜಯಂತಿ ಸಮಾರಂಭಕ್ಕೆ ತಾಲ್ಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಮುದಾಯದವರು ಭಾಗವಹಿಸಬೇಕು ಎಂದರು.
ವಿಶ್ವಕರ್ಮ ಸಮುದಾಯಕ್ಕೆ ಶಕ್ತಿ ಬರಬೇಕಾದರೆ ಪ್ರತಿಯೊಬ್ಬರೂ ಸಂಘಟಿತರಾಗಿ ಹೋರಾಟಕ್ಕೆ ಮುಂದಾಗಬೇಕು. ನಮ್ಮ ಸಮುದಾಯದವರೂ ಬೇರೆ ಸಮುದಾಯದವರಂತೆ ಬದುಕಬೇಕು ಹಾಗು ಸಮುದಾಯಕ್ಕೆ ಅಗತ್ಯವಿರುವ ಸವಲತ್ತುಗಳನ್ನು ಪಡೆದುಕೊಳ್ಳಬೇಕಾದರೆ ಪ್ರತಿಯೊಬ್ಬರೂ ನನ್ನ ಹಿಂದೆ ಹೋರಾಟಕ್ಕೆ ಮುಂದಾಗಬೇಕು ಎಂದರು.
ವಿಶ್ವಕರ್ಮ ಜಯಂತಿಯನ್ನು ಕಳೆದ ೯ ವರ್ಷಗಳಿಂದ ಆಚರಿಸುತ್ತಿದ್ದು ಈ ಭಾರಿಯ ರಾಜ್ಯ ಸಮ್ಮೇಳನ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರ ಸಮ್ಮುಖದಲ್ಲಿ ನಡೆಯಲಿದ್ದು ಜನಾಂಗದ ಪ್ರತಿಯೊಬ್ಬರೂ ಜಯಂತಿಯಲ್ಲಿ ಭಾಗವಹಿಸಿ ವಿಶ್ವಕರ್ಮರ ಶಕ್ತಿ ಪ್ರದರ್ಶಿಸಬೇಕು ಎಂದರು.
ರಾಜಕೀಯದಲ್ಲಿ ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾದಾಗ ನನಗೆ ಆಧಾರ ಸ್ಥಂಭವಾಗಿ ನಿಂತು ಬಿಜೆಪಿ ಪಕ್ಷಕ್ಕೆ ಬರಮಾಡಿಕೊಂಡ ಕೇವಲೇ ಐದೇ ದಿನಗಳಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷರನ್ನಾಗಿಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರನ್ನು ಮುಂದಿನ ಮುಖ್ಯಮಂತ್ರಿಯನ್ನಾಗಿಸಲು ವಿಶ್ವಕರ್ಮ ಸಮುದಾಯ ಪಣ ತೊಡಬೇಕು ಎಂದರು.
ತಾಲ್ಲೂಕು ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅಮರನಾರಾಯಣಾಚಾರಿ, ಗೌರವಾಧ್ಯಕ್ಷ ಜನಾರ್ಧನಮೂರ್ತಿ, ಸುಂದರಾಚಾರಿ, ಯುವಕರ ಸಂಘದ ಅಧ್ಯಕ್ಷ ರಾಘವೇಂದ್ರ, ಈಶ್ವರಾಚಾರಿ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಬಿ.ಸಿ.ನಂದೀಶ್, ಬಿಜೆಪಿ ಮುಖಂಡ ಡಿ.ಆರ್.ಶಿವಕುಮಾರಗೌಡ, ಶ್ರೀಧರ್ ಈ ಸಂದರ್ಭದಲ್ಲಿ ಹಾಜರಿದ್ದರು.