Home News ಸವಲತ್ತುಗಳನ್ನು ಸದ್ಭಳಕೆ ಮಾಡಿಕೊಳ್ಳಿ

ಸವಲತ್ತುಗಳನ್ನು ಸದ್ಭಳಕೆ ಮಾಡಿಕೊಳ್ಳಿ

0

ಸರ್ಕಾರದಿಂದ ಸಿಗುವ ಎಲ್ಲಾ ಸವಲತ್ತುಗಳನ್ನು ಸದ್ಭಳಕೆ ಮಾಡಿಕೊಳ್ಳುವ ಮೂಲಕ ಪರಿಶಿಷ್ಠ ಜಾತಿ ಹಾಗೂ ಪಂಗಡದ ಜನತೆ ಆರ್ಥಿಕವಾಗಿ ಮತ್ತಷ್ಟು ಸಬಲರಾಗಬೇಕು ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ಗುರುವಾರ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ ಹಾಗು ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಸಹಾಯಧನದ ಚೆಕ್‌ಗಳ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪರಿಶಿಷ್ಟ ಜಾತಿ ಹಾಗು ಪಂಗಡದ ಜನತೆ ಆರ್ಥಿಕವಾಗಿ ಎಲ್ಲರಂತೆ ಸಮಾನವಾಗಬೇಕು ಎಂಬ ದೃಷ್ಟಿಯಿಂದ ಸರ್ಕಾರ ನಿಗಮದ ಮೂಲಕ ಆರ್ಥಿಕ ನೆರವು ನೀಡುತ್ತಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಜಿಲ್ಲಾ ಪಂಚಾಯ್ತಿ ಸದಸ್ಯ ಬಂಕ್ ಮುನಿಯಪ್ಪ ಮಾತನಾಡಿ, ಬಯಲುಸೀಮೆ ಭಾಗದ ಜನರು ಕುಡಿಯುವ ನೀರಿಗೂ ಪರತಪಿಸುವ ಸ್ಥಿತಿಗೆ ತಲುಪಿದ್ದು ಇರುವ ತುಂಡು ಭೂಮಿಯಲ್ಲಿ ಕೃಷಿ ಮಾಡಲಾಗದೇ ಸಂಕಷ್ಟಕ್ಕೀಡಾಗಿದ್ದಾರೆ. ಪರಿಶಿಷ್ಟ ಜಾತಿ ಹಾಗು ಪಂಗಡದ ಜನರು ಕೊಳವೆಬಾವಿ ಕೊರೆಸಲು ಸರ್ಕಾರ ಮೂರು ಲಕ್ಷ ರೂ ಗಂಗಾ ಕಲ್ಯಾಣ ಯೋಜನೆಯಡಿ ನೀಡುತ್ತಿದೆ. ಉಳಿದಂತೆ ಹಸು ಸಾಕಾಣಿಕೆ, ಕುರಿಸಾಕಾಣಿಕೆ, ಸ್ವಯಂ ಉದ್ಯೋಗ ಕೈಗೊಳ್ಳಲು ಸಾಲ ಹಾಗು ಸಹಾಯಧನ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಎಲ್ಲರೂ ಇದರ ಸದುಪಯೋಗ ಪಡಿಸಿಕೊಂಡು ಆರ್ಥಿಕವಾಗಿ ಮುಂದುವರೆಯಬೇಕು ಎಂದರು.
ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ಎಚ್,ನರಸಿಂಹಯ್ಯ, ಗ್ರಾಮ ಪಂಚಾಯ್ತಿ ಉಪಾಧ್ಯಕ್ಷರಾದ ತುಮ್ಮನಹಳ್ಳಿ ಸುರೇಂದ್ರ, ಕುಂದಲಗುರ್ಕಿ ಆಂಜಿನಪ್ಪ, ಮುಖಂಡರಾದ ಬೈರಾರೆಡ್ಡಿ, ಗಂಜಿಗುಂಟೆ ನರಸಿಂಹಮೂರ್ತಿ, ಡಿ.ಟಿ.ನಾರಾಯಣಸ್ವಾಮಿ ಹಾಜರಿದ್ದರು.

error: Content is protected !!