Home News ಸಹಕಾರಿ ಸಂಘಗಳ ಸಹಾಯಕ ನಿಬಂಧಕರಾಗಿ ಭಕ್ತರಹಳ್ಳಿಯ ಬಿ.ವಿ.ಗಂಗಾಧರ್ ಆಯ್ಕೆ

ಸಹಕಾರಿ ಸಂಘಗಳ ಸಹಾಯಕ ನಿಬಂಧಕರಾಗಿ ಭಕ್ತರಹಳ್ಳಿಯ ಬಿ.ವಿ.ಗಂಗಾಧರ್ ಆಯ್ಕೆ

0

ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸಹಕಾರಿ ಸಂಘಗಳ ಉಪ‌ ನಿಬಂಧಕರಾಗಿ ಶಿಡ್ಲಘಟ್ಟ ತಾಲ್ಲೂಕಿನ ಭಕ್ತರಹಳ್ಳಿಯ ಬಿ.ವಿ.ಗಂಗಾಧರ್ ಆಯ್ಕೆಯಾಗಿದ್ದಾರೆ. ಸೋಮವಾರದಿಂದ ಅವರು ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸುವರು.
ರೈತ ಕುಟುಂಬದ, ಗ್ರಾಮೀಣ ಹಿನ್ನೆಲೆಯವರಾದ ಭಕ್ತರಹಳ್ಳಿಯ ಬಿ.ವಿ.ಗಂಗಾಧರ್, ತಮ್ಮ ಪ್ರಾಥಮಿಕ ಮತ್ತು ಪ್ರೌಢಶಾಲೆಯನ್ನು ಓದಿದ್ದು ಭಕ್ತರಹಳ್ಳಿಯ ಬಿ.ಎಂ.ವಿ ಶಾಲೆಯಲ್ಲಿ. ಪಿಯುಸಿಯನ್ನು ಮಳ್ಳೂರಿನ ಸ್ವಾಮಿ ವಿವೇಕಾನಂದ ಕಾಲೇಜಿನಲ್ಲಿ ಓದಿದ ನಂತರ ಬಿ.ಎಸ್.ಸಿ (ಎಜಿ) ವ್ಯಾಸಂಗ ಮಾಡಿದ್ದಾರೆ.
2011 ರಲ್ಲಿಯೇ ಕೆಪಿಎಸ್‌ಸಿ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರೂ, ಆಗಿನ ರಾಜಕೀಯ ಕಾರಣಗಳಿಂದಾಗಿ ಆಯ್ಕೆ ಪಟ್ಟಿಯೇ ರದ್ದುಪಡಿಸಲಾಗಿತ್ತು. 2015 ರಲ್ಲಿ ಪುನಃ ಕೆಪಿಎಸ್‌ಸಿ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಈ ನಡುವೆ ಐ.ಎ.ಎಸ್ ಪ್ರಾಥಮಿಕ ಹಂತವನ್ನು ಪೂರೈಸಿ 2012 ರಲ್ಲಿ ಅಸಿಸ್ಟೆಂಟ್ ಕಮ್ಯಾಂಡೆಟ್ ಕೂಡ ಆಗುವ ಹಂತದಲ್ಲಿದ್ದರು. ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿ ನಡೆದ ಸಂದರ್ಶನಕ್ಕೆ ಹಾಜರಾಗಿದ್ದರು. ಇದೀಗ ಸಹಕಾರಿ ಸಂಘಗಳ ಸಹಾಯಕ ನಿಬಂಧಕರಾಗಿ ಆಯ್ಕೆಯಾಗಿರುವ ಆದೇಶ ಪ್ರತಿ ಲಭಿಸಿದೆ. ಸೋಮವಾರದಿಂದ ತಮ್ಮ ಸೇವೆಯನ್ನು ಪ್ರಾರಂಭಿಸಲಿದ್ದಾರೆ.
“ಬೆಂಗಳೂರಿನಲ್ಲಿ ಟಾಪರ್ ಐ.ಎ.ಎಸ್ ಎಂಬ ಶಿಕ್ಷಣ ಸಂಸ್ಥೆಯಲ್ಲಿ ಪಾಠ ಮಾಡುತ್ತಾ, ಓದುತ್ತಾ ಪರೀಕ್ಷೆಗೆ ಸಿದ್ಧತೆ ಮಾಡಿಕೊಂಡೆ. ಬಾಲ್ಯದಿಂದಲೇ ಪ್ರಾಮಾಣಿಕತೆ ಹಾಗೂ ವೈಚಾರಿಕತೆಯನ್ನು ಕಲಿಸಿದ ನನ್ನ ಬಿ.ಎಂ.ವಿ.ಶಾಲೆಯ ವಾತಾವರಣ, ಹಾಗೂ ಮುಂದಿನ ಹಂತದಲ್ಲಿ ಕಲಿಯುತ್ತಾ ಸಾಗಿದಂತೆ ಗುರಿಯು ಕಾಣಹತ್ತಿತು. ನನ್ನ ಚಿಕ್ಕಪ್ಪ ಬಿ.ಎಂ.ವಿ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಎಲ್.ಕಾಳಪ್ಪ ನನ್ನ ವಿದ್ಯಾಭ್ಯಾಸಕ್ಕೆ ಆರ್ಥಿಕ ಬೆಂಬಲ ನೀಡಿದರು. ನನ್ನ ನಿರಂತರ ಅಧ್ಯಯನ, ಪರಿಶ್ರಮ, ಜ್ಞಾನ ಸಂಪಾದನೆ, ಪಾಠ ಮಾಡುತ್ತಿದ್ದುದು ಸಹಕಾರಿಯಾಯಿತು. ಕೃಷಿ ಕುಟುಂಬದ ಹಿನ್ನೆಲೆಯಿಂದ ಬಂದಿರುವುದರಿಂದ ಕಷ್ಟದ ಅರಿವಿದೆ” ಎಂದು ಭಕ್ತರಹಳ್ಳಿಯ ಬಿ.ವಿ.ಗಂಗಾಧರ್ ತಿಳಿಸಿದರು.

error: Content is protected !!