Home News ಸಾಂಪ್ರದಾಯಿಕ ಹಾಡುಗಾರ್ತಿ ಶಾಂತಮ್ಮಳಿಗೆ ಸಂದ ಜನಪದ ಪ್ರಶಸ್ತಿ

ಸಾಂಪ್ರದಾಯಿಕ ಹಾಡುಗಾರ್ತಿ ಶಾಂತಮ್ಮಳಿಗೆ ಸಂದ ಜನಪದ ಪ್ರಶಸ್ತಿ

0

ತಾಲ್ಲೂಕಿನ ಮಳ್ಳೂರು ಗ್ರಾಮದ ಜಿ.ಶಾಂತಮ್ಮ ಅವರಿಗೆ ಕರ್ನಾಟಕ ಜಾನಪದ ಅಕಾಡೆಮಿಯ ೨೦೧೭-೧೮ನೇ ಸಾಲಿನ ಅಕಾಡೆಮಿ ಪ್ರಶಸ್ತಿ ಲಭಿಸಿದೆ.
ಹೆಣ್ಮಕ್ಕಳು ಮೈ ನೆರೆದಾಗ ಹಾಕುವ ವಸಗೆ, ಮಧುವಣಗಿತ್ತಿಗೆ ಅರಿಶಿಣ ಹಚ್ಚುವ ಸಂಭ್ರಮದಲ್ಲಿ, ನವ ವಧು ವರರು ಮನೆಗೆ ಮೊದಲ ಸಲ ಬಂದಾಗ ಹಾಡುವ ಸೋಬಾನೆ ಪದಗಳ ಕಣಜ ಜಿ.ಶಾಂತಮ್ಮಳಿಗೆ ಈ ಪ್ರಶಸ್ತಿ ದೊರೆತಿರುವುದಕ್ಕೆ ಮಳ್ಳೂರು ಗ್ರಾಮ ಸೇರಿದಂತೆ ತಾಲೂಕಿನಾಧ್ಯಂತ ಸಂಭ್ರಮ ಮನೆ ಮಾಡಿದೆ.
೭ನೇ ತರಗತಿಯಷ್ಟೆ ಓದಿದ ೬೦ ವರ್ಷದ ಶಾಂತಮ್ಮ ೫ನೇ ತರಗತಿ ಓದುತ್ತಿರುವಾಗಲೆ ತಮ್ಮ ತಾಯಿಯಿಂದಲೆ ಸೋಬಾನೆ ಪದಗಳನ್ನು ಕಲಿತು ಹಾಡಲು ಮುಂದಾಗಿದ್ದು ಇದುವರೆಗಿನ ಐದು ದಶಕಗಳ ಸುಧೀರ್ಘ ಪಯಣದಲ್ಲಿ ಸಾವಿರಾರು ಕಾರ್ಯಕ್ರಮಗಳಲ್ಲಿ ತಮ್ಮ ಸೋಬಾನೆ ಪದಗಳ ಕಂಪನ್ನು ಹರಿಸಿದ್ದಾರೆ.
ಮಳ್ಳೂರಿನಲ್ಲಿ ಯಾರೇ ಹೆಣ್ಮಕ್ಕಳು ಮೈ ನೆರೆದಾಗ ಹಾಕುವ ವಸಗೆ, ಮಧುವಣಗಿತ್ತಿಗೆ ಅರಿಶಿಣ ಹಚ್ಚುವ ಸಂಭ್ರಮ, ನವ ವಧು ವರರು ಮನೆಗೆ ಮೊದಲ ಸಲ ಬಂದಾಗ ಸೋಬಾನೆ ಪದಗಳನ್ನು ಹಾಡಲು ಈ ಶಾಂತಮ್ಮನೇ ಬೇಕು.
ಮಳ್ಳೂರಿನಲ್ಲಷ್ಟೆ ಅಲ್ಲ ಆ ಊರಿನ ಬಂಧು ಬಳಗದವರ ಮನೆಗಳಲ್ಲಿ ನಡೆಯುವ ವಸಗೆ, ಮದುವೆ, ಚಪ್ಪರ, ಅರಿಶಿಣ ಹಚ್ಚುವ ಕಾರ್ಯ ನಡೆದರೆ ಅಲ್ಲಿ ಶಾಂತಮ್ಮ ಇರಲೇಬೇಕು ಆಕೆಯ ಸೋಬಾನೆ ಸಾಂಪ್ರದಾಯಿಕ ಹಾಡು ಹಾಡಲೇಬೇಕು.
ಅಷ್ಟರ ಮಟ್ಟಿಗೆ ಶಾಂತಮ್ಮ ನಮ್ಮ ಈ ನೆಲದ ಸೊಗಡಿನ ಜನಪದ, ಸೋಬಾನೆ, ಸಾಂಪ್ರದಾಯಿಕ ಪದಗಳು, ಹಾಡುಗಳನ್ನು ಹಾಡುತ್ತಾ ಉಳಿಸಿ ಬೆಳೆಸುತ್ತಾ ಬಂದಿದ್ದಾರೆ.
ಮನೆಯಲ್ಲಿ ಕಸ ಗುಡಿಸಲಿ, ಧನಕರುಗಳಿಗೆ ಮೇವು ಹಾಕಲಿ, ಕೋಳಿಗಳಿಗೆ ರಾಗಿ ಕಾಳು ಹಾಕುತ್ತಿರಲಿ, ಗಿಡಗಳಿಗೆ ನೀರು ಹಾಯಿಸುತ್ತಿರಲಿ ಶಾಂತಮ್ಮಳ ಬಾಯಲ್ಲಿ ಸೋಬಾನೆ ಪದಗಳ ಸರಿಗಮಪದಗಳು ಸರಾಗವಾಗಿ ನುಲಿಯುತ್ತಲೆ ಇರುತ್ತವೆ.
ಅಂತಹ ಅಪ್ಪಟ ಹಳ್ಳಿ ಹೈದೆ ಗ್ರಾಮೀಣ ಸೊಗಡಿನ ಪ್ರತಿಭಾವಂತೆ ಶಾಂತಮ್ಮಳಿಗೆ ಜಾನಪದ ಅಕಾಡೆಮಿಯ ಪ್ರಶಸ್ತಿ ಸಂಧಿರುವುದು ಶಿಡ್ಲಘಟ್ಟ ತಾಲೂಕಿಗೆ ಹೆಮ್ಮೆ ಎನಿಸುತ್ತದೆ.