Home News ಸಹಾಯ ಸೌಲಭ್ಯ ಕಡಿತ – ರೇಷ್ಮೆ ಕೃಷಿಕರ ತೀವ್ರ ಆಕ್ರೋಶ

ಸಹಾಯ ಸೌಲಭ್ಯ ಕಡಿತ – ರೇಷ್ಮೆ ಕೃಷಿಕರ ತೀವ್ರ ಆಕ್ರೋಶ

0

ಬೆಳಗಾವಿ ಅಧಿವೇಶನದಲ್ಲಿ ರೇಷ್ಮೆ ಕೃಷಿಕರ ಸಮಸ್ಯೆಗಳನ್ನು ಪ್ರಸ್ತಾಪಿಸಲು ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಸರ್ಕಾರದ ಗಮನಕ್ಕೆ ತರುವ ನಿಟ್ಟಿನಲ್ಲಿ ಜಿಲ್ಲಾ ರೇಷ್ಮೆ ಕೃಷಿ ಹಿತರಕ್ಷಣಾ ವೇದಿಕೆ ವತಿಯಿಂದ ಪಟ್ಟಣದ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಗುರುವಾರ ಕುಂದು ಕೊರತೆಗಳ ಸಭೆಯನ್ನು ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಸರ್ಕಾರವು ರೇಷ್ಮೆ ಕೃಷಿಕರ ಸಹಾಯ ಧನ ಸೌಲಭ್ಯವನ್ನು ಕಡಿತಗೊಳಿಸಿರುವ ರೈತ ವಿರೋಧಿ ನೀತಿಗೆ ಒಕ್ಕೊರಲಿನಿಂದ ಆಕ್ರೋಶ ವ್ಯಕ್ತವಾಯಿತು.
ಈ ಸಂದರ್ಭದಲ್ಲಿ ವಿಷಯ ಪ್ರಸ್ತಾಪಿಸಿದ ರೇಷ್ಮೆ ಕೃಷಿ ಹಿತರಕ್ಷಣಾ ವೇದಿಕೆಯ ಸಂಚಾಲಕ ಯಲುವಹಳ್ಳಿ ಸೊಣ್ಣೇಗೌಡ ಮಾತನಾಡಿ, ಈ ಜಿಲ್ಲೆಗಳಲ್ಲಿ ರೇಷ್ಮೆ ಕೃಷಿಯು ಕೃಷಿಕರ ಪಾಲಿಗೆ ಕಲ್ಪವೃಕ್ಷದಂತಿದೆ. ಇತ್ತೀಚಿಗೆ ಸರ್ಕಾರವು ರೇಷ್ಮೆ ಕೃಷಿ ಇಲಾಖೆಯಿಂದ ಕೊಡುತ್ತಿದ್ದ ಸಹಾಯಧನ ಸೌಲಭ್ಯವನ್ನು ಶೇಕಡಾ ೫೦ ರಷ್ಟು ಕಡಿತಗೊಳಿಸಿ, ಈ ಸೌಲಭ್ಯವನ್ನು ಪಡೆಯಲು ದ್ವಿತಳಿ ರೇಷ್ಮೆ ಗೂಡನ್ನು ಬೆಳೆಯಬೇಕೆಂಬ ನಿಯಮ ರೂಪಿಸಿರುವುದರಿಂದ ರೈತರು ಸಹಾಯಧನ ಸೌಲಭ್ಯ ಪಡೆಯುವಲ್ಲಿ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ದ್ವಿತಳಿ ರೇಷ್ಮೆ ಬೆಳೆಯು ಅತ್ಯಂತ ಸೂಕ್ಷ್ಮ ಬೆಳೆಯಾಗಿದ್ದು, ಇದರಲ್ಲಿ ರೋಗವನ್ನು ತಡೆದುಕೊಳ್ಳುವ ಶಕ್ತಿ ಕಡಿಮೆ ಇರುವುದರಿಂದ ಪದೇ ಪದೇ ಬೆಳೆಗಳು ವಿಫಲವಾಗುತ್ತಿದ್ದು, ರೈತನಿಗೆ ನಷ್ಟವಾಗುತ್ತಿದೆ. ಇಲಾಖೆಯು ದ್ವಿತಳಿ ರೇಷ್ಮೆ ಗೂಡನ್ನು ಬೆಳೆಯಬೇಕೆಂಬ ಕಡ್ಡಾಯ ನಿಯಮವನ್ನು ಸಡಿಲಿಸಿ ಪ್ರೋತ್ಸಾಹ ಧನ ಮತ್ತು ಸಹಾಯಧನವನ್ನು ಎಲ್ಲಾ ರೈತರಿಗೂ ತಲುಪುವಂತೆ ಮಾಡುವುದರಿಂದ ರೇಷ್ಮೆ ಬೆಳೆಗಾರರಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.
ರಾಜ್ಯ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಭಕ್ತರಹಳ್ಳಿ ಭೈರೇಗೌಡ ಮಾತನಾಡಿ, ಬರಗಾಲದ ಜಿಲ್ಲೆಗಳಾದ ನಮ್ಮ ಜಿಲ್ಲೆಗಳಲ್ಲಿ ಹನಿನೀರಾವರಿ ಅಳವಡಿಸಿಕೊಂಡ ಎಲ್ಲಾ ರೈತರಿಗೆ ಯಾವುದೇ ಮಿತಿ ನಿಗಧಿಪಡಿಸದೇ ಸೌಲಭ್ಯವನ್ನು ಈ ಹಿಂದಿನಂತೆ ನೀಡಬೇಕಾಗಿದೆ. ಅದೇ ರೀತಿಯಾಗಿ ಸಲಕರಣೆಗಳಿಗೆ ಕೊಡುತ್ತಿದ್ದ ಸಹಾಯಧನ ಸೌಲಭ್ಯವನ್ನು ಈ ಹಿಂದಿನಂತೆ ನೀಡಲು ಕ್ರಮ ಕೈಗೊಂಡು ಕೂಲಿಗಾರರ ಸಮಸ್ಯೆಯನ್ನು ಹೋಗಲಾಡಿಸಲು ಮಿನಿ ಟ್ರ್ಯಾಕ್ಟರ್, ಸೊಪ್ಪು ಕಟಾವು ಯಂತ್ರ, ಕಳೆ ತೆಗೆಯುವ ಸಾಧನ, ಸ್ಪ್ರೇಯರ್, ಜನರೇಟರ್, ಪ್ಲಾಸ್ಟಿಕ್ ತಟ್ಟೆಗಳು ಇತರೆ ಸಾಮಾಗ್ರಿಗಳನ್ನು ಈ ಹಿಂದಿನಂತೆ ಸಹಾಯಧನ ಸೌಲಭ್ಯ ಕಲ್ಪಿಸಿ ರೈತರಿಗೆ ವಿತರಿಸಲು ಕ್ರಮ ಕೈಗೊಳ್ಳಬೇಕಿದೆ ಎಂದರು.
ನೂಲು ಬಿಚ್ಚಾಣಿಕೆದಾರರಾದ ಮಹಮದ್ ಅನ್ವರ್‌ರವರು ಮಾತನಾಡಿ ಕೆ.ಎಸ್.ಎಂ.ಬಿ.ಯಲ್ಲಿ ಬಿಡುಗಡೆಯಾದ ಹಣವನ್ನು ಪ್ರತ್ಯೇಕವಾಗಿ ಮೀಸಲಿರಿಸಿ ಕಚ್ಚಾ ರೇಷ್ಮೆ ಕುಸಿತ ಕಂಡಾಗ ಬೆಂಬಲ ಬೆಲೆಯಾಗಿ ಮತ್ತು ಒತ್ತೆ ಸಾಲದ ರೂಪದಲ್ಲಿ ಬಳಸಿಕೊಳ್ಳಬೇಕು. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರ ಪಹಣಿಗಳನ್ನು ಪರಿಗಣಿಸಿ ಬಂಗಾರದ ಮೇಲೆ ಕೊಡುವ ಕಡಿಮೆ ಬಡ್ಡಿ ಸಾಲದ ವಿಧಾನದಂತೆ ನೂಲು ಬಿಚ್ಚಾಣಿಕೆದಾರರಿಗೆ ಅವರ ಪರವಾನಗಿಯನ್ನು ಪಹಣಿಯಂತೆ ಪರಿಗಣಿಸಿ ಬಂಗಾರದ ಮೇಲೆ ಕಡಿಮೆ ಬಡ್ಡಿಯಲ್ಲಿ ಸಾಲ ಕೊಡುವ ಯೋಜನೆ ರೂಪಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಬಹುತೇಕ ರೈತರು ಅಸಮಾಧಾನ ವ್ಯಕ್ತಪಡಿಸಿ ಮಿಶ್ರತಳಿ ಗೂಡಿಗೆ ಕೊಡುತ್ತಿರುವ ಒಂದು ಕೆ.ಜಿ.ಗೆ ೩೦ ರೂ. ದ್ವಿತಳಿ ಗೂಡಿಗೆ ೫೦ ರೂ. ಸಹಾಯ ಧನವನ್ನು ಆಗಸ್ಟ್ ನಂತರ ಘೋಷಿಸಲಾಗಿದ್ದು, ಸರ್ಕಾರವು ಈವರೆಗೂ ಹಣ ಬಿಡುಗಡೆ ಮಾಡದೇ ಇರುವುದರಿಂದ ಅನವಶ್ಯಕವಾಗಿ ರೈತರು ಇಲಾಖೆಯ ಬಾಗಿಲಿಗೆ ತಮ್ಮ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಅಲೆದಾಡಬೇಕಿದೆ. ಇಂತಹ ಯೋಜನೆಗಳನ್ನು ಜಾರಿಗೆ ತರುವುದನ್ನು ವಿರೋಧಿಸಿ ಈ ಯೋಜನೆಯನ್ನು ಸಂಪೂರ್ಣ ನಿಲ್ಲಿಸುವಂತೆ ಆಗ್ರಹಿಸಿದರು.
ಈ ಸಂಧರ್ಭದಲ್ಲಿ ಮಳ್ಳೂರು ಹರೀಶ್, ಸೊಣ್ಣೇನಹಳ್ಳಿ ನಾರಾಯಣಸ್ವಾಮಿ, ತಾದೂರು ಮಂಜುನಾಥ್, ಭಾಸ್ಕರ್ ರೆಡ್ಡಿ, ಮಳಮಾಚನಹಳ್ಳಿ ದೇವರಾಜ್, ಸೊಣ್ಣೇನಹಳ್ಳಿ ನಿರಂಜನ್, ಅಬ್ಲೂಡು ದೇವರಾಜ್, ಮಳ್ಳೂರು ನಾರಾಯಣಸ್ವಾಮಿ, ಮುತ್ತೂರು ಭೈರೇಗೌಡ, ರೀಲರುಗಳಾದ ಅಹಮದ್ ಅಜೀಜ್, ಸಮೀವುಲ್ಲಾ, ಜಗದೀಶ್, ಪದ್ಮನಾಭ್ ಮುಂತಾದವರು ಹಾಜರಿದ್ದರು.