Home News ಸಂಘರ್ಷ ಸಮಿತಿ ಪದಾಧಿಕಾರಿಗಳ ಕಾಲ್ನಡಿಗೆ ಜಾಥಾ

ಸಂಘರ್ಷ ಸಮಿತಿ ಪದಾಧಿಕಾರಿಗಳ ಕಾಲ್ನಡಿಗೆ ಜಾಥಾ

0

ದಲಿತ ವಿರೋಧಿ ನೀತಿ ಅನುಸರಿಸುತ್ತಿರುವ ತಾಲ್ಲೂಕಿನ ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಪಿಎಸ್ಸೈ ವಿಜಯ್‍ರೆಡ್ಡಿರನ್ನು ಕೂಡಲೇ ಅಮಾನತ್ತುಗೊಳಿಸಬೇಕು ಎಂದು ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಸಿ.ಎಂ.ಮುನೆಯ್ಯ ಒತ್ತಾಯಿಸಿದರು.
ತಾಲೂಕು ದಲಿತ ಸಂಘರ್ಷ ಸಮಿತಿ ವತಿಯಿಂದ ತಾಲೂಕಿನ ಗಂಜಿಗುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೇಮಗಲ್ ಗ್ರಾಮದಿಂದ ದಿಬ್ಬೂರಹಳ್ಳಿ ಠಾಣೆಯವರೆಗೂ ಏರ್ಪಡಿಸಲಾಗಿದ್ದ ಕಾಲ್ನಡಿಗೆ ಜಾಥಾ ಮತ್ತು ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಕಳೆದ ದೀಪಾವಳಿ ಹಬ್ಬದಂದು ತಾಲೂಕಿನ ವೇಮಗಲ್ ಗ್ರಾಮದಲ್ಲಿ ದಲಿತರು ಹಾಗು ಸವರ್ಣೀಯರ ನಡುವೆ ನಡೆದ ಘರ್ಷಣೆಯ ಹಿನ್ನಲೆಯಲ್ಲಿ ದಲಿತರು ನೀಡಿದ್ದ ದೂರು ದಾಖಲಿಸಲು ನಿರ್ಲಕ್ಷ್ಯ ತೋರಿದ್ದಷ್ಟೇ ಅಲ್ಲದೇ ತಡವಾಗಿ ದೂರು ದಾಖಲಿಸಿ ನಂತರ ಕೋರ್ಟ್‍ಗೆ ಸುಳ್ಳು ವರದಿ ನೀಡಿ ಪ್ರಕರಣಕ್ಕೆ ಬಿ ರಿಪೋರ್ಟ್ ಹಾಕುವ ಮೂಲಕ ಡಿವೈಎಸ್‍ಪಿ ಸೇರಿದಂತೆ ಪಿಎಸ್ಸೈ ದಲಿತರಿಗೆ ಅನ್ಯಾಯ ಮಾಡಿದ್ದಾರೆ.

ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಪಿಎಸ್ಸೈ ವಿಜಯ್‍ರೆಡ್ಡಿರನ್ನು ಕೂಡಲೇ ಅಮಾನತ್ತುಗೊಳಿಸಬೇಕು ಎಂದು ತಾಲೂಕು ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ತಾಲೂಕಿನ ಗಂಜಿಗುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೇಮಗಲ್ ಗ್ರಾಮದಿಂದ ದಿಬ್ಬೂರಹಳ್ಳಿ ಠಾಣೆಯವರೆಗೂ ಕಾಲ್ನಡಿಗೆ ಜಾಥಾ ನಡೆಸಿದರು.

ಇದು ಸಾಲದು ಎಂಬಂತೆ ತಾಲೂಕಿನ ಹಳೇ ಗಂಜಿಗುಂಟೆ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ಮಾಣ ಮಾಡುವ ಸಮಯದಲ್ಲಿ ಗ್ರಾಮದಲ್ಲಿ ಕೆಲವರನ್ನು ಎತ್ತಿಗಟ್ಟಿ ವಿನಾಕಾರಣ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಿಸಿದ್ದಾರೆ.
ದಸಂಸ ಮಾಜಿ ತಾಲೂಕು ಸಂಚಾಲಕ ಜಿ.ನರಸಿಂಹಮೂರ್ತಿ ಮಾತನಾಡಿ ದಿಬ್ಬೂರಹಳ್ಳಿ ಠಾಣೆರ ಪಿಎಸ್ಸೈ ವಿಜಯ್‍ರೆಡ್ಡಿ ದಲಿತ ವಿರೋಧಿ ಧೋರಣೆ ಅನುಸರಿಸುವುದಷ್ಟೇ ಅಲ್ಲದೇ ಈ ಭಾಗದಲ್ಲಿ ನಡೆಯುವ ಅಕ್ರಮಗಳಿಗೆ ರಕ್ಷಣೆಯಾಗಿ ನಿಂತಿದ್ದಾರೆ.
ಇವರ ಕರ್ತವ್ಯದ ಅವಧಿಯಲ್ಲಿ ದಾಖಲಾಗಿರುವ ಎಲ್ಲಾ ಪ್ರಕರಣಗಳನ್ನು ಬೇರೆ ತನಿಖಾಧಿಕಾರಿಯಿಂದ ತನಿಖೆ ಮಾಡಿಸಬೇಕು ಹಾಗು ಇವರಿಗೆ ಬೆಂಬಲವಾಗಿ ನಿಂತಿರುವ ಚಿಂತಾಮಣಿ ಉಪ ವಿಭಾಗದ ಡಿವೈಎಸ್‍ಪಿ ಕೃಷ್ಣಮೂರ್ತಿ ಯವರ ವಿರುದ್ದ ಶಿಸ್ತು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಕೆಲ ಕಾಲ ಠಾಣೆಯ ಮುಂಭಾಗ ಪ್ರತಿಭಟನೆ ನಡೆಸಿದರು.
ದಸಂಸ ಮಾಜಿ ರಾಜ್ಯ ಸಂಚಾಲಕ ರಾಜಾಕಾಂತ್, ಜಿಲ್ಲಾ ಸಂ,ಸಂಚಾಲಕರಾದ ಜಿ.ನಾರಾಯಣಸ್ವಾಮಿ, ವೆಂಕಟರವಣಪ್ಪ, ಗಂಗಪ್ಪ, ತಾಲೂಕು ಸಂಚಾಲಕ ಟಿ.ವಿ.ಚಲಪತಿ, ದ್ಯಾವಕೃಷ್ಣಪ್ಪ, ಎಲ್.ವೆಂಕಟೇಶ್, ಹುಜಗೂರು ವೆಂಕಟೇಶ್, ಮುನಿಯಪ್ಪ, ಮಟ್ಟಿನಾರಾಯಣಸ್ವಾಮಿ, ಮತ್ತಿತರರು ಹಾಜರಿದ್ದರು.