Home News ಸಾಮಾಜಿಕ ಜವಾಬ್ದಾರಿ ಮೂಡಿಸುವುದು ನೈಜ ಶಿಕ್ಷಣ – ಸಾಹಿತಿ ಪ್ರಶಾಂತ್ ರಾಮಸ್ವಾಮಿ

ಸಾಮಾಜಿಕ ಜವಾಬ್ದಾರಿ ಮೂಡಿಸುವುದು ನೈಜ ಶಿಕ್ಷಣ – ಸಾಹಿತಿ ಪ್ರಶಾಂತ್ ರಾಮಸ್ವಾಮಿ

0

ಕನ್ನಡ ಸಾರಸ್ವತ ಪರಿಚಾರಿಕೆ ಶಿಡ್ಲಘಟ್ಟ ಮತ್ತು ಕೇಂದ್ರ ಗ್ರಂಥಾಲಯ ಸಹಯೋಗದೊಂದಿಗೆ ನಗರದ ಸಾರ್ವಜನಿಕ ಗ್ರಂಥಾಲಯದಲ್ಲಿ ಭಾನುವಾರ ನಡೆದ ‘ಓದಿನ ಅರಮನೆಯಲ್ಲಿ ಪುಸ್ತಕ ಪರಿಚಯ’ 15 ನೇ ತಿಂಗಳ ಕಾರ್ಯಕ್ರಮದಲ್ಲಿ ಸಾಹಿತಿ ಪ್ರಶಾಂತ್ ರಾಮಸ್ವಾಮಿ ಮಾತನಾಡಿದರು.
ಶಿಕ್ಷಿತರು ಅಂದರೆ ಕೇವಲ ಅಕ್ಷರ ಕಲಿತವರಲ್ಲ. ಸಾಮಾಜಿಕ ಜವಾಬ್ದಾರಿಯನ್ನು ಹೊಂದಿದವರು ಎಂಬುದಾಗಿದೆ. ಕೇವಲ ಕೆಲಸಕ್ಕೆ ಅನ್ನದ ಮಾರ್ಗಕ್ಕೆ ಸಹಕಾರಿಯಾದುದು ಶಿಕ್ಷಣವಲ್ಲ. ನಮ್ಮೊಳಗೆ ಸಾಮಾಜಿಕ ಜವಾಬ್ದಾರಿ ಮೂಡಿಸುವುದು ನೈಜ ಶಿಕ್ಷಣ. ಅಂತಹ ಶಿಕ್ಷಣ ಮಕ್ಕಳಿಗೆ ಸಿಕ್ಕಾಗ ಮಾತ್ರ ಅಭಿವೃದ್ಧಿ ಕಾಣಬಹುದು ಎಂದು ಅವರು ಅಭಿಪ್ರಾಯಪಟ್ಟರು.
“ಸರ್ಕಾರಿ ಶಾಲಾ ಕಾಲೇಜುಗಳಿಗೆ ಮಕ್ಕಳನ್ನು ಸೇರಿಸುವ ಮೂಲಕ ಪ್ರೋತ್ಸಾಹಿಸಬೇಕು. ಶಿಕ್ಷಣ ಕ್ಷೇತ್ರವು ವ್ಯಾಪಾರಕ್ಕಾಗಿ ಅಲ್ಲ ಸೇವೆಗಾಗಿ ಮೀಸಲಿಡಬೇಕು. ಶಿಕ್ಷಕರು ಶಿಲೆಯನ್ನು ಕೆತ್ತುವ ಶಿಲ್ಪಿಗಳಂತೆ ಮಕ್ಕಳ ವ್ಯಕ್ತಿತ್ವವನ್ನು ಅರಳಿಸಬಲ್ಲರು. ನಮ್ಮ ಶಿಕ್ಷಕರ ಪ್ರೋತ್ಸಾಹದಿಂದಾಗಿ ಪಿಯುಸಿ ಓದುವ ಸಮಯದಲ್ಲಿಯೇ ಕವನ ಸಂಕಲನವನ್ನು ಹೊರತಂದೆ. ಓದುವ ಹವ್ಯಾಸವನ್ನು ಬೆಳೆಸಿಕೊಂಡೆ. ಜೀವನವನ್ನು ರೂಪಿಸಿಕೊಳ್ಳಲು ಮಾರ್ಗದರ್ಶನ ಮಾಡಿರುವ ಶಿಕ್ಷಕ ವೃಂದದವರಿಗೆ ಗೌರ್ವ ಸೂಚಿಸುವ ಸಲುವಾಗಿ ನಾನು ಪದವಿಯ ಕೊನೆಯ ವರ್ಷದಲ್ಲಿದ್ದಾಗ “ಆಚಾರ್ಯದೇವೋಭವ” ಎಂಬ ಪುಸ್ತಕವನ್ನು ಹೊರತಂದೆ” ಎಂದು ಹೇಳಿದರು.
“ಸಾಮಾಜಿಕ ಜಾಲತಾಣಗಳು ಈಗ ಪ್ರತಿಯೊಬ್ಬರನ್ನೂ ಮುಟ್ಟುವ ಮಾಧ್ಯಮವಾಗಿದೆ. ನಮ್ಮ ಬರಹವನ್ನು ಅತ್ಯಂತ ವೇಗವಾಗಿ ನಮ್ಮ ಸ್ನೇಹ ವೃಂದವನ್ನು ತಲುಪುತ್ತದೆ. ಮೊಬೈಲ್, ಇಂಟರ್ನೆಟ್, ವ್ಯಾಟ್ಸಪ್, ಫೇಸ್ ಬುಕ್ ಮುಂತಾದವುಗಳನ್ನು ಸಕಾರಾತ್ಮಕವಾಗಿ ಬಳಸಿಕೊಳ್ಳಬೇಕು. ಇಂಗ್ಲೆಂಡ್ ನಲ್ಲಿ ಓದಿ ಬಂದಿದ್ದರಿಂದ ವಿದೇಶದ ಶಿಕ್ಷಣದ ಗುಣಮಟ್ಟ, ಅವರು ನೀಡುವ ಆದ್ಯತೆಗಳು, ನಮ್ಮ ದೇಶೀ ಶಿಕ್ಷಣದ ಉದ್ದೇಶವನ್ನು ಸಮ್ಮಿಳಿತಗೊಳಿಸಿ ಮುಂದಿನ ದಿನಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಉದ್ದೇಶವಿದೆ” ಎಂದರು.
ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಮಾತನಾಡಿ, ಪುಸ್ತಕದಿಂದ ದೊರೆಯುವ ಜ್ಞಾನ ಮುಕುಟದ ಮಣಿಯಂತೆ, ಗಿಡದಲ್ಲಿ ಸುಂದರ ಹೂ ಹೊರಬರುವಂತೆ ಅಂತರಂಗದಿಂದ ಜ್ಞಾನವು ಹೊರಬರಬೇಕು ಎಂದು ಡಿ.ವಿ.ಜಿ ಅವರು ಹೇಳಿರುವ ಮಾತು ಸಾರ್ವಕಾಲಿಕ. ಸೃಜನಶೀಲ ಬರಹಗಾರರನ್ನು ಓದುಗರೊಂದಿಗೆ ಮುಖಾಮುಖಿ ಮಾಡಿ ಜ್ಞಾನವನ್ನು ಬೆಳಗಿಸುವುದು ನಮ್ಮ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ನುಡಿದರು.
ಕನ್ನಡ ಸಾರಸ್ವತ ಪರಿಚಾರಿಕೆ ಖಾಜಾಂಚಿ ಸತೀಶ್ ಮಾತನಾಡಿ, ಒಳ್ಳೆಯದನ್ನು ಮೆಚ್ಚುವುದು ಕೂಡ ಒಂದು ಉತ್ತಮ ಸಂಸ್ಕಾರ. ಓದುವ ಹವ್ಯಾಸವನ್ನು ರೂಢಿಸಿಕೊಳ್ಳಿ, ಬರಹ ಇಷ್ಟವಾದರೆ ಮೆಚ್ಚುಗೆಯ ಮಾತನ್ನು ಆಡಿ, ಇನ್ನಷ್ಟು ಮಂದಿಗೆ ಓದಲು ಪ್ರೇರೇಪಿಸಿ. ಅದುವೇ ನಾವು ಲೇಖಕರಿಗೆ ಸಲ್ಲಿಸಬಹುದಾದ ಗೌರವ ಎಂದರು.
ಸಾಹಿತಿ ಪ್ರಶಾಂತ್ ರಾಮಸ್ವಾಮಿ ಗ್ರಂಥಾಲಯಕ್ಕೆ ತಮ್ಮ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದರು. ಕನ್ನಡ ಸಾರಸ್ವತ ಪರಿಚಾರಿಕೆ ವತಿಯಿಂದ ಸಾಹಿತಿ ಪ್ರಶಾಂತ್ ರಾಮಸ್ವಾಮಿ ಅವರನ್ನು ಸನ್ಮಾನಿಸಲಾಯಿತು.
ಗ್ರಂಥಪಾಲಕಿ ರಾಮಲೀಲ, ಸಹಾಯಕಿ ಬಾಂಧವ್ಯ, ಚಿತ್ರನಟ ಸಿ.ಎನ್‌. ಮುನಿರಾಜು, ಬೆಳ್ಳೂಟಿ ರಮೇಶ್, ಕಿರಣ್, ವಿ.ಆರ್.ನರಸಿಂಹರಾಜು, ಮುಕ್ತಾರ್ ಅಹಮದ್ ಖಾನ್, ಲಕ್ಷ್ಮೀಕಾಂತ್, ನಾಗರಾಜ್, ಅಬ್ದುಲ್ಲ, ಗೋಪಾಲಕೃಷ್ಣ, ರೋಹನ್, ಮಧುಸೂದನ್ ಹಾಜರಿದ್ದರು.

error: Content is protected !!