Home News ಸಂಪ್ರದಾಯ ಮತ್ತು ಪರಂಪರೆ ಉಳಿಸಿಕೊಂಡಿದೆ ಕಂದಾಯ ಇಲಾಖೆ

ಸಂಪ್ರದಾಯ ಮತ್ತು ಪರಂಪರೆ ಉಳಿಸಿಕೊಂಡಿದೆ ಕಂದಾಯ ಇಲಾಖೆ

0

ಸಂಪ್ರದಾಯ ಮತ್ತು ಪರಂಪರೆ ಉಳಿಸಿಕೊಂಡಿರುವ ಯಾವುದಾದರೂ ಇಲಾಖೆ ಇದೆ ಎಂದಾದರೆ ಅದು ಕೇವಲ ಕಂದಾಯ ಹಾಗು ಪೊಲೀಸ್ ಇಲಾಖೆ ಮಾತ್ರ. ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ.ಕೆ.ಎನ್.ಅನುರಾಧ ಹೇಳಿದರು.
ಕರ್ನಾಟಕ ರಾಜ್ಯ ಸರ್ಕಾರಿ ಕಂದಾಯ ಇಲಾಖಾ ನೌಕರರ ಸಂಘ ಹಾಗು ತಾಲ್ಲೂಕು ಆಡಳಿತದ ಸಹಯೋಗದಲ್ಲಿ ಶನಿವಾರ ಆಯೋಜಿಸಲಾಗಿದ್ದ ಕಂದಾಯ ದಿನಾಚರಣೆ ೨೦೧೭ ಹಾಗೂ ಶತಮಾನೋತ್ಸವ ಕಂಡ ಕಂದಾಯ ಭವನದ ನಾಮಫಲಕ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಮ್ಮ ಜಿಲ್ಲೆಯ ಬಹುತೇಕ ಜನತೆ ರೈತಾಪಿಯವರಾಗಿದ್ದು ಬಹಳಷ್ಟು ಜನರಿಗೆ ಮೊಬೈಲ್ ಬಳಕೆ ಮಾಡುವುದು ಗೊತ್ತಿಲ್ಲ. ಇಂತಹವರಿಗೆ ಯಾವುದೋ ಒಂದು ಜಾತಿ, ಆದಾಯ ಪ್ರಮಾಣ ಪತ್ರ ಬೇಕಾದಲ್ಲಿ ಕಚೇರಿಗೆ ಅರ್ಜಿ ಸಲ್ಲಿಸಿದಾಗ ಅವರ ಮೊಬೈಲ್‌ಗೆ ಸಂದೇಶ ರವಾನಿಸಲಾಗುತ್ತದೆಯಾದರೂ ಅವರಿಗೆ ಅದನ್ನು ನೋಡಲು ಬರುವುದಿಲ್ಲ. ಇಂತಹವರಿಗೆ ಸಹಾಯವಾಗಲಿ ಎನ್ನುವ ದೃಷ್ಟಿಯಿಂದಲೇ ಅದೇ ಗ್ರಾಮದವರನ್ನು ಗ್ರಾಮ ಸಹಾಯಕರಾಗಿ ಆಯ್ಕೆ ಮಾಡಲಾಗಿದೆ. ಗ್ರಾಮ ಸಹಾಯಕರಾದವರು ಜನರಿಗೆ ಮಾಹಿ ಕೊಡುವ ಕೆಲಸ ಮಾಡಬೇಕು. ರೈತರು ಮತ್ತು ನಾಗರಿಕರೊಂದಿಗೆ ಉತ್ತಮ ಬಾಂದವ್ಯ ಬೆಳೆಸಿಕೊಳ್ಳಬೇಕು ಎಂದರು.
ಬಹುತೇಕ ಗ್ರಾಮ ಲೆಕ್ಕಿಗರು ನಿವೃತ್ತಿಯ ಅಂಚಿನಲ್ಲಿದ್ದಾರೆ. ಅವರಿಗೆ ಯಾವುದೇ ಕಂಪ್ಯೂಟರ್ ಜ್ಞಾನವಿಲ್ಲ ಎಂದು ಇಲಾಖೆ ಯಾವುದೇ ರಿಯಾಯಿತಿ ನೀಡುವುದಿಲ್ಲ. ಬದಲಿಗೆ ಪ್ರತಿಯೊಬ್ಬರೂ ಕಂಪ್ಯೂಟರ್ ಜ್ಞಾನ ಪಡೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ಕಂದಾಯ ಇಲಾಖೆ ನೌಕರರ ಸಂಘ ಕಂಪ್ಯೂಟರ್ ತರಬೇತಿಯಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದರು.
ಜಿಲ್ಲಾ ಪಂಚಾಯ್ತಿ ಸಿಇಓ ಜೆ.ಮಂಜುನಾಥ್ ಮಾತನಾಡಿ, ಸ್ವಾತಂತ್ರ್ಯ ಪೂರ್ವದಿಂದಲೂ ಜನಪರವಾಗಿ ಕೆಲಸ ಮಾಡುತ್ತಿರುವ ಕಂದಾಯ ಇಲಾಖೆಯಡಿ ೩೨ ವಿವಿಧ ಇಲಾಖೆಗಳು ಕಾರ್ಯ ನಿರ್ವಹಿಸುತ್ತಿದ್ದರೂ ಎಲ್ಲದಕ್ಕೂ ಮಾತೃ ಇಲಾಖೆ ಕಂದಾಯ ಇಲಾಖೆಯಾಗಿದೆ. ಕಂದಾಯ ಇಲಾಖೆ ಅಧಿಕಾರಿಗಳು ಹಾಗು ಸಿಬ್ಬಂದಿಯ ಸೇವೆಯೇ ಸಮಾಜದ ಎಲ್ಲಾ ಆಗು ಹೋಗುಗಳ ತಳಪಾಯವಾಗಿದ್ದು ಆ ನಿಟ್ಟಿನಲ್ಲಿ ಜನರಿಗೆ ಪಾರದರ್ಶಕವಾಗಿ ಸೇವೆ ಸಲ್ಲಿಸಬೇಕು ಎಂದರು.
ತಹಸೀಲ್ದಾರ್ ಅಜಿತ್‌ಕುಮಾರ್‌ರೈ ಮಾತನಾಡಿ, ನೂರಾರು ವರ್ಷ ಇತಿಹಾಸವಿರುವ ಕಂದಾಯ ಇಲಾಖೆ ಹಂತ ಹಂತವಾಗಿ ವಿಭಜನೆಗೊಂಡು ಇದೀಗ ೩೨ ಇಲಾಖೆಗಳು ಕಂದಾಯ ಇಲಾಖೆಯಡಿ ಕಾರ್ಯ ನಿರ್ವಹಿಸುತ್ತಿವೆ. ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಒಗ್ಗಟ್ಟಾಗಿ ಕರ್ತವ್ಯ ನಿರ್ವಹಿಸಬೇಕು. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ಅನ್ಯ ಇಲಾಖೆಗಳ ಆಕ್ರಮಣದಿಂದ ಕಂದಾಯ ಇಲಾಖೆ ನೌಕರರಿಗೆ ಸಿಗಬೇಕಾದ ಬಡ್ತಿಯಲ್ಲಿ ಕುತ್ತು ಬರುವುದು ನಿಶ್ಚಿತ. ಒಗ್ಗಟ್ಟು ಪ್ರದರ್ಶಿಸಿದಾಗ ಮಾತ್ರ ಯಶಸ್ಸು ಕಾಣಲು ಸಾಧ್ಯ ಎಂದರು.
ಇದೇ ಸಂದರ್ಭದಲ್ಲಿ ಶತಮಾನ ಪೂರೈಸಿದ ನಗರದ ಹಳೆ ತಾಲ್ಲೂಕು ಕಚೇರಿ ಕಟ್ಟಡಕ್ಕೆ ಕಂದಾಯ ಭವನ ಎಂದು ನಾಮಕರಣ ಮಾಡುವ ಮೂಲಕ ನಾಮಫಲಕ ಅಳವಡಿಸಲಾಯಿತು.
ಕಂದಾಯ ದಿನಾಚರಣೆ ಅಂಗವಾಗಿ ರೆಡ್‌ಕ್ರಾಸ್ ಸೊಸೈಟಿಯಿಂದ ಆಯೋಜಿಸಲಾಗಿದ್ದ ಉಚಿತ ರಕ್ತದಾನ ಶಿಭಿರದಲ್ಲಿ ಸುಮಾರು ೪೦ ಯೂನಿಟ್ ರಕ್ತ ಸಂಗ್ರಹವಾಯಿತು.
ಸಮಾರಂಭದಲ್ಲಿ ಕಂದಾಯ ದಿನಾಚರಣೆ ಅಂಗವಾಗಿ ಈಚೆಗೆ ಏರ್ಪಡಿಸಲಾಗಿದ್ದ ಕ್ರೀಡಾಕೂಟದಲ್ಲಿ ವಿಜೇತರಾದ ಸಿಬ್ಬಂದಿಗೆ ಬಹುಮಾನ ವಿತರಿಸಲಾಯಿತು.
ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ನಿರ್ಮಲಮುನಿರಾಜು, ಉಪವಿಭಾಗಾಧಿಕಾರಿ ಬಿ.ಶಿವಸ್ವಾಮಿ, ಜಿಲ್ಲಾ ಭೂ ದಾಖಲೆ ಉಪನಿರೀಕ್ಷಕ ಅಜ್ಜಪ್ಪ, ರಾಜ್ಯ ಕಂದಾಯ ನೌಕರರ ಸಂಘದ ಜಿಲ್ಲಾಧ್ಯಕ್ಷ ವೈ.ಎಲ್.ಹನುಮಂತರಾವ್, ನಗರಸಭೆ ಅಧ್ಯಕ್ಷ ಅಫ್ಸರ್‌ಪಾಷ, ಉಪಾಧ್ಯಕ್ಷೆ ಪ್ರಭಾವತಿ ಸುರೇಶ್, ನಗರಸಭೆ ಸದಸ್ಯ ಚಿಕ್ಕಮುನಿಯಪ್ಪ, ತಾಲ್ಲೂಕು ಪಂಚಾಯ್ತಿ ಸದಸ್ಯರಾದ ಶ್ರೀನಿವಾಸ್, ಪಂಕಜಾನಿರಂಜನ್, ಶೋಭಾ ಶಶಿಕುಮಾರ್, ಚಿಂತಾಮಣಿ ತಹಸೀಲ್ದಾರ್ ಗಂಗಪ್ಪ, ಚಿಕ್ಕಬಳ್ಳಾಪುರ ತಹಸೀಲ್ದಾರ್ ನರಸಿಂಹಮೂರ್ತಿ, ಗೌರಿಬಿದನೂರು ತಹಸೀಲ್ದಾರ್ ಎಂ.ನಾಗರಾಜ್, ಇಓ ವೆಂಕಟೇಶ್, ನಿವೃತ್ತ ತಹಸೀಲ್ದಾರ್ ಅಟ್ಟೂರು ವೆಂಕಟೇಶ್, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಕೇಶವರೆಡ್ಡಿ ಹಾಜರಿದ್ದರು.

error: Content is protected !!