Home News ಸರ್ಕಾರಿ ಶಾಲೆಯಲ್ಲಿ ಒಬ್ಬಟ್ಟಿನ ಸಮಾರಾಧನೆ

ಸರ್ಕಾರಿ ಶಾಲೆಯಲ್ಲಿ ಒಬ್ಬಟ್ಟಿನ ಸಮಾರಾಧನೆ

0

ಹಬ್ಬ-ಹರಿದಿನಗಳಲ್ಲಿ, ನೆಂಟರು ಬಂದಾಗ, ವಿಶೇಷ ದಿನಗಳಲ್ಲಿ, ಔತಣಕೂಟ ಏರ್ಪಡಿಸಿದಾಗ ಬಹುತೇಕ ಮಂದಿ ಇಷ್ಟಪಡುವ ಸಿಹಿ ಖಾದ್ಯ ಒಬ್ಬಟ್ಟು ಅಥವಾ ಹೋಳಿಗೆ. ಒಬ್ಬಟ್ಟನ್ನು ಪ್ರಮುಖವಾಗಿ ದೀಪಾವಳಿ, ಯುಗಾದಿ ಹಬ್ಬಗಳಲ್ಲಿ ಮತ್ತು ಮದುವೆ ಮುಂತಾದ ಸಮಾರಂಭಗಳಲ್ಲಿ ಮಾಡುತ್ತಾರೆ.
ಶಿಡ್ಲಘಟ್ಟ ತಾಲ್ಲೂಕಿನ ವರದನಾಯಕನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ವಿಶೇಷವಾದ ಒಬ್ಬಟ್ಟಿನ ಸಮಾರಾಧನೆ ನಡೆಯಿತು. ಒಬ್ಬಟ್ಟನ್ನು ತಯಾರಿಸಿದ್ದು ಶಾಲಾಭಿವೃದ್ಧಿಯ ಮಹಿಳಾ ಸದಸ್ಯರು, ಗ್ರಾಮದ ಮಹಿಳೆಯರು, ಅಂಗನವಾಡಿ, ಅಡುಗೆ ಸಿಬ್ಬಂದಿ ಮತ್ತು ಶಿಕ್ಷಕಿಯರು. ಸುಮಾರು 600 ಒಬ್ಬಟ್ಟುಗಳನ್ನು ಮಹಿಳೆಯರು ಒಗ್ಗೂಡಿ ಸಿದ್ಧಪಡಿಸಿದ್ದು ವಿಶೇಷವಾಗಿತ್ತು.

ಶಿಡ್ಲಘಟ್ಟ ತಾಲ್ಲೂಕಿನ ವರದನಾಯಕನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಗ್ರಾಮದ ಮಹಿಳೆಯರು ಒಬ್ಬಟ್ಟಿನ ತಯಾರಿಯಲ್ಲಿ ತೊಡಗಿರುವುದು.

ವರದನಾಯಕನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಶಾರದಾ ಪೂಜೆಯನ್ನು ಆಯೋಜಿಸಲಾಗಿತ್ತು. ಒಂದರಿಂದ ಏಳನೆಯ ತರಗತಿಯವರೆಗಿನ ಶಾಲೆಯಲ್ಲಿ ಈ ಬಾರಿ ನಿರ್ಗಮಿಸುವ ಮಕ್ಕಳಿಗೆ ಶುಭ ಕೋರುವ ಕಾರ್ಯಕ್ರಮವೂ ಇತ್ತು. ಈ ವಿಶೇಷ ಸಂದರ್ಭಕ್ಕೆ ಸಿಹಿ ತಯಾರಿಸಲು ಮಹಿಳೆಯರು ಒಗ್ಗೂಡಿದರು. ಬೆಳಿಗ್ಗೆ 6 ಗಂಟೆಗೆ ಶಾಲೆಗೆ ಆಗಮಿಸಿದ ಮಹಿಳೆಯರು ಮಧ್ಯಾಹ್ನ 1 ಗಂಟೆಯ ಹೊತ್ತಿಗೆ ರುಚಿರುಚಿಯಾಗಿ 600 ಒಬ್ಬಟ್ಟು, ಚಿತ್ರಾನ್ನ, ಹಪ್ಪಳ, ಎರಡು ರೀತಿಯ ಪಲ್ಯ, ಕೋಸಂಬರಿ, ಅನ್ನ, ಸಾರು ಸಿದ್ಧಪಡಿಸಿಬಿಟ್ಟಿದ್ದರು.
ಶಾಲಾಭಿವೃದ್ಧಿಯ ಮಹಿಳಾ ಸದಸ್ಯೆಯರಾದ ನೇತ್ರ, ಕಲಾವತಿ, ಆನಂದಮ್ಮ, ಪೋಷಕರಾದ ಚಂದ್ರಕಲಾ, ಲಕ್ಷ್ಮೀದೇವಮ್ಮ, ದೀಪಿಕಾ, ಮಮತಾ, ವಜ್ರಮ್ಮ, ಶೋಭಾ, ಅಡುಗೆಯವರಾದ ಭಾರತಮ್ಮ, ರಾಧಮ್ಮ, ಅಂಗನವಾಡಿಯ ಶಶಿಕಲಾ, ಅನುಸೂಯಮ್ಮ, ಶಿಕ್ಷಕಿಯರಾದ ವನಜಾಕ್ಷಿ, ವರಲಕ್ಷ್ಮಿ ಒಗ್ಗೂಡಿ ಕೆಲಸಗಳನ್ನು ಹಂಚಿಕೊಂಡು ಅಡುಗೆ ತಯಾರಿಸಿದರು.
ಶಿಡ್ಲಘಟ್ಟ ತಾಲ್ಲೂಕಿನ ವರದನಾಯಕನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಗ್ರಾಮದ ಮಹಿಳೆಯರು ಒಬ್ಬಟ್ಟಿನ ತಯಾರಿಯಲ್ಲಿ ತೊಡಗಿರುವುದು.

ಶಾರದಾ ಪೂಜೆಯನ್ನು ಮಾಡಿ, ಏಳನೆಯ ತರಗತಿಯ ವಿದ್ಯಾರ್ಥಿಗಳಿಗೆ ಸಿಆರ್‌ಪಿ ಶ್ರೀನಿವಾಸರೆಡ್ಡಿ, ಬಿಆರ್‌ಪಿ ರಾಜು, ಶಾರದಮ್ಮ ಹಿತವಚನಗಳನ್ನು ಹೇಳಿದರು. ಪೋಷಕರಿಗೆ ನಡೆಸಿದ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ನಂತರ ನೂರು ಮಂದಿ ಮಕ್ಕಳೊಂದಿಗೆ ಗ್ರಾಮದ ಮಹಿಳೆಯರು, ಪೋಷಕರು, ಶಾಲೆಯ ಶಿಕ್ಷಕರು, ಸಿಬ್ಬಂದಿ, ಸುತ್ತಮುತ್ತಲಿನ ಶಾಲಾ ಶಿಕ್ಷಕರು ಶಾಲೆಯ ಆವರಣದಲ್ಲಿ ಸಾಲಾಗಿ ಕುಳಿತು ಭೋಜನ ಮಾಡಿದರು.
‘ನೂರು ಮಂದಿ ಮಕ್ಕಳಿರುವ ವರದನಾಯಕನಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟದಲ್ಲೂ ತಿನ್ನುವ ಬಗ್ಗೆ ನಿರ್ಬಂಧವಿಲ್ಲ. ಈ ದಿನ ಇನ್ನೂ ಸಡಿಲಗೊಳಿಸಿ ಒಬ್ಬಟ್ಟನ್ನು ಹೆಚ್ಚು ತಿನ್ನುವವರಿಗೆ ಬಹುಮಾನ ಎಂದು ಪ್ರೋತ್ಸಾಹಿಸಿದೆವು. ನಮ್ಮ ಮನೆಗಳಲ್ಲಿ ನಮ್ಮ ಮಟ್ಟಿಗೆ ಮಾತ್ರ ಅಡುಗೆ ಮಾಡಿಕೊಳ್ಳುತ್ತೇವೆ. ಆದರೆ ನಮ್ಮೂರ ಶಾಲೆಯಲ್ಲಿ ಶಿಕ್ಷಕರು ಒದಗಿಸುವ ಅವಕಾಶದಿಂದ ಎಲ್ಲಾ ಮಕ್ಕಳಿಗೂ ನಾವೆಲ್ಲಾ ಮಹಿಳೆಯರು ಒಗ್ಗಟ್ಟಿನಿಂದ ಒಬ್ಬಟ್ಟು ತಯಾರಿಸಿದ್ದೇವೆ. ವಿವಿಧ ಖಾದ್ಯಗಳನ್ನು ತಯಾರಿಸಿ ಮಕ್ಕಳಿಗೆ ಹೊಟ್ಟೆ ತುಂಬಾ ತಿನ್ನಿಸುವ ಖುಷಿಗೆ ಬೆಲೆ ಕಟ್ಟಲಾಗದು. ಮಕ್ಕಳ ಸಂತೋಷ ಮತ್ತು ಸಂಭ್ರಮ ಕಂಡಾಗ ನಮ್ಮ ಶ್ರಮ ಸಾರ್ಥಕವೆನಿಸುತ್ತದೆ’ ಎಂದು ಕಲಾವತಿ ತಿಳಿಸಿದರು.

error: Content is protected !!