Home News ಸದಾಶಿವ ಆಯೋಗದ ವರದಿ ಜಾರಿಗೊಳಿಸಲು ಒತ್ತಾಯ

ಸದಾಶಿವ ಆಯೋಗದ ವರದಿ ಜಾರಿಗೊಳಿಸಲು ಒತ್ತಾಯ

0

ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸುವಂತೆ ಒತ್ತಾಯಿಸಲಾಗುತ್ತಿದ್ದು, ದೇಶಾದ್ಯಂತ ಇರುವ ಮಾದಿಗ ಸಮುದಾಯದವರು ಸಂಘಟಿತರಾಗಿ ಬೆಂಬಲಿಸಬೇಕು ಎಂದು ಮಾದಿಗ ದಂಡೋರ ರಾಷ್ಟ್ರಾಧ್ಯಕ್ಷ ಮಂದಕೃಷ್ಣ ಮಾದಿಗ ಹೇಳಿದರು.
ನಗರದ ಪ್ರವಾಸಿಮಂದಿರದಲ್ಲಿ ಗುರುವಾರ ಸಮುದಾಯದ ಮುಖಂಡರೊಂದಿಗೆ ಮಾತನಾಡಿದ ಅವರು, ೧೯೭೬ ರಲ್ಲಿ ಹಾವನೂರ ಅವರು ಸಲ್ಲಿಸಿರುವ ವರದಿಯನ್ನು ಸರ್ಕಾರಗಳು ಪರಿಗಣಿಸಿಲ್ಲ. ಕಳೆದ ನಾಲ್ಕು ವರ್ಷಗಳ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿದ್ದ ಸಂಧರ್ಭದಲ್ಲಿ ವರದಿಗಳನ್ನು ತಯಾರಿಸಲು ಅನುದಾನ ಕೊಟ್ಟಿರುವುದು ಬಿಟ್ಟರೆ ಇದುವರೆಗೂ ಆಯೋಗದ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರವೇ ಸದಾಶಿವ ಆಯೋಗವನ್ನು ರಚನೆ ಮಾಡಿ ವರದಿಯನ್ನು ತಯಾರಿಸುವಂತೆ ಹೇಳಿತ್ತು. ಆದರೆ ಈಗ ಅದೇ ಕಾಂಗ್ರೆಸ್ ಸರ್ಕಾರವೇ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಹಿಂದೇಟು ಹಾಕುತ್ತಿದೆ. ಸರ್ಕಾರವೇ ನಡೆಸಿರುವ ಜಾತಿಗಣತಿಯ ಪ್ರಕಾರ ಒಂದು ಕೋಟಿ ಎಂಟ ಲಕ್ಷ ಜನಸಂಖ್ಯೆಯನ್ನು ಹೊಂದಿದ್ದು, ಹಾವನೂರ ವರದಿಯಂತೆ ಹೆಚ್ಚಾಗಿರುವ ಮಾದಿಗ ಜನಾಂಗಕ್ಕೆ ಶೇ. ೮ ರಷ್ಟು ಮೀಸಲಾತಿ ಸಿಗಬೇಕು ಅಲ್ಲಿಯತನಕ ನಮ್ಮ ಹೋರಾಟ ನಿಲ್ಲುವುದಿಲ್ಲ. ನವೆಂಬರ್ ೨೦ ರಂದು ಹೈದ್ರಾಬಾದ್ನಲ್ಲಿ ಸಮುದಾಯದ ೩೦ ಲಕ್ಷಕ್ಕೂ ಹೆಚ್ಚಿನ ಜನಾಂಗವನ್ನು ಒಟ್ಟಾಗಿ ಸೇರಿಸಿ ಸಮಾವೇಶವನ್ನು ನಡೆಸುವ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಮೇಲೆ ಒತ್ತಡವೇರುವಂತಹ ಕೆಲಸವನ್ನು ಮಾಡಲಾಗುತ್ತದೆ ಎಂದು ವಿವರಿಸಿದರು.
ಮಾದಿಗ ದಂಡೋರ ರಾಜ್ಯ ಉಪಾಧ್ಯಕ್ಷ ಬುಳ್ಳಹಳ್ಳಿ ರಾಜಪ್ಪ ಮಾತನಾಡಿ, ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸಲು ರಾಜ್ಯ ಸರ್ಕಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲವು ಮಂದಿ ಸಚಿವರುಗಳು ಅಡ್ಡಗಾಲಾಗಿದ್ದಾರೆ, ಕೇಂದ್ರ ಮತ್ತು ರಾಜ್ಯದಲ್ಲಿ ಸಮುದಾಯವನ್ನು ಪ್ರತಿನಿಧಿಸುತ್ತಿರುವ ಜನಪ್ರತಿನಿಧಿಗಳು ಈ ಬಗ್ಗೆ ಕಾಳಜಿ ವಹಿಸಿ ಕೆಲಸ ಮಾಡಬೇಕು, ಸರ್ಕಾರಗಳ ಮೇಲೆ ಒತ್ತಡ ಹೇರಬೇಕು, ಕೇವಲ ಅಧಿಕಾರದ ಆಸೆಯಿಂದ ಕುರ್ಚಿಗೆ ಅಂಟಿಕೊಂಡು ಕುಳಿತುಕೊಳ್ಳಬಾರದು, ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.
ಮಾದಿಗ ಸಮುದಾಯದ ಮುಖಂಡರಾದ ದೇವನಹಳ್ಳಿ ಎಂ.ಎನ್.ನಾರಾಯಣಸ್ವಾಮಿ, ಚಿಕ್ಕಮುನಿಯಪ್ಪ, ನಾಗನರಸಿಂಹ, ನರಸಿಂಹಮೂರ್ತಿ, ಸಿ.ವಿ.ಲಕ್ಷ್ಮಣರಾಜು, ಗುರುಮೂರ್ತಿ, ಯಾ.ಮಾ.ನಾರಾಯಣಸ್ವಾಮಿ, ಆಂಜಿನಪ್ಪ, ಮುನಿಪೂಜಪ್ಪ, ಕೆ.ನಾರಾಯಣಸ್ವಾಮಿ, ಎಂ.ಮುನಿನಾರಾಯಣ, ಕದಿರಪ್ಪ, ಟಿ.ಎ.ಚಲಪತಿ, ದೇವರಮಳ್ಳೂರು ಕೃಷ್ಣಪ್ಪ, ಗಂಭೀರನಹಳ್ಳಿ ಶಿವಣ್ಣ, ವಿಜಯಪುರ ವೇಣು, ದೊಡ್ಡಕುರುಬರಹಳ್ಳಿ ನಾಗರಾಜ್, ಪಿ.ರಂಗನಾಥಪುರ ಮುನಿಆಂಜಿನಪ್ಪಸ್ವಾಮಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.