Home News ಸಾಮೂಹಿಕ ವಿವಾಹಗಳು ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಪೂರಕ

ಸಾಮೂಹಿಕ ವಿವಾಹಗಳು ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಪೂರಕ

0

ಸಾಮೂಹಿಕವಾಗಿ ನಡೆಯುವ ವಿವಾಹಗಳಲ್ಲಿ ಸಮಾನತೆ ಇದ್ದು ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಪೂರಕವಾಗಿದೆ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದ ಸ್ವಾಮೀಜಿ ತಮ್ಮ ಆಶೀರ್ವಚನದಲ್ಲಿ ತಿಳಿಸಿದರು.
ತಾಲ್ಲೂಕಿನ ತಲಕಾಯಲಬೆಟ್ಟದ ಶ್ರೀ ಲಕ್ಷ್ಮೀವೆಂಕಟರಮಣಸ್ವಾಮಿ ಸನ್ನಿಧಿಯಲ್ಲಿ ಗುರುವಾರ ಎಸ್‌ಎನ್‌ಕ್ರಿಯಾ ಟ್ರಸ್ಟ್‌ ವತಿಯಿಂದ ಆಯೋಜಿಸಿದ್ದ ಉಚಿತ ಸಾಮೂಹಿಕ ವಿವಾಹದಲ್ಲಿ ಹೊಸ ಜೀವನಕ್ಕೆ ಕಾಲಿಟ್ಟ 73 ವಧೂವರರನ್ನು ಆಶೀರ್ವದಿಸಿ ಅವರು ಮಾತನಾಡಿದರು.
ವಿವಾಹವು ಸರಳವಾಗಿರಬೇಕು. ದುಂದು ವೆಚ್ಚಕ್ಕೆ ಕಡಿವಾಣವಿರಲಿ. ಆಧುನಿಕ ಯುಗದಲ್ಲಿ ವರದಕ್ಷಿಣೆ ಭೂತದಿಂದ ತಪ್ಪಿಸಲು ಈ ರೀತಿಯ ಉಚಿತ ಸಾಮೂಹಿಕ ಮದುವೆ ಕಾರ್ಯ ಅತ್ಯಂತ ಮಹತ್ವ ಪಡೆಯುತ್ತದೆ. ಇದರಿಂದ ದುಂದು ವೆಚ್ಚ ತಡೆಯಲು ಅನುಕೂಲವಾಗಿದೆ. ಪರಸ್ಪರ ಭಿನ್ನಾಭಿಪ್ರಾಯ ಮರೆತು, ವಿಶ್ವಾಸದಿಂದ ನಡೆದು ಆತ್ಮಸಾಕ್ಷಿಗೆ ಅನುಗುಣವಾಗಿ ಹೊಂದಾಣಿಕೆಯ ಜೀವರ ರೂಪಿಸಿಕೊಳ್ಳುವಂತೆ ನವದಂಪತಿಗಳಿಗೆ ಅವರು ಕಿವಿ ಮಾತು ಹೇಳಿದರು.

ಶಿಡ್ಲಘಟ್ಟ ತಾಲ್ಲೂಕಿನ ತಲಕಾಯಲಬೆಟ್ಟದ ಶ್ರೀ ಲಕ್ಷ್ಮೀವೆಂಕಟರಮಣಸ್ವಾಮಿ ಸನ್ನಿಧಿಯಲ್ಲಿ ಗುರುವಾರ ಎಸ್‌ಎನ್‌ಕ್ರಿಯಾ ಟ್ರಸ್ಟ್‌ ವತಿಯಿಂದ ಆಯೋಜಿಸಿದ್ದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದ ಸ್ವಾಮೀಜಿ ಅಂಗವಿಕಲ ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ನೀಡಿದರು. ತಹಶೀಲ್ದಾರ್‌ ಅಜಿತ್‌ಕುಮಾರ್‌ ರೈ, ಶಾಶ್ವತ ನೀರಾವರಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಆಂಜನೇಯರೆಡ್ಡಿ, ಆನೂರು ದೇವರಾಜ್‌, ಭಕ್ತರಹಳ್ಳಿ ಬೈರೇಗೌಡ ಹಾಜರಿದ್ದರು.

ಎಸ್‌ಎನ್‌ಕ್ರಿಯಾ ಟ್ರಸ್ಟ್‌ ಅಧ್ಯಕ್ಷ ಆಂಜಿನಪ್ಪ ಮಾತನಾಡಿ, ಸ್ವಾಮೀಜಿಗಳ ಸಮ್ಮುಖದಲ್ಲಿ ಮತ್ತು ಶ್ರೀ ಲಕ್ಷ್ಮೀವೆಂಕಟರಮಣಸ್ವಾಮಿ ಸನ್ನಿಧಿಯಲ್ಲಿ ನವಜೀವನಕ್ಕೆ ಅಡಿ ಇಡುವವರ ಭವಿಷ್ಯದ ದಾಂಪತ್ಯ ಬದುಕಿನಲ್ಲಿ ಶಾಂತಿ ನೆಮ್ಮದಿ ದೊರೆಯುತ್ತದೆ ಎಂದರು.
ತಹಶೀಲ್ದಾರ್‌ ಅಜಿತ್‌ಕುಮಾರ್‌ ರೈ ಮಾತನಾಡಿ ಈ ದಿನ ವಿವಾಹವಾದ ನವದಂಪತಿಗಳಿಗೆ ತಾಲ್ಲೂಕು ಕಚೇರಿಯಿಂದ ವಿವಾಹ ನೋಂದಣಿ ಪತ್ರವನ್ನು ನೀಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಸ್‌ಎನ್‌ಕ್ರಿಯಾ ಟ್ರಸ್ಟ್‌ ವತಿಯಿಂದ ಅಂಗವಿಕಲ ಹೆಣ್ಣು ಮಕ್ಕಳಿಗೆ ಉಚಿತವಾಗಿ ಹೊಲಿಗೆ ಯಂತ್ರಗಳನ್ನು ನೀಡಲಾಯಿತು. ಎಸ್‌ಎನ್‌ಕ್ರಿಯಾ ಟ್ರಸ್ಟ್‌ ಅಧ್ಯಕ್ಷ ಆಂಜಿನಪ್ಪ ಮತ್ತು ಅವರ ಪತ್ನಿ ನೂತನ ವಧೂವರರರಿಗೆ ಮಾಂಗಲ್ಯವನ್ನು ನೀಡಿದರು. ಸಾಮೂಹಿಕ ವಿವಾಹ ಸಮಾರಂಭಕ್ಕೆ ಆಗಮಿಸಿದ್ದ ಎಲ್ಲಾ ವಧೂವರರ ಸಂಬಂದಿಕರಿಗೂ ಭೋಜನ ವ್ಯವಸ್ಥೆಯನ್ನು ಮಾಡಲಾಗಿತ್ತು.
ಆದಿಚುಂಚನಗಿರಿ ಚಿಕ್ಕಬಳ್ಳಾಪುರ ಶಾಖಾ ಮಠದ ಮಂಗಳಾನಂದ ಸ್ವಾಮೀಜಿ, ತಹಶೀಲ್ದಾರ್‌ ಅಜಿತ್‌ಕುಮಾರ್‌ ರೈ, ಶಾಶ್ವತ ನೀರಾವರಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಆಂಜನೇಯರೆಡ್ಡಿ, ಆನೂರು ದೇವರಾಜ್‌, ಭಕ್ತರಹಳ್ಳಿ ಬೈರೇಗೌಡ, ಕೆಂಪರೆಡ್ಡಿ, ಪತಂಜಲಿ ಯೋಗ ಸಮಿತಿಯ ಶ್ರೀಕಾಂತ್‌, ಯರ್ರಬಚ್ಚಪ್ಪ, ನಂದನವನ ಶ್ರೀರಾಮರೆಡ್ಡಿ, ಕೋಟಹಳ್ಳಿ ಶ್ರೀನಿವಾಸ್‌, ಅಶ್ವತ್ಥನಾರಾಯಣರೆಡ್ಡಿ, ಶಾಂತಮ್ಮ, ಡಾ.ಪ್ರಮೋದ್‌, ದಾನೇಗೌಡ, ಸುಧಾ ನರಸಿಂಹಮೂರ್ತಿ, ರಾಜ್‌ಕುಮಾರ್‌ ಹಾಜರಿದ್ದರು.

error: Content is protected !!