Home News ಸಮಸ್ಯೆಗಳ ಆಗರವಾದ ರೇಷ್ಮೆ ಗೂಡು ಮಾರುಕಟ್ಟೆ

ಸಮಸ್ಯೆಗಳ ಆಗರವಾದ ರೇಷ್ಮೆ ಗೂಡು ಮಾರುಕಟ್ಟೆ

0

ನಗರದ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯನ್ನು ಪಡೆದುಕೊಂಡಿರುವ ರೇಷ್ಮೆ ಗೂಡು ಮಾರುಕಟ್ಟೆಯ ರೇಷ್ಮೆನೂಲು ಬಹಳಷ್ಟು ಹೆಸರುವಾಸಿಯಾಗಿದೆ. ಇಲ್ಲಿನ ಜನರ ಜೀವನಾಡಿ ರೇಷ್ಮೆ. ಇದನ್ನು ಬಿಟ್ಟರೆ ಬೇರೆ ಕಸುಬು ಗೊತ್ತಿಲ್ಲದ ಜನತೆ, ರೇಷ್ಮೆಯನ್ನೇ ನಂಬಿ ಜೀವನ ಮಾಡುತ್ತಿದ್ದಾರೆ.
ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯನ್ನು ಪಡೆದುಕೊಂಡಿದ್ದರೂ ಕೂಡಾ ಇಲ್ಲಿನ ಮಾರುಕಟ್ಟೆಯ ಆವರಣಕ್ಕೆ ಪ್ರವೇಶ ಮಾಡುತ್ತಿದ್ದಂತೆ, ಯಾವ ಸಂಧರ್ಭದಲ್ಲಿ ಕಾಯಿಲೆ ಬರುತ್ತದೊ ಎನ್ನುವಂತಹ ಭಯ ಆವರಿಸುತ್ತದೆ. ಯಾಕೆಂದರೆ ಈ ಮಾರುಕಟ್ಟೆಯಲ್ಲಿನ ಅವ್ಯವಸ್ಥೆಗಳು ಅಷ್ಟರಮಟ್ಟಿಗೆ ಭಯಬೀತಿಗೊಳಿಸುತ್ತವೆ.

ಶಿಡ್ಲಘಟ್ಟದ ರೇಷ್ಮೆಗೂಡಿನ ಮಾರುಕಟ್ಟೆಯಲ್ಲಿ ರಾಶಿಯಾಗಿ ಬಿದ್ದಿರುವ ಕಸವನ್ನು ತೋರಿಸುತ್ತಿರುವ ರೀಲರುಗಳು ಮತ್ತು ರೈತರು
ಶಿಡ್ಲಘಟ್ಟದ ರೇಷ್ಮೆಗೂಡಿನ ಮಾರುಕಟ್ಟೆಯಲ್ಲಿ ರಾಶಿಯಾಗಿ ಬಿದ್ದಿರುವ ಕಸವನ್ನು ತೋರಿಸುತ್ತಿರುವ ರೀಲರುಗಳು ಮತ್ತು ರೈತರು

ಪ್ರತಿನಿತ್ಯ ಕೋಟ್ಯಾಂತರ ರೂಪಾಯಿಗಳ ಹಣದ ವಹಿವಾಟು ನಡೆಯುತ್ತದೆ, ಸಾವಿರಾರು ಮಂದಿ ರೈತರು, ರೀಲರುಗಳು ಮಾರುಕಟ್ಟೆಗೆ ಬರುತ್ತಿದ್ದಾರೆ, ಸ್ಥಳೀಯ ರೈತರು ಮಾತ್ರವಲ್ಲದೆ, ರಾಜ್ಯ ಹಾಗೂ ನೆರೆ ರಾಜ್ಯಗಳಿಂದಲೂ ರೈತರು ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಿಕೊಂಡು ಬರುತ್ತಾರೆ, ಆದರೆ ಇಲ್ಲಿಗೆ ಬರುವಂತಹ ರೈತರಿಗೆ ಬೇಕಾಗಿರುವ ಯಾವುದೇ ಮೂಲಸೌಕರ್ಯಗಳಿಲ್ಲದೆ ಪರದಾಡಬೇಕಾಗಿದೆ, ಕಿತ್ತುಹೋಗಿರುವ ಶೌಚಾಲಯಗಳು, ಕೆಟ್ಟು ನಿಂತಿರುವ ಶುದ್ದಕುಡಿಯುವ ನೀರಿನ ಘಟಕ, ಕುಡಿಯಲು ಯೋಗ್ಯವಿಲ್ಲದೆ ಕೊಳಾಯಿಗಳಿಂದ ವ್ಯರ್ಥವಾಗಿ ಹರಿದುಹೋಗುತ್ತಿರುವ ನೀರು, ಮಾರುಕಟ್ಟೆಯ ಆವರಣದಲ್ಲೆಲ್ಲಾ ವಿಲೇವಾರಿಯಾಗದ ಕಸದ ರಾಶಿಗಳು, ರಾತ್ರಿಯ ವೇಳೆಯಲ್ಲಿ ಕುಡಿದು ಬಿಸಾಡಿರುವ ಮದ್ಯದ ಬಾಟಲಿಗಳು, ಕಸದ ರಾಶಿಗಳಿಗೆ ಬೆಂಕಿಹಚ್ಚಿರುವ ಕುರುಹುಗಳು ಕಾಣಸಿಗುತ್ತವೆ.
ಇದಷ್ಟೆ ಅಲ್ಲದೆ, ಉಪಯೋಗವಾಗುತ್ತಿರುವ ಒಂದು ಶೌಚಾಲಯದ ನಿರ್ವಹಣೆಯನ್ನು ಬೆಂಗಳೂರಿನ ಸಂಸ್ಥೆಯವರಿಗೆ ಗುತ್ತಿಗೆ ನೀಡಿದ್ದಾರೆ, ಆದರೆ ಮಾರುಕಟ್ಟೆಯ ಆವರಣದಲ್ಲಿನ ಮತ್ತೊಂದು ಶೌಚಾಲಯದ ಮುಂಭಾಗದಲ್ಲಿ ತುಂಬಿ ಹೋಗಿರುವ ಯುಜಿಡಿಯನ್ನು ಸ್ವಚ್ಚಗೊಳಿಸದೆ ಇರುವುದರಿಂದ ಯುಜಿಡಿಯ ನೀರು, ಸಮೀಪದ ಚರಂಡಿಗೆ ಹರಿಯುತ್ತಿರುವುದರಿಂದ ಸುತ್ತಮುತ್ತಲಿನ ವಾಸಿಗಳು ದುರ್ವಾಸನೆಯಿಂದ ಪರದಾಡುವಂತಾಗಿದೆ. ಜನರು ಕಾಯಿಲೆಗಳಿಗೆ ತುತ್ತಾಗುವಂತಾಗಿದೆ, ಮಾರುಕಟ್ಟೆಯ ಆವರಣದಲ್ಲಿಯೂ ಕೂಡಾ ಯುಜಿಡಿಯ ನೀರು ನಿಂತು ದುರ್ವಾಸನೆ ಬೀರುತ್ತಿದೆ, ಆದರೂ ಇಲ್ಲಿನ ಅಧಿಕಾರಿಗಳು ತಲೆಕೆಡಿಸಿಕೊಂಡಿಲ್ಲ. ಅಷ್ಟೆ ಅಲ್ಲದೆ, ಇಲ್ಲಿಗೆ ಬರುವಂತಹ ರೈತರಿಗೆ ಉಪಹಾರದ ವ್ಯವಸ್ಥೆ ಮಾಡಿಕೊಳ್ಳಲು ಕ್ಯಾಂಟಿನ್ ಇಲ್ಲ. ವಿಶ್ರಾಂತಿ ಗೃಹವಿಲ್ಲ. ಮಹಿಳಾ ರೈತರೂ ಬರುತ್ತಾರೆ. ಆದರೆ ಅವರಿಗೆ ಶೌಚಾಲಯದ ವ್ಯವಸ್ಥೆಯಿಲ್ಲದೆ ಪರದಾಡುತ್ತಾರೆ.
ಕೋಟ್ಯಾಂತರ ರೂಗಳ ವ್ಯವಹಾರ ನಡೆದು ಸರ್ಕಾರಕ್ಕೆ ಸಾಕಷ್ಟು ಆದಾಯ ಬರುವ ಮಾರುಕಟ್ಟೆಯಲ್ಲಿ ಮೂಲಭೂತ ಸೌಕರ್ಯಗಳನ್ನು ಸರಿಪಡಿಸಬೇಕು. ಈಗಾದರೂ ಸಂಬಂಧಪಟ್ಟ ಅಧಿಕಾರಿಗಳು ಇಲ್ಲಿನ ವ್ಯವಸ್ಥೆಯನ್ನು ಪರಿಸಪಡಿಸಲು ಮುಂದಾಗಬೇಕು ಎಂದು ರೈತರು ಮತ್ತು ರೀಲರುಗಳು ಒತ್ತಾಯಿಸಿದ್ದಾರೆ.

error: Content is protected !!