Home News ಸರ್ಕಾರ ಕಣ್ಣು ತೆರೆಯದಿದ್ದಲ್ಲಿ ನಮ್ಮ ಹೋರಾಟದಿಂದ ಕಣ್ತೆರೆಸುತ್ತೇವೆ

ಸರ್ಕಾರ ಕಣ್ಣು ತೆರೆಯದಿದ್ದಲ್ಲಿ ನಮ್ಮ ಹೋರಾಟದಿಂದ ಕಣ್ತೆರೆಸುತ್ತೇವೆ

0

ವಿಷಪೂರಿತ ನೀರನ್ನು ಕುಡಿಯುತ್ತಾ ನರಳುತ್ತಿರುವ ಜಿಲ್ಲೆಗೆ ಸರ್ಕಾರ ಶಾಶ್ವತ ನೀರನ್ನು ಕಲ್ಪಿಸದಿದ್ದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಶಾಶ್ವತ ನೀರಾವರಿ ಹೋರಾಟ ಸಮಿತಿಯ ಮುಖಂಡ ಮಳ್ಳೂರು ಹರೀಶ್‌ ಎಚ್ಚರಿಕೆ ನೀಡಿದರು.
ತಾಲ್ಲೂಕಿನ ನಾಗಮಂಗಲ, ತೊಟ್ಲಗಾನಹಳ್ಳಿ, ತಾದೂರು, ಬಸವಾಪಟ್ಟಣ, ಮಳಮಾಚನಹಳ್ಳಿ, ಭಕ್ತರಹಳ್ಳಿ, ಮೇಲೂರು, ಚೌಡಸಂದ್ರ, ಮಳ್ಳೂರು ಗ್ರಾಮಗಳಲ್ಲಿ ಜಲಜಾಗೃತಿ ಪಾದಯಾತ್ರೆಯನ್ನು ಕೈಗೊಂಡು ಶನಿವಾರ ಅವರು ಮಾತನಾಡಿದರು.
ವಿಷಯುಕ್ತ ಫ್ಲೋರೈಡ್ ನಿಂದಾಗಿ ಜಾನುವಾರುಗಳು ಕೃಷವಾಗಿವೆ. ತಾಯಿಯ ಹಾಲು, ಹಣ್ಣು, ತರಕಾರಿಗಳಲ್ಲೂ ಫ್ಲೋರೈಡ್ ಇರುವುದು ಪತ್ತೆಯಾಗಿದೆ. ತುರ್ತಾಗಿ ನೀರಾವರಿ ಯೋಜನೆ ರೂಪಿಸದಿದ್ದಲ್ಲಿ ನಮ್ಮ ಭಾಗದ ಜನರಿಗೆ ಭವಿಷ್ಯವಿಲ್ಲ. ಒಂದೋ ವಲಸೆ ಹೋಗಬೇಕು, ಇಲ್ಲವಾದಲ್ಲಿ ಖಾಯಿಲೆ ಬಂದು ಸಾಯಬೇಕು. ಜನರಿಗೆ ನಮ್ಮ ಸಂದಿಗ್ಧ ಸ್ಥಿತಿಯ ಮನವರಿಕೆ ಮಾಡಿಕೊಡುತ್ತಿದ್ದೇವೆ. ಸರ್ಕಾರ ಕಣ್ಣು ತೆರೆಯದಿದ್ದಲ್ಲಿ ನಮ್ಮ ಹೋರಾಟದಿಂದ ಕಣ್ತೆರೆಸಬೇಕಾಗುತ್ತದೆ ಎಂದು ಹೇಳಿದರು.
ಶಾಶ್ವತ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷ ಆರ್‌.ಆಂಜನೇಯರೆಡ್ಡಿ ಮಾತನಾಡಿ, ಕೋಲಾರ ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಕುಡಿಯುವ ನೀರು ಹಾಗೂ ಕೃಷಿಗಾಗಿ ನೀರಾವರಿ ಯೋಜನೆಗೆ ಆಗ್ರಹಿಸಿ ಅಕ್ಟೋಬರ್‌ 2 ರ ಗಾಂಧಿ ಜಯಂತಿಯ ದಿನದಿಂದ ಪ್ರಾರಂಭಿಸಿ ಜನಜಾಗೃತಿ ಮತ್ತು ಜಲಜಾಗೃತಿ ಪಾದಯಾತ್ರೆ ನಡೆಸುತ್ತಿದ್ದೇವೆ. ರೈತರೊಂದಿಗೆ ನಗರಪ್ರದೇಶದ ವಿದ್ಯಾವಂತ ಯುವಸಮೂಹ, ಹಾಲು ಉತ್ಪಾದಕರ ಸಹಕಾರಿಗಳು, ಸ್ತ್ರೀಶಕ್ತಿ ಸಂಘಗಳು ನಮ್ಮೊಂದಿಗೆ ಕೈಜೋಡಿಸಿದ್ದಾರೆ. ಬಯಲುಸೀಮೆಯ ಪ್ರತೊಯೊಂದು ಕುಟುಂಬವೂ ಹೋರಾಟದಲ್ಲಿ ಭಾಗಿಯಾದಾಗ ಮಾತ್ರ ನಮ್ಮ ನೀರಿನ ಹಕ್ಕನ್ನು ಪಡೆಯಲು ಸಾಧ್ಯ. ಈಗ ನಾವು ಹೋರಾಡದಿದ್ದಲ್ಲಿ ಮುಂದಿನ ಪೀಳಿಗೆಗೆ ಭವಿಷ್ಯವಿಲ್ಲದಂತಾಗುತ್ತದೆ. ಪ್ರತಿಯೊಬ್ಬರೂ ಜಾತ್ಯಾತೀತವಾಗಿ ಪಕ್ಷಾತೀತವಾಗಿ ನೀರಿಗಾಗಿ ಹೋರಾಡುವ ಅಗತ್ಯತೆಯಿದೆ ಎಂದು ಹೇಳಿದರು.
ಶಾಶ್ವತ ನೀರಾವರಿ ಹೋರಾಟ ಸಮಿತಿಯ ಮುಖಂಡ ಯಲುವಳ್ಳಿ ಸೊಣ್ಣೇಗೌಡ ಮಾತನಾಡಿ ಅಂತರ್ಜಲ ಕುಸಿಯುತ್ತಿರುವ ಪರಿಣಾಮ ಕೃಷಿಯಾಧಾರಿತ ನಮ್ಮ ಜೆಲ್ಲೆಗಳು ಬಂಜರಾಗುತ್ತಿವೆ. ರೈತರು ಸಾಲಗಾರರಾಗುತ್ತಿದ್ದಾರೆ. ನೀರನ್ನು ಕೊಂಡು ಬೇಸಾಯ ಮಾಡುತ್ತಿದ್ದಾರೆ. ಇಂಥಹ ಸ್ಥಿತಿಯನ್ನು ತಲುಪಿರುವ ನಮ್ಮ ಬಗ್ಗೆ ಸರ್ಕಾರ ನಿರ್ಲಕ್ಷ್ಯ ಧೋರಣೆ ಅನುಸರಿಸಿರುವುದು ಖಂಡನೀಯ. ಕೃಷಿಕರು ತಮ್ಮ ಮಕ್ಕಳನ್ನು ನಗರಕ್ಕೆ ಕಳುಹಿಸುತ್ತಿರುವ ದುರಂತದ ಬದುಕನ್ನು ನಡೆಸುವಂತಾಗಿದೆ ಎಂದು ನುಡಿದರು.
ರೈತಸಂಘದ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ತಾದೂರು ರಮೇಶ್‌, ತಾದೂರು ಮಂಜುನಾಥ್‌, ತಮ್ಮಣ್ಣ, ರಾಮೇಗೌಡ, ಕೋದಂಡಪ್ಪ, ಚಂದ್ರಪ್ಪ, ವೆಂಕಟರಾಜು, ಮುನಿರಾಜು, ಟಿ.ವಿ.ಕೃಷ್ಣಪ್ಪ, ಚನ್ನಪ್ಪ, ಮುನಿನಾರಾಯಣಪ್ಪ, ಕನಕರಾಜು, ಪಿಳ್ಳಚಂದ್ರೇಗೌಡ, ಉಮೇಶ್‌ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.