ಜೀವನದಲ್ಲಿ ಗುರಿ, ಚಲ, ಗುರುವಿನ ಆಶೀರ್ವಾದ ಇದ್ದರೆ ಮಾತ್ರವೇ ವಿದ್ಯೆಕಲಿತು ಸಮಾಜದಲ್ಲಿ ಉನ್ನತ ಸ್ಥಾನಗಳಿಸಲು ಸಾಧ್ಯವಾಗುತ್ತದೆ ಎಂದು ತಹಸೀಲ್ದಾರ್ ಜಿ.ಎ.ನಾರಾಯಣಸ್ವಾಮಿ ತಿಳಿಸಿದರು.
ತಾಲ್ಲೂಕಿನ ಚಿಕ್ಕದಾಸೇನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಹಿರಿಯ ವಿದ್ಯಾರ್ಥಿಗಳ ಸಂಘ ಹಾಗೂ ಗುರುವಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಾವು ಇಂದು ಏನಾದರೂ ಗಳಿಸಿದ್ದರೆ ಅದೆಲ್ಲವೂ ಈ ಸಮಾಜದಿಂದ ಗಳಿಸಿದ್ದೆ. ಹಾಗಾಗಿ ಈ ಸಮಾಜದಿಂದ ಪಡೆದ ಒಂದಷ್ಟನ್ನಾದರೂ ನಾವು ಮತ್ತೆ ಸಮಾಜಕ್ಕೆ ವಾಪಸ್ ಮಾಡಬೇಕಾಗುತ್ತದೆ. ಆ ಮೂಲಕ ಅಕ್ಷರ ಕಲಿಸಿದ ಗುರುಗಳು, ಜನ್ಮ ಕೊಟ್ಟ ಹೆತ್ತವರು, ಆಡಿ ಬೆಳೆದ ಭೂಮಿಯ ಋಣವನ್ನು ತೀರಿಸಲು ಸಾಧ್ಯವಾಗುತ್ತದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರಘುನಾಥರೆಡ್ಡಿ, ವಿಜ್ಞಾನ ತಂತ್ರಜ್ಞಾನ ಮುಂದುವರೆದ ಈ ಕಾಲದಲ್ಲಿ ವಿಶ್ವವೇ ಒಂದು ಗ್ರಾಮವಂತಾಗಿದೆ. ಉದ್ಯೋಗ ಇನ್ನಿತರೆ ಕಾರಣಗಳಿಗಾಗಿ ಹುಟ್ಟಿದ ಊರು ಬಿಟ್ಟು ಬೇರೆಲ್ಲೋ ನೆಲೆಸಿದವರು ತಮ್ಮ ದಿನ ನಿತ್ಯದ ಒತ್ತಡ ಜೀವನದಲ್ಲಿ ಹುಟ್ಟದ ಊರು, ಹೆತ್ತವರು, ಅಕ್ಷರ ಕಲಿಸಿದ ಗುರುಗಳನ್ನು ನೆನೆಸಿಕೊಳ್ಳಲಾಗದ ಸ್ಥಿತಿಗೆ ತಲುಪಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಹಿರಿಯ ವಿದ್ಯಾರ್ಥಿಗಳೆಲ್ಲರನ್ನೂ ಒಟ್ಟುಗೂಡಿಸುವ, ತಮ್ಮ ಹಳೆಯ ದಿನಗಳನ್ನು ಮೆಲಕು ಹಾಕುವಂತ ಸುಂದರ ಕ್ಷಣಗಳಿಗೆ ಸಾಕ್ಷಿಯಾದ ಇಂತಹ ಕಾರ್ಯಕ್ರಮಗಳು ಇದೀಗ ಅಗತ್ಯವಿದೆ. ಈ ಮೂಲಕ ಶಾಲೆ ಹಾಗೂ ಗ್ರಾಮದ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಂಗವಾಗಿ ಗ್ರಾಮದ ಯುವಕ ಯುವತಿಯರು ಹಾಗೂ ಶಾಲಾ ಮಕ್ಕಳಿಗೆ ಕ್ರೀಡೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದು ವಿಜೇತರಾದವರಿಗೆ ಅತಿಥಿಗಳಿಂದ ಬಹುಮಾನವನ್ನು ವಿತರಿಸಲಾಯಿತು. ಶಾಲೆಯ ಎಲ್ಲ ವಿದ್ಯಾರ್ಥಿಗಳಿಗೂ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯೆ ಮಂಜುಳಾದೇವರಾಜ್ ಹಾಗೂ ಸಹೋದರರು ನೀಡಿದ ಸಮವಸ್ತ್ರಗಳನ್ನು ವಿತರಿಸಲಾಯಿತು.
ಶಾಲೆಯಲ್ಲಿ ಈ ಹಿಂದೆ ಕಾರ್ಯನಿರ್ವಹಿಸಿದ ಶಿಕ್ಷಕರಾದ ಕೆ.ಮುನಿಯಪ್ಪ, ಎಸ್.ಎನ್.ರಂಗನಾಥ್, ಕೆ.ಎಸ್.ಸುಗುಣ, ನಾರಾಯಣಸ್ವಾಮಿ, ಸಧ್ಯ ಮುಖ್ಯ ಶಿಕ್ಷಕರಾಗಿರುವ ಕೆ.ಮಂಜುನಾಥ್, ಸಹಶಿಕ್ಷಕಿ ಎಚ್.ಎಂ.ಸುಜಾತರವರನ್ನು ಹಾಗೂ ಇದೆ ಶಾಲೆಯಲ್ಲಿ ಓದಿ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಎಇಇಯಾಗಿರುವ ಎಂ.ವೆಂಕಟೇಶಪ್ಪ, ಬಳ್ಳಾರಿಯಲ್ಲಿ ಶಿಕ್ಷಕರಾಗಿರುವ ಸಿ.ವಿ.ಶಿವಣ್ಣ, ಎಸ್.ನಾರಾಯಣಸ್ವಾಮಿರವರನ್ನು ಸನ್ಮಾನಿಸಲಾಯಿತು.
ಮುಖ್ಯ ಶಿಕ್ಷಕ ಮಂಜುನಾಥ್, ಸರ್ಕಲ್ ಇನ್ಸ್ಪೆಕ್ಟರ್ ಬಿ.ಎಲ್.ಶ್ರೀನಿವಾಸಮೂರ್ತಿ, ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಎನ್.ಹರಿಪ್ರಸಾದ್, ಗ್ರಾಮ ಪಂಚಾಯಿತಿ ಸದಸ್ಯ ಎಸ್.ಮಂಜುನಾಥ್, ಎಸ್ಡಿಎಂಸಿ ಅಧ್ಯಕ್ಷ ದ್ಯಾವಪ್ಪ, ಗುಚ್ಚ ಸಂಪನ್ಮೂಲ ವ್ಯಕ್ತಿ ಪ್ರಸನ್ನಕುಮಾರ್, ಶಿಕ್ಷಕರ ಸಂಘದ ನಿರ್ದೆಶಕ ಮುನಿನಾರಾಯಣಪ್ಪ, ರಾಜ್ಯ ಪ್ರಶಸ್ತಿ ಶಿಕ್ಷಕ ಆರ್.ಮುನಿವೆಂಕಟಸ್ವಾಮಿ, ಕಂದಾಯ ನಿರೀಕ್ಷಕ ಸುಬ್ರಮಣಿ, ಗ್ರಾಮ ಲೆಕ್ಕಿಗ ಮುನಿಶಾಮಿ ಇನ್ನಿತರರು ಹಾಜರಿದ್ದರು.