ಎಸ್ಎಸ್ಎಲ್ಸಿ ಪರೀಕ್ಷೆಯು ವಿದ್ಯಾರ್ಥಿ ಭವಿಷ್ಯವನ್ನು ರೂಪಿಸುವ ಪ್ರಮುಖ ಘಟ್ಟ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ ತಿಳಿಸಿದರು.
ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಎದುರಿಸಲಿರುವ 115 ಮಕ್ಕಳಿಗೆ ಕ್ರೆಸೆಂಟ್ ಶಾಲೆಯ ಕಾರ್ಯದರ್ಶಿ ಮಹಮ್ಮದ್ ತಮೀಮ್ ಕೊಡುಗೆಯಾಗಿ ನೀಡಿದ ರಟ್ಟು, ಜಾಮಿಟ್ರಿ ಬಾಕ್ಸ್, ಲೇಖನ ಸಾಮಗ್ರಿಗಳು ಮುಂತಾದ ಸಲಕರಣೆಗಳನ್ನು ವಿತರಿಸಿ ಅವರು ಮಾತನಾಡಿದರು.
ಸರ್ಕಾರಿ ಮಕ್ಕಳು ಈ ಪರೀಕ್ಷೆಗೆ ಸನ್ನದ್ಧಗೊಳ್ಳಲು ಪೂರಕ ಸಲಕರಣೆಗಳನ್ನು ನೀಡುವ ಮೂಲಕ ಸಮುದಾಯಿಕ ನೆರವು ಸಿಗುತ್ತಿದೆ. ಶಿಕ್ಷಕರ ಮೂಲಕ ಉತ್ತಮ ಮಾರ್ಗದರ್ಶನ ಕೂಡ ಲಭಿಸುತ್ತಿದೆ. ವಿದ್ಯಾರ್ಥಿಗಳು ಹೆಚ್ಚಿನ ಶ್ರಮ ವಹಿಸಿ ಒಳ್ಳೆಯ ಫಲಿತಾಂಶಗಳನ್ನು ಪಡೆಯುವ ಮೂಲಕ ತಮಗೆ ಸಹಾಯ ಮಾಡಿದವರಿಗೆ ಧನ್ಯವಾದಗಳನ್ನು ತಿಳಿಸಬಹುದು ಹಾಗೂ ಮುಂದೆ ಪರೀಕ್ಷೆ ಬರೆಯುವವರಿಗೆ ಮಾದರಿಯಾಗಬಹುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕ್ರೆಸೆಂಟ್ ಶಾಲೆಯ ಕಾರ್ಯದರ್ಶಿ ಮಹಮ್ಮದ್ ತಮೀಮ್ ಸುಮಾರು 25 ಸಾವಿರ ರೂಪಾಯಿಗಳ ಮೌಲ್ಯದ ಸಲಕರಣೆಗಳನ್ನು 115 ವಿದ್ಯಾರ್ಥಿಗಳಿಗೆ ನೀಡಿದರು.
ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕಿ ಮಂಜುಳಾ, ಶಿಕ್ಷಕರಾದ ಸರ್ದಾರ್, ಇಷ್ರತ್, ಮಧು, ಬಾಸ್ಕರ್, ಶಿವಕುಮಾರ್, ರಾಮಚಂದ್ರ, ನರಸಿಂಹಮೂರ್ತಿ, ಪ್ರಕಾಶ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.