Home News ಸರ್ಕಾರವು ತಂತ್ರಜ್ಞಾನದ ಹೊರೆಯನ್ನು ತಂದಿಟ್ಟಿದೆ

ಸರ್ಕಾರವು ತಂತ್ರಜ್ಞಾನದ ಹೊರೆಯನ್ನು ತಂದಿಟ್ಟಿದೆ

0

ಸರ್ಕಾರವು ತಂತ್ರಜ್ಞಾನದ ಹೊರೆಯನ್ನು ತಂದಿಟ್ಟು ರೇಷ್ಮೆ ನೂಲು ಬಿಚ್ಚಾಣಿಕೆದಾರರಿಗೆ ತೊಂದರೆಯನ್ನುಂಟು ಮಾಡಿದೆ. ಇದನ್ನು ಮಂತ್ರಿಗಳ ಬಳಿ ಹೋಗಿ ಚರ್ಚಿಸೋಣ, ಮುಖ್ಯಮಂತ್ರಿಗಳ ಗಮನಕ್ಕೂ ತರಬೇಕಿದೆ ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ನಗರದ ರೇಷ್ಮೆ ಗೂಡಿನ ಮಾರುಕಟ್ಟೆಯ ಮುಂಭಾಗ ರೇಷ್ಮೆ ಗೂಡನ್ನು ಖರೀದಿಸದೆ ಧರಣಿ ಕುಳಿತ ರೀಲರುಗಳ ಪ್ರತಿಭಟನೆ ಬುಧವಾರ ಮೂರನೆ ದಿನಕ್ಕೆ ಕಾಲಿಟ್ಟಿರುವ ಹಿನ್ನೆಲೆಯಲ್ಲಿ ಆಗಮಿಸಿದ ಅವರು ಸಮಸ್ಯೆಯ ವಿವರ ಪಡೆದು ಮಾತನಾಡಿದರು.
ತಂತ್ರಜ್ಞಾನದ ಲೋಪದೋಷಗಳನ್ನು ಸರಿಪಡಿಸಬೇಕು. ರೀಲರುಗಳಿಗೆ ಬೇಕಿರುವಷ್ಟು ರೇಷ್ಮೆ ಗೂಡು ಸಮಯಕ್ಕೆ ಸರಿಯಾಗಿ ಸಿಕ್ಕರೆ ಅವರು ನೆಮ್ಮದಿಯಾಗಿ ಗೃಹಕೈಗಾರಿಕೆಯನ್ನು ನಡೆಸಿಕೊಂಡಿರುತ್ತಾರೆ. ಶಿಡ್ಲಘಟ್ಟದ ಇತಿಹಾಸದಲ್ಲಿ ರೇಷ್ಮೆ ಗೂಡಿನ ಮಾರುಕಟ್ಟೆ ವಹಿವಾಟಿಲ್ಲದೆ ಈ ರೀತಿಯಾಗಿ ನಿಂತಿರುವುದು ಇದೇ ಮೊದಲು. ಇದು ನಮ್ಮ ದುರ್ದೈವ. ತಾಲ್ಲೂಕಿನ ಅರ್ಥ ವ್ಯವಸ್ಥೆಯೇ ಇದರಿಂದ ನಾಶವಾಗುತ್ತದೆ ಎಂದು ಹೇಳಿದರು.
ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕಿತ್ತು. ರೈತರು ಮತ್ತು ರೀಲರುಗಳೊಂದಿಗೆ ನೂತನ ತಂತ್ರಜ್ಞಾನದ ಸಾಧಕ ಬಾಧಕಗಳ ಬಗ್ಗೆ ಚರ್ಚಿಸಿ, ಸಮಸ್ಯೆಗೆ ಪರಿಷ್ಕಾರವನ್ನು ಹುಡುಕಬೇಕಿತ್ತು. ಸಾವಿರಾರು ಮಂದಿ ಈ ಉದ್ದಿಮೆಯನ್ನು ನಂಬಿ ಜೀವನವನ್ನು ನಡೆಸುತ್ತಿದ್ದಾರೆ ಅವರ ಸಮಸ್ಯೆಗೆ ಪರಿಹಾರವನ್ನು ಹುಡುಕುವ ಜವಾಬ್ದಾರಿ ಅಧಿಕಾರಿಗಳದ್ದು. ಮುರು ದಿನಗಳ ಕಾಲ ರೇಷ್ಮೆ ಗೂಡಿನ ಮಾರುಕಟ್ಟೆ ಮುಚ್ಚಿದ್ದರಿಂದ ಎಷ್ಟೊಂದು ಜೀವನದ ಮೇಲೆ ಪರಿಣಾವ ಬೀರುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
ರೈತರು ಮತ್ತು ರೀಲರುಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಒಬ್ಬರನ್ನು ಬಿಟ್ಟು ಇನ್ನೊಬ್ಬರಿರಲು ಸಾಧ್ಯವಿಲ್ಲ. ಇಬ್ಬರಿಗೂ ಅನಾನುಕೂಲವಾದ್ದನ್ನು ಸರಿಪಡಿಸಬೇಕು. ರೇಷ್ಮೆ ಆಯುಕ್ತರಿಗೆ ಇಲ್ಲಿನ ಪರಿಸ್ಥಿತಿ ಹಾಗೂ ಸಮಸ್ಯೆಗಳನ್ನು ವಿವರಿಸಲು ಅಧಿಕಾರಿಗಳಿಗೆ ತಾಕೀತು ಮಾಡಿದರು.
ರೀಲರುಗಳಾದ ಜಿ.ರೆಹಮಾನ್, ಸಮೀವುಲ್ಲಾ, ಅಕ್ಮಲ್ಪಾಷ, ಎ.ಆರ್.ಅಬ್ದುಲ್ ಅಜೀಜ್, ಮಂಜು, ರಾಮಕೃಷ್ಣ, ಇಮ್ತಿಯಾಜ್ ಮತ್ತಿತರರು ಧರಣಿಯಲ್ಲಿ ಪಾಲ್ಗೊಂಡಿದ್ದರು.