ನಾದ ಕೀಲಿಮಣೆ ಕನ್ನಡ -ಭಾಷೆಯನ್ನು ಶಾಲೆ ಹಾಗೂ ಮನೆಗಳಲ್ಲಿ ಗಣಕ ಯಂತ್ರದ ಸಹಾಯದಿಂದ ಕಲಿಸಲು ಹಾಗೂ ಕಲಿಯಲು ಅನುಕೂಲ ಮಾಡಿಕೊಡುವ ಒಂದು ವಿಶೇಷ ವಿನ್ಯಾಸದ ಕೀಲಿಮಣೆ ಎಂದು ತಂತ್ರಾಂಶ ತಜ್ಞ ಗುರುಪ್ರಸಾದ್ ತಿಳಿಸಿದರು.
ತಾಲ್ಲೂಕಿನ ಚೀಮಂಗಲ ಹಾಗೂ ವರದನಾಯಕನಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಭಾನುವಾರ “ನಾದ” ಕೀಲಿಮಣೆಯನ್ನು ಶಾಲೆಗಳ ಕಂಪ್ಯೂಟರುಗಳಿಗೆ ಉಚಿತವಾಗಿ ಅಳವಡಿಸಿ, ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಬಳಸುವುದನ್ನು ವಿವರಿಸಿ ಅವರು ಮಾತನಾಡಿದರು.
ಕೀಲಿಮಣೆಯು ಕಂಪ್ಯೂಟರಿಗೆ ಭಾಷಾ ವರ್ಣಮಾಲೆಯನ್ನು ಕಳುಹಿಸಲು ಬಳಸುವ ಸಾಧನ. ಇತ್ತೀಚಿನ ನಾಲ್ಕು ದಶಕಗಳಲ್ಲಿ ಆಂಗ್ಲ ಭಾಷಿಕ ಕೀಲಿಮಣೆ (QWERTY) ಮೇಲಿನ ಶ್ರೇಣಿಯ ಕ್ರಮದಲ್ಲಿ ಇರುವ ಈ ಸಾಧನವು ವಿಶ್ವಾದ್ಯಂತ ಬಳಕೆಯಲ್ಲಿ ಇದೆ. ಭಾರತೀಯ ಬಾಷೆಗಳ ವರ್ಣಾಕ್ಷರಗಳನ್ನು ಕಂಪ್ಯೂಟರಿನಲ್ಲಿ ಟಂಕಿಸಲು ಇದೇ ಆಂಗ್ಲ ಭಾಷಿಕ ಕೀಲಿಮಣೆಯನ್ನೇ ಬಳಸಲಾಗುತ್ತಿ ದೆ. ತಂತ್ರಾಂಶ ಪರಿಷ್ಕಾರದ (software processing) ಮೂಲಕ ಆಂಗ್ಲಭಾಷಿಕ ಕೀಲೊತ್ತುಗಳ ಮೇಲೆ ಕನ್ನಡ ಅಕ್ಷರಗಳನ್ನು ಸಂಯೋಜನೆ ಮಾಡುವುದರಿಂದ ಕಂಪ್ಯೂಟರಿನ ದೃಶ್ಯ ಪರದೆಯ ಮೇಲೆ ಕನ್ನಡ ಅಕ್ಷರಗಳ ದೃಶ್ಯ ಮೂಡಿಬರುತ್ತದೆ. ಆಂಗ್ಲಭಾಷೆಯ ಆಧಾರದ ಮೇಲೆ ನೀಡಲಾಗುತ್ತಿರುವ ಮಾತೃಭಾಷಾ-ಕಂಪ್ಯೂಟರ್ ತರಬೇತಿ ಮೂಲ ಉದ್ದೇಶವನ್ನು ಸಫಲಗೊಳಿಸುವುದಿಲ್ಲ. ಅದಕ್ಕಾಗಿ ನಾದ ಎಂಬ -ಭಾರತೀಯ ಭಾಷಾ ಕಲಿಕೆಗೆ ಒಂದು ವಿಶೇಷ ಕೀಲಿಮಣೆ ರೂಪಿಸಿದ್ದೇವೆ ಎಂದರು.
ನಾದ ಕೀಲಿಮಣೆಯ ಅಕ್ಷರ ವಿನ್ಯಾಸವನ್ನು ಭಾರತೀಯ ಬ್ರಾಹ್ಮೀ ಭಾಷೆಗಳ ವರ್ಣಮಾಲೆಯ ಸ್ವರೂಪ – ಸ್ವಭಾವ, ಸಂಯೋಜನೆಗಳಿಗೆ ಅನುಸಾರವಾಗಿ ರೂಪಿಸಲಾಗಿದೆ. ಇಲ್ಲಿ ನಾವು ಪ್ರತಿಪಾದಿಸುತ್ತಿರುವ ಅಂಶ : ಕನ್ನಡದ ಅ-ಆ-ಇ-ಈ ಕಲಿಯಲು – ಕಲಿಸಲು A-B-C-D ಯ ಊರೆಗೋಲು ಬೇಕಿಲ್ಲ. ಈ ರೀತಿಯಾಗಿ ಕನ್ನಡವನ್ನು ಕನ್ನಡವಾಗಿ ಕಲಿಸಿ ಬೆಳೆಸಲು ಶಾಲಾ ಹಂತಗಳಲ್ಲಿ ಪ್ರಾಥಮಿಕ ದೇಶ -ಭಾಷೆ, ಮಾತೃ ಭಾಷೆ, ಸಂಸ್ಕೃತಿ -ಭಾಷೆಯಾಗಿ ಬೆಳೆಸುವ ಕಾರ್ಯದಲ್ಲಿ ನಾದ ಕೀಲಿಮಣೆ ತನ್ನ ಅಳಿಲು ಸೇವೆಯನ್ನು ಸಲ್ಲಿಸುತ್ತಿದೆ ಎಂದು ಹೇಳಿದರು.
ಅಮೆರಿಕೆಯ ಕೆಲ ದಾನಿಗಳ ಸಹಾಯದಿಂದ ಈ ಕೀಲಿಮಣೆಗಳನ್ನು ಗ್ರಾಮಾಂತರ ಭಾಗದ ಸರ್ಕಾರಿ ಶಾಲೆಗಳಲ್ಲಿ ಉಚಿತವಾಗಿ ಅಳವಡಿಸುತ್ತಿದ್ದು, ಎಳೆಯ ವಯಸ್ಸಿನಿಂದಲೇ ಕನ್ನಡವನ್ನು ಕಂಪ್ಯೂಟರಿನಲ್ಲಿ ಬಳಕೆ ಮಾಡುವಂತೆ ಮಾಡುವುದು ನಮ್ಮ ಉದ್ದೇಶ ಎಂದರು.
ಕೇದಗೆ ಸಂಸ್ಥೆಯ ಮುಖ್ಯಸ್ಥ ಕೆ.ಶಿವಪ್ರಸಾದ ರಾವ್, ಮುಖ್ಯ ಶಿಕ್ಷಕ ಶಿವಶಂಕರ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಂಜುನಾಥ್, ವರದನಾಯಕನಹಳ್ಳಿ ಶಾಲೆಯ ಶಿಕ್ಷಕರಾದ ನಾಗಭೂಷಣ್, ಎಂ.ಎ.ರಾಮಕೃಷ್ಣ ಹಾಜರಿದ್ದರು.