Home News ಸಹಕಾರಿ ಸಪ್ತಾಹ ಸಮಾರಂಭ

ಸಹಕಾರಿ ಸಪ್ತಾಹ ಸಮಾರಂಭ

0

ಸಹಕಾರಿ ಸಂಘವು ಅಭಿವೃದ್ಧಿಯ ಹಾದಿಯಲ್ಲಿ ಸಾಗಿ ತನ್ನ ವ್ಯಾಪ್ತಿಯನ್ನು ಗ್ರಾಮೀಣ ಅಭಿವೃದ್ಧಿಯತ್ತ ಕೊಂಡೊಯ್ಯಬೇಕಾದರೆ ಜನತೆಯ ಸಹಕಾರ ಅತ್ಯಗತ್ಯವಾಗಿದೆ ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ಪಟ್ಟಣದ ಭೂ ಅಭಿವೃದ್ಧಿ ಬ್ಯಾಂಕಿನ ಆವರಣದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಸಹಕಾರಿ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಪ್ರತಿಯೊಂದು ಸಹಕಾರ ಸಂಘಗಳ ಮುಖಾಂತರ ಹಳ್ಳಿಗಳ ಅಭಿವೃದ್ಧಿಯಾಗಬೇಕು. ಸಹಕಾರಿ ಸಂಘಗಳಲ್ಲಿ ರಾಜಕೀಯ ಪ್ರವೇಶಕ್ಕೆ ಅವಕಾಶ ನೀಡಬಾರದು. ಸುಮಾರು ೧೧೦ ವರ್ಷಗಳ ಇತಿಹಾಸವಿರುವ ಸಹಕಾರಿ ಕ್ಷೇತ್ರದ ಉದ್ದೇಶ ಶೋಷಣೆ ರಹಿತ ಸಮಾಜ ನಿರ್ಮಾಣ, ಬಡತನ ನಿವಾರಣೆ, ಸ್ವಾವಲಂಬನೆಗೆ ಒತ್ತು ನೀಡುವುದಾಗಿದೆ. ಸಹಕಾರಿ ಸಂಘದ ಮುಖಾಂತರ ಸ್ವಚ್ಚತೆಯನ್ನು ಕಾಪಾಡುವಂತಹ ಕಾರ್ಯಕ್ರಮಗಳನ್ನು ಆಯೋಜನೆ ಮಾಡಬೇಕು. ಸಹಕಾರಿ ಸಂಘಗಳ ಮೂಲಕ ಗ್ರಾಮಾಂತರ ಪ್ರದೇಶಗಳಲ್ಲಿ ಲಾಭಯುತ ವ್ಯಾಪಾರಗಳನ್ನು ನಡೆಸಬೇಕು ಎಂದು ಹೇಳಿದರು.
ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ನಿರ್ದೇಶಕ ಬಂಕ್ಮುನಿಯಪ್ಪ ಮಾತನಾಡಿ, ಸಹಕಾರ ಸಂಘಗಳು ಜನರ ಅಭಿವೃದ್ದಿಯ ಕಡೆಗೆ ಹೆಚ್ಚು ಗಮನ ನೀಡಬೇಕು. ಹಾಲಿನ ಡೈರಿಗಳಲ್ಲಿ ಗುಣಮಟ್ಟದ ಹಾಲನ್ನು ಪೂರೈಕೆ ಮಾಡುವ ಮುಖಾಂತರ ಸಹಕಾರಿ ಕ್ಷೇತ್ರದಲ್ಲಿ ಕ್ರಾಂತಿಯನ್ನು ಉಂಟುಮಾಡಬೇಕು. ಹಾಲಿನ ಗುಣಮಟ್ಟದಲ್ಲಿ ಶೇ ೯೬ ರಷ್ಟು ಚೇತರಿಕೆ ಕಂಡಿದ್ದು, ಅವಿಭಾಜ್ಯ ಜಿಲ್ಲೆಯಲ್ಲಿ ನಮ್ಮ ತಾಲ್ಲೂಕು ಮೂರನೇ ಸ್ಥಾನದಲ್ಲಿದೆ. ಮುಂದಿನ ದಿನಗಳಲ್ಲಿ ಶೇ ೧೦೦ ರಷ್ಟು ಗುಣಮಟ್ಟವನ್ನು ಕಾಪಾಡಿ ತಾಲ್ಲೂಕಿಗೆ ಕೀರ್ತಿ ತರಬೇಕು ಎಂದರು.
ಈ ಸಂದರ್ಭದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಅಭಿವೃದ್ಧಿಯತ್ತ ಕೊಂಡೊಯ್ದಿರುವ ವಂಟೂರು, ಸೀತಹಳ್ಳಿ, ಆನೆಮಡುಗು, ಚೀಮಂಗಲ, ಕುಂದಲಗುರ್ಕಿ, ಜಂಗಮಕೋಟೆ ಸಂಘಗಳ ಅಧ್ಯಕ್ಷರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಸಹಕಾರ ಒಕ್ಕೂಟದ ಉಪಾಧ್ಯಕ್ಷ ಎಚ್.ವಿ.ನಾಗರಾಜ್, ನಿರ್ದೇಶಕ ರಮೇಶ್, ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕರಾದ ಪಿ.ವಿ.ನಾಗರಾಜ್, ಪಿ.ಶಿವಾರೆಡ್ಡಿ, ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಎ.ರಾಮಚಂದ್ರಪ್ಪ, ಆರ್.ವಿ.ಜಯದೇವ್, ವ್ಯವಸ್ಥಾಪಕ ಸಿ.ಮುನಿಯಪ್ಪ, ಹಾಲು ಒಕ್ಕೂಟದ ಉಪವ್ಯವಸ್ಥಾಪಕ ಕೆ.ಜಿ.ಈಶ್ವರಯ್ಯ, ಸಹಕಾರ ಸಂಘಗಳ ಉಪನಿಬಂಧಕಿ ಬಿ.ಜಿ.ಮಂಜುಳಾ, ಸಹಾಯಕ ನಿಬಂಧಕ ಆರಿಫ್ ಉಲ್ಲಾ ಆಸೀಫ್, ವ್ಯವಸ್ಥಾಪಕ ಆರ್. ಲಿಂಗರಾಜು, ನಿರ್ದೇಶಕರಾದ ಎಂ.ಎನ್.ಶಶಿಧರ್, ಲಕ್ಷ್ಮೀಪತಿ, ಕೆ.ಎನ್.ಬಿ.ರೆಡ್ಡಿ ಮುಂತಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.