Home News ಸಂಭ್ರಮದ ಶಿವರಾತ್ರಿ

ಸಂಭ್ರಮದ ಶಿವರಾತ್ರಿ

0

ತಾಲ್ಲೂಕಿನಾದ್ಯಂತ ಮಹಾ ಶಿವರಾತ್ರಿಯನ್ನು ಜನರು ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ಮಂಗಳವಾರ ಬೆಳಿಗ್ಗೆಯಿಂದಲೇ ಶಿವನ ದೇವಾಲಯಗಳಲ್ಲಿ ಭಕ್ತರು ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.
ಎಲ್ಲೆಡೆ ದೇವಾಲಯಗಳಲ್ಲಿ ವಿಶೇಷ ಪೂಜೆ, ಭಜನೆ ಮತ್ತು ಪ್ರಸಾದ ವಿನಿಯೋಗ ನಡೆಯಿತು. ನಗರದ ಅಶೋಕ ರಸ್ತೆಯಲ್ಲಿರುವ ಕೋಟೆ ಸೋಮೇಶ್ವರ ಮತ್ತು ಪೇಟೆ ನಗರೇಶ್ವರ, ಕಾಶಿ ವಿಶ್ವನಾಥೇಶ್ವರ, ಅಗ್ರಹಾರ ಬೀದಿಯ ಜಲಕಂಠೇಶ್ವರ, ಏಕಾಂಬರೇಶ್ವರ, ಮಯೂರ ವೃತ್ತದ ಬಳಿಯ ಚಂದ್ರಶೇಖರ, ಬೂದಾಳದ ಮಲೆಮಲ್ಲೇಶ್ವರ, ವೀರಾಪುರದ ಗವಿಗಂಗಾಧರೇಶ್ವರ, ಬಟ್ರೇನಹಳ್ಳಿಯ ಸಾಯಿಬಾಬ ಮಂದಿರದಲ್ಲಿರುವ ಜಲಕಂಠೇಶ್ವರ ಮುಂತಾದ ಪ್ರಮುಖ ದೇವಾಲಯಗಳಲ್ಲಿ ಶಿವರಾತ್ರಿಯ ಪ್ರಯುಕ್ತ ವಿಶೇಷ ಪೂಜೆ ಆಯೋಜಿಸಲಾಗಿತ್ತು.

ತಾಲ್ಲೂಕಿನ ಬೂದಾಳದ ಮಲ್ಲೆಮಲ್ಲೇಶ್ವರ ದೇವಾಲಯದಲ್ಲಿ ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.

ಶಿವ ಅಂದರೆ ಕಲ್ಯಾಣ. ಲೋಕಕಲ್ಯಾಣಕ್ಕಾಗಿ ಇಡೀ ದಿನ ಉಪವಾಸ, ಜಾಗರಣೆಗಳನ್ನು ಮಾಡಿ ನಾಲ್ಕು ಯಾಮಗಳಲ್ಲೂ ಶಿವ ಪೂಜೆಯನ್ನು ಮಾಡಲಾಗುತ್ತದೆ ಎಂದು ದೇಗುಲದ ಅರ್ಚಕರು ತಿಳಿಸಿದರು.
‘ಮಾಘ ಮಾಸದ ಬಹುಳ ಚತುರ್ದಶಿಯಂದು ಆಚರಿಸಲಾಗುವ ಈ ಹಬ್ಬದಲ್ಲಿ ಚಳಿಗಾಲ ಮುಗಿದು ಬೇಸಿಗೆ ಆರಂಭವಾಗುತ್ತದೆ. ಈ ಕೃಷ್ಣ ಪಕ್ಷದ ಕೊನೆಯ ದಿನದಂದು ಸೂರ್ಯನ ಶಾಖ ಕಡಿಮೆಯಾಗಿರುತ್ತದೆ ಮತ್ತು ಚಂದ್ರನ ಪ್ರಕಾಶವೂ ಕ್ಷೀಣಿಸಿರುತ್ತದೆ. ಇಂತಹ ಹವಾಮಾನ ವ್ಯತ್ಯಯದ ದಿನಗಳಲ್ಲಿ ನಮ್ಮ ದೇಹ ಪ್ರಕೃತಿಯಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತವೆ. ಈ ದಿನ ನಾವು ಮಾಡುವ ಶಿವಪೂಜೆ ಮತ್ತು ಉಪವಾಸ ದೇಹಕ್ಕೆ ತುಂಬಾ ಉಪಯುಕ್ತ ಎಂದು ಅರ್ಚಕ ರಾಮಮೋಹನಶಾಸ್ತ್ರಿ ತಿಳಿಸಿದರು.

error: Content is protected !!