Home News ಸರ್ಕಾರಿ ಜಮೀನನ್ನು ಅಕ್ರಮವಾಗಿ ಖಾತೆ ಮಾಡಿಕೊಟ್ಟಿರುವುದನ್ನು ವಜಾಗೊಳಿಸಬೇಕೆಂದು ಪ್ರತಿಭಟನೆ

ಸರ್ಕಾರಿ ಜಮೀನನ್ನು ಅಕ್ರಮವಾಗಿ ಖಾತೆ ಮಾಡಿಕೊಟ್ಟಿರುವುದನ್ನು ವಜಾಗೊಳಿಸಬೇಕೆಂದು ಪ್ರತಿಭಟನೆ

0

ಗ್ರಾಮ ಪಂಚಾಯಿತಿಯಿಂದ ಅಕ್ರಮವಾಗಿ ಖಾತೆ ಮಾಡಿಕೊಟ್ಟಿರುವ ನಿವೇಶನಗಳ ಖಾತೆಗಳನ್ನು ರದ್ದುಗೊಳಿಸಿ, ಗ್ರಾಮದಲ್ಲಿನ ನಿವೇಶನ ರಹಿತ ಫಲಾನುಭವಿಗಳಿಗೆ ನಿವೇಶನಗಳನ್ನು ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿ ಅಂಕತಟ್ಟಿ ಗ್ರಾಮಸ್ಥರು ಹಾಗೂ ರೈತ ಸಂಘಟದ ಮುಖಂಡರು ಮಂಗಳವಾರ ಮಳ್ಳೂರು ಗ್ರಾಮ ಪಂಚಾಯಿತಿಯ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ತಾಲ್ಲೂಕಿನ ಮಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಕತಟ್ಟಿ ಗ್ರಾಮದ ಸರ್ವೆ ನಂಬರ್ 7/2 ರಲ್ಲಿ 12 ಎಕರೆ 20 ಗುಂಟೆ ಜಮೀನು ಸರ್ಕಾರಿ ಸ್ವಾಮ್ಯದಲ್ಲಿತ್ತು. ಇದರಲ್ಲಿ ಬಿ.ಚೌಡಪ್ಪ ಬಿನ್ ಬಚ್ಚಪ್ಪ ಎಂಬುವವರಿಗೆ ಸರ್ವೆ ನಂಬರ್ 7/2 ರಲ್ಲಿ 2.30 ಎಕರೆ ಆದೇಶವಾಗಿದ್ದು, 10 ಎಕರೆ ಉಳಿಕೆ ಜಮೀನಿದೆ. ಈ ಜಮೀನನ್ನು ಗ್ರಾಮದಲ್ಲಿನ ನಿವೇಶನ ರಹಿತರಿಗೆ ನಿವೇಶನಗಳನ್ನಾಗಿ ಹಂಚಿಕೆ ಮಾಡುವುದನ್ನು ಬಿಟ್ಟು ಪ್ರಭಾವಿ ವ್ಯಕ್ತಿಗಳಿಗೆ ಒಂದು ಎಕರೆ ಗ್ರಾಮ ಠಾಣೆಯ ಭೂಮಿಯನ್ನು ಗ್ರಾಮ ಪಂಚಾಯಿತಿಯಲ್ಲಿ ಯಾರ ಗಮನಕ್ಕೂ ಬಾರದಂತೆ ಹಿಂದೆ ಇದ್ದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಬಿಲ್ ಕಲೆಕ್ಟರ್ ಇಬ್ಬರೂ ಖಾತೆ ಮಾಡಿಕೊಟ್ಟಿದ್ದಾರೆ.
ಗ್ರಾಮದಲ್ಲಿನ ಬಡವರು, ನಿರ್ಗತಿಕರು, ಸರ್ಕಾರಿ ಶಾಲೆ, ದೇವಸ್ಥಾನ ಸೇರಿದಂತೆ ಸಾರ್ವಜನಿಕರಿಗೆ ಅನುಕೂಲವಾಗುವಂತಹ ಕಾರ್ಯಗಳಿಗೆ ಭೂಮಿ ಮಂಜೂರು ಮಾಡಿಕೊಟ್ಟಿಲ್ಲ. ಈ ಬಗ್ಗೆ ತನಿಖೆಯಾಗಬೇಕು. ಅಕ್ರಮ ಖಾತೆಗಳನ್ನು ವಜಾಗೊಳಿಸಿರುವ ಅಧಿಕಾರಿಗಳನ್ನು ಸೇವೆಯಿಂದ ಅಮಾನತ್ತುಗೊಳಿಸಬೇಕು. ಅಕ್ರಮವಾಗಿ ಖಾತೆ ಮಾಡಿಸಿಕೊಳ್ಳಲು ವಾಮಮಾರ್ಗವನ್ನು ಅನುಸರಿಸಿರುವವರ ಮೇಲೆ ಕ್ರಿಮಿನಲ್ ಕೇಸು ದಾಖಲು ಮಾಡಬೇಕು ಎಂದು ಒತ್ತಾಯಿಸಿದರು.

ಶಿಡ್ಲಘಟ್ಟ ತಾಲ್ಲೂಕಿನ ಮಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಕತಟ್ಟಿ ಗ್ರಾಮದ ಸರ್ಕಾರಿ ಜಮೀನನ್ನು ಅಕ್ರಮವಾಗಿ ಖಾತೆ ಮಾಡಿಕೊಟ್ಟಿರುವುದನ್ನು ವಜಾಗೊಳಿಸಬೇಕೆಂದು ಒತ್ತಾಯಿಸಿ ಮಂಗಳವಾರ ಅಂಕತಟ್ಟಿ ಗ್ರಾಮಸ್ಥರು ಹಾಗೂ ರೈತ ಸಂಘಟದ ಮುಖಂಡರು ಮಳ್ಳೂರು ಗ್ರಾಮ ಪಂಚಾಯಿತಿಯ ಆವರಣದಲ್ಲಿ ಪ್ರತಿಭಟನೆ ನಡೆಸಿ ತಾಲ್ಲೂಕು ಪಂಚಾಯಿತಿ ಇಓ ವೆಂಕಟೇಶ್‌ ಅವರಿಗೆ ಮನವಿ ಸಲ್ಲಿಸಿದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಧಾಮಣಿ ಮಾತನಾಡಿ, ನಮ್ಮ ಅವಧಿಯಲ್ಲಿ ನಿವೇಶನಗಳನ್ನು ಮಂಜೂರು ಮಾಡಿಕೊಟ್ಟಿಲ್ಲ, ಹಿಂದೆ ಮಂಜೂರು ಮಾಡಿದ್ದಾರೆ. ಈ ನಿವೇಶನಗಳು ಕಂದಾಯ ಇಲಾಖೆಯ ಅಡಿಯಲ್ಲಿವೆಯೆ ಅಥವಾ ಗ್ರಾಮಠಾಣೆಗೆ ಸೇರಿವೆಯೆ ಎಂಬುದು ಭೂಮಿಯನ್ನು ಅಳತೆ ಮಾಡಿದ ನಂತರವೇ ಗೊತ್ತಾಗುತ್ತದೆ. ಅಳತೆಗೆ ಬರೆದಿದ್ದೇವೆ. ಸರ್ವೆ ಆದ ನಂತರ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.
ಅಧ್ಯಕ್ಷೆ ರಾಧಶಿವಕುಮಾರ್ ಮಾತನಾಡಿ, ಈ ಹಿಂದೆ ಖಾತೆ ಮಾಡಿರುವ ಬಗ್ಗೆ ನಮ್ಮ ಗಮನಕ್ಕೂ ಬಂದಿಲ್ಲ, ಈ ಬಗ್ಗೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
ಒತ್ತುವರಿಯಾಗಿರುವ ಭೂಮಿಯು ಗ್ರಾಮಕ್ಕೆ ಹೊಂದಿಕೊಂಡಿದ್ದು ನಿವೇಶನಗಳನ್ನು ಮಾಡಲು ಅನುಕೂಲಕರವಾಗಿರುವುದರಿಂದ ನಿಯಮಾವಳಿಯ ಪ್ರಕಾರ ಎಲ್ಲರಿಗೂ ನಿವೇಶನಗಳನ್ನು ಕೊಡಿಸಬೇಕು ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗೆ ರೈತರು ಮತ್ತು ಗ್ರಾಮಸ್ಥರು ಮನವಿ ಪತ್ರ ಸಲ್ಲಿಸಿದರು.
ಸ್ಥಳಕ್ಕೆ ಆಗಮಿಸಿ ಮನವಿ ಪತ್ರ ಸ್ವೀಕಾರ ಮಾಡಿಕೊಂಡ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶ್ ಮಾತನಾಡಿ, ಗ್ರಾಮ ಪಂಚಾಯಿತಿಯಿಂದ ನಿವೇಶನಗಳನ್ನು ಮಾಡಿಕೊಡಬೇಕಾದರೆ ಕೆಲವು ಮಾನದಂಡಗಳಿವೆ. ಈ ಬಗ್ಗೆ ಪರಿಶೀಲನೆ ನಡೆಸಿ, ಅಧಿಕಾರಿಗಳು ತಪ್ಪು ಮಾಡಿರುವುದು ಕಂಡು ಬಂದರೆ ಅವರ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಂಡು ತಾಲ್ಲೂಕು ಪಂಚಾಯಿತಿಯಿಂದಲೇ ಖಾತೆಗಳನ್ನು ವಜಾಗೊಳಿಸಲು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ತಾಲ್ಲೂಕು ರೈತ ಸಂಘದ ಅಧ್ಯಕ್ಷ ಎಸ್.ಎಂ.ರವಿಪ್ರಕಾಶ್, ಕಾರ್ಯದರ್ಶಿ ಪ್ರತೀಶ್, ಗ್ರಾಮಸ್ಥರಾದ ಎಸ್‌.ವೆಂಕಟರೆಡ್ಡಿ, ಜಗನ್ನಾಥ್‌, ದೇವರಾಜ್‌, ಮುನಿರಾಜು, ಬಾಬು, ವಿನಯ್‌, ಸುಪ್ರೀತ್‌, ಶ್ರೀನಿವಾಸ, ವೆಂಕಟೇಶ್‌, ದೀಪಕ್‌ ಈ ಸಂದರ್ಭದಲ್ಲಿ ಹಾಜರಿದ್ದರು.

error: Content is protected !!