Home News ಸಾಧಕರ ದಾರಿಯಿಂದ ಪ್ರೇರಣೆ ಹೊಂದಬೇಕು – ಎಂ.ಪಾಪಿರೆಡ್ಡಿ

ಸಾಧಕರ ದಾರಿಯಿಂದ ಪ್ರೇರಣೆ ಹೊಂದಬೇಕು – ಎಂ.ಪಾಪಿರೆಡ್ಡಿ

0

ನಗರದ ನ್ಯಾಯಾಲಯದ ಸಂಕೀರ್ಣದಲ್ಲಿ ಶನಿವಾರ ತಾಲ್ಲೂಕು ವಕೀಲರ ಸಂಘದಿಂದ ಕರ್ನಾಟಕ ಆಡಳಿತಾತ್ಮಕ ನ್ಯಾಯಾಲಯದ ನ್ಯಾಯಾಂಗದ ಸದಸ್ಯರಾಗಿ ನೇಮಕಗೊಂಡಿರುವ ಹಿರಿಯ ವಕೀಲ ಟಿ.ನಾರಾಯಣಸ್ವಾಮಿ ಹಾಗೂ ನ್ಯಾಯಾಧೀಶೆಯಾದ ತಾಲ್ಲೂಕಿನ ಚಾಂದಿನಿ ಅವರನ್ನು ಸನ್ಮಾನಿಸಿ ತಾಲ್ಲೂಕು ವಕೀಲರ ಸಂಘದ ಗೌರವಾಧ್ಯಕ್ಷ ಎಂ.ಪಾಪಿರೆಡ್ಡಿ ಮಾತನಾಡಿದರು.
ತಾಲ್ಲೂಕಿಗೆ, ಜಿಲ್ಲೆಗೆ ಕೀರ್ತಿ ತಂದಿರುವ ಸಾಧಕರ ಮಾರ್ಗದರ್ಶನದಲ್ಲಿ ಹಾಗೂ ಇವರು ನಡೆದ ದಾರಿಯಿಂದ ಯುವ ವಕೀಲರು ಪ್ರೇರಣೆ ಹೊಂದಬೇಕು ಎಂದು ಅವರು ತಿಲಿಸಿದರು.
ನಮ್ಮ ನಡುವೆಯೇ ಇದ್ದವರು ಸಾಧನೆ ಮಾಡಿ ಉನ್ನತ ಸ್ಥಾನಕ್ಕೆ ತಲುಪಿದಾಗ ಅದು ನಿಜಕ್ಕೂ ಹೆಮ್ಮೆ ಪಡುವ ಸಂಗತಿ. ಇವರು ನಡೆದ ಹಾದಿ, ಪಟ್ಟ ಶ್ರಮ ಈಗಿನ ಯುವ ವಕೀಲರಿಗೆ ಮಾರ್ಗಸೂಚಿಯಂತೆ. ನಮ್ಮ ಜಿಲ್ಲೆಗೇ ಇವರು ಕೀರ್ತಿ ತಂದಿದ್ದಾರೆ ಎಂದರು.
ಹಿರಿಯ ವಕೀಲರಾಗಿದ್ದ ಟಿ.ನಾರಾಯಣಸ್ವಾಮಿ ಅವರದ್ದು ಹೋರಾಟದ ಹಾದಿ. ವಕೀಲರಾಗಿ ವೃತ್ತಿಯನ್ನು ಪ್ರಾರಂಭಿಸಿ, ನ್ಯಾಯಮೂರ್ತಿಗಳಾದ ಗೋಪಾಲಗೌಡರ ಕಚೇರಿಯಲ್ಲಿ. ಶಿಸ್ತು, ಬದ್ಧತೆ, ನ್ಯಾಯಪರತೆ, ಶ್ರಮ, ನಿಷ್ಠೆ ಮುಂತಾದ ಸದ್ಗುಣಗಳನ್ನು ಕಲಿತವರು. ಜಾತಿಯನ್ನು ಮೀರಿ ಸಮಾಜದ ಬಡವರಿಗೆ ನೆರವಾಗುವ ಮನಸ್ಸುಳ್ಳವರು. ಅವರ ಧ್ಯೇಯ ಮತ್ತು ನಿಷ್ಠೆಯ ಹಾದಿ ಅವರಿಗೆ ಉನ್ನತ ಸ್ಥಾನವನ್ನು ಕಲ್ಪಿಸಿದೆ.
ನಗರದ ಹಿರಿಯ ವಕೀಲ ಹಾಗೂ ನೋಟರಿ ಬಿ.ನೌಷಾದ್ ಅಲೀ ಮತ್ತು ನಿವೃತ್ತ ಎ.ಸಿ.ಡಿ.ಪಿ.ಒ ಎಸ್‌.ಕೆ.ತಾಜುನ್ನಿಸಾ ದಂಪತಿಯ ಪುತ್ರಿ ಎನ್‌.ಚಾಂದಿನಿ ಅವರು ಮಾಸ್ಟರ್‌ ಆಫ್‌ ಲಾ ನಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಗಳಿಸಿದ್ದರು. ಈಗ ನ್ಯಾಯಾಧೀಶರ ಪರೀಕ್ಷೆಯನ್ನು ತೇರ್ಗಡೆ ಹೊಂದುವ ಮೂಲಕ ನಮ್ಮ ತಾಲ್ಲೂಕಿಗೇ ಕೀರ್ತಿಯನ್ನು ತಂದಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲ್ಲೂಕು ವಕೀಲರ ಸಂಘದಿಂದ ನ್ಯಾಯಾಲಯದ ನ್ಯಾಯಾಂಗದ ಸದಸ್ಯರಾಗಿ ನೇಮಕಗೊಂಡಿರುವ ಹಿರಿಯ ವಕೀಲ ಟಿ.ನಾರಾಯಣಸ್ವಾಮಿ ಮತ್ತು ಅವರ ಪತ್ನಿ ಎನ್.ಡಿ.ರಮಾದೇವಿ ಹಾಗೂ ನ್ಯಾಯಾಧೀಶೆ ಚಾಂದನಿ ಅವರನ್ನು ಸನ್ಮಾನಿಸಲಾಯಿತು.
ಹಿರಿಯ ಸಿವಿಲ್ ನ್ಯಾಯಾಧೀಶರಾದ ಡಿ.ಆರ್.ಮಂಜುನಾಥ್, ಸಿವಿಲ್ ನ್ಯಾಯಾಧೀಶರಾದ ಸಂಜುಕುಮಾರ್ ಎ.ಪಚ್ಚಾಪುರೆ, ಡಿ.ರೋಹಿಣಿ, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಟಿ.ವಿ.ಚಂದ್ರಶೇಖರಗೌಡ, ವಕೀಲರಾದ ಪಾಟೀಲ್, ಲೋಕೇಶ್, ಬೈರಾರೆಡ್ಡಿ, ಸಿ.ಜಿ.ಭಾಸ್ಕರ್ ಹಾಜರಿದ್ದರು.

error: Content is protected !!