Home News ಸಾರ್ವಜನಿಕವಾಗಿ ಗಣೇಶ ಪ್ರತಿಷ್ಠಾಪನೆಗೆ ಅನುಮತಿ ಖಡ್ಡಾಯ

ಸಾರ್ವಜನಿಕವಾಗಿ ಗಣೇಶ ಪ್ರತಿಷ್ಠಾಪನೆಗೆ ಅನುಮತಿ ಖಡ್ಡಾಯ

0

ಗಣಪತಿ ವಿಗ್ರಹಗಳನ್ನು ಸಾರ್ವಜನಿಕವಾಗಿ ಪ್ರತಿಷ್ಠಾಪನೆ ಮಾಡಲು ಇಚ್ಚಿಸುವವರು ಖಡ್ಡಾಯವಾಗಿ ಪೊಲೀಸ್, ನಗರಸಭೆ ಹಾಗೂ ಬೆಸ್ಕಾಂ ಇಲಾಖೆಯ ಅನುಮತಿಯನ್ನು ಪಡೆಯಬೇಕೆಂದು ದಿಬ್ಬೂರಹಳ್ಳಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ರಾಘವೇಂದ್ರ ತಿಳಿಸಿದರು.
ನಗರದ ದಿಬ್ಬೂರಹಳ್ಳಿ ರಸ್ತೆಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಶನಿವಾರ ಆಯೋಜನೆ ಮಾಡಲಾಗಿದ್ದ ಶಾಂತಿಸಭೆಯಲ್ಲಿ ಅವರು ಮಾತನಾಡಿದರು.
ಗಣೇಶನ ಹಬ್ಬದ ಆಚರಣೆಯ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಗಟ್ಟಲು ನಾಗರಿಕರು ಹೆಚ್ಚಿನ ಸಹಕಾರ ನೀಡಬೇಕು. ಪ್ರತಿವರ್ಷದಂತೆ ಈ ವರ್ಷವೂ ಕೂಡಾ ಗಣಪತಿ ವಿಗ್ರಹಗಳನ್ನು ಸಾರ್ವಜನಿಕವಾಗಿ ಪ್ರತಿಷ್ಠಾಪನೆ ಮಾಡುವವರು ಪೊಲೀಸ್, ನಗರಸಭೆ ಹಾಗೂ ಬೆಸ್ಕಾಂ ಇಲಾಖೆಯ ಅನುಮತಿಯನ್ನು ಪೊಲೀಸ್ ಠಾಣೆಯಲ್ಲೇ ಪಡೆದುಕೊಳ್ಳಬಹುದು. ಅನುಮತಿಯನ್ನು ಪಡೆಯದೆ ಪ್ರತಿಷ್ಠಾಪನೆಗೆ ಮುಂದಾದರೆ ಅಂತಹವರ ಮೇಲೆ ಕ್ರಮ ತೆಗೆದುಕೊಳ್ಳಲಾಗುತ್ತದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬರದಂತೆ ಹಬ್ಬವನ್ನು ಆಚರಿಸಬೇಕು ಎಂದು ನುಡಿದರು.
ಹನುಮಂತಪುರ ಗೇಟ್ ಬಳಿಯ ಕುಂಟೆಯನ್ನು ಗಣೇಶ ಮೂರ್ತಿಗಳ ವಿಸರ್ಜನೆಗಾಗಿ ಗುರುತಿಸಲಾಗಿದ್ದು, ಅಡೆತಡೆಗಳನ್ನು ನಿರ್ಮಿಸಲಾಗಿದೆ. ನಗರ ಹಾಗೂ ಹತ್ತಿರದ ಗ್ರಾಮಗಳ ಗಣೇಶ ಮೂರ್ತಿಗಳನ್ನು ಇಲ್ಲಿ ವಿಸರ್ಜನೆ ಮಾಡಿ. ಪರಿಸರ ಸ್ನೇಹಿ ಮಣ್ಣಿನ ಗಣಪನ ಮೂರ್ತಿಗಳನ್ನೇ ಬಳಸಿ. ಕೆಲವು ಹಳ್ಳಿಗಳಲ್ಲಿನ ನಾಗರಿಕರು ಒಂದು ಕಡೆ ಅನುಮತಿಯನ್ನು ಪಡೆದು ಕಾನೂನು ಬಾಹಿರವಾಗಿ ಮನಬಂದಂತೆ ಪ್ರತಿಷ್ಠಾಪನೆಗಳನ್ನು ಮಾಡುತ್ತಿರುವುದು ಕಂಡು ಬರುತ್ತಿದ್ದು, ಅಂತಹವರ ಮೇಲೆಯೂ ಕ್ರಮ ಕೈಗೊಂಡು ಕೇಸು ದಾಖಲಿಸಲಾಗುತ್ತದೆ ಎಂದು ಹೇಳಿದರು.
ಪ್ರತಿಷ್ಠಾಪನೆಯ ಸ್ಥಳ, ವಿಸರ್ಜನೆ ಮಾಡುವ ದಿನಾಂಕ, ಮೆರವಣಿಗೆ ಹೋದರೆ ಹೋಗುವ ಮಾರ್ಗ, ವಿಸರ್ಜನೆ ಮಾಡುವ ಸ್ಥಳ ಮುಂತಾದ ಅಗತ್ಯವಾದ ಮಾಹಿತಿಯನ್ನು ಪೊಲೀಸ್ ಠಾಣೆಗೆ ಕಡ್ಡಾಯವಾಗಿ ನೀಡಬೇಕು. ಸಂಜೆ ೬ ಗಂಟೆಯ ಒಳಗೆ ವಿಸರ್ಜನೆ ಮಾಡಬೇಕು. ರಾತ್ರಿಯಲ್ಲಿ ಹತ್ತು ಗಂಟೆಯ ನಂತರ ಧ್ವನಿವರ್ದಕಗಳನ್ನು ಬಳಕೆ ಮಾಡುವಂತಿಲ್ಲ. ಮೆರಣಿಗೆಯ ಸಮಯದಲ್ಲಿ ವಿನಾಕಾರಣ ಪಟಾಕಿಗಳನ್ನು ಸಿಡಿಸುವಂತಿಲ್ಲ. ವಿಸರ್ಜನೆಯ ವೇಳೆಯಲ್ಲಿ ನುರಿತ ಈಜುಪಟುಗಳನ್ನು ಜೊತೆಯಲ್ಲಿ ಇಟ್ಟುಕೊಂಡಿರಬೇಕು. ಗಣಪತಿಯ ಮೂರ್ತಿಗಳನ್ನು ವಿಸರ್ಜನೆ ಮಾಡುವ ಮುನ್ನಾ ನೀರಿನ ಆಳದ ಬಗ್ಗೆ ಗಮನಹರಿಸಬೇಕು. ಮೆರವಣಿಗೆಯಲ್ಲಿ ಪೊಲೀಸರೊಂದಿಗೆ ಸಹಕಾರ ನೀಡಬೇಕು ಎಂದರು.
ಬೆಸ್ಕಾಂ ಇಲಾಖೆಯ ಸಹಾಯಕ ಇಂಜಿನಿಯರ್ ಅನ್ಸರ್ಪಾಷಾ ಮಾತನಾಡಿ, ವಿದ್ಯುತ್ ಸಮಸ್ಯೆ ಕಾಡುತ್ತಿರುವುದರಿಂದ ಶಿಡ್ಲಘಟ್ಟ ತಾಲ್ಲೂಕಿಗೆ ಲಭ್ಯವಾಗುತ್ತಿರುವ ಕೇವಲ ೧೫ ಮೆ.ವ್ಯಾ. ವಿದ್ಯುತ್ತಿನಿಂದಾಗಿ ಈ ಬಾರಿಯ ಗಣೇಶನ ಹಬ್ಬಕ್ಕೆ ವಿದ್ಯುತ್ ಪೂರೈಕೆ ಅಸಾಧ್ಯವಾಗಿರುವುದರಿಂದ ವಿಗ್ರಹಗಳನ್ನು ಪ್ರತಿಷ್ಠಾಪನೆ ಮಾಡುವವರು, ಜನರೇಟರ್ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಬೆಸ್ಕಾಂ ಇಲಾಖೆಯಿಂದ ವಿದ್ಯುತ್ ನೀಡುವುದಿಲ್ಲ, ಒಂದು ವೇಳೆ ವಿದ್ಯುತ್ ತಂತಿಗಳಿಂದ ಅಕ್ರಮವಾಗಿ ಸಂಪರ್ಕ ಪಡೆದುಕೊಂಡರೆ, ಜಾಗೃತದಳದ ತಂಡ ಸಂಚಾರ ಮಾಡುತ್ತಿರುವುದರಿಂದ ಅಂತಹವರ ಮೇಲೆ ಕೇಸು ದಾಖಲಿಸಲಾಗುತ್ತದೆ. ಒಂದು ವೇಳೆ ಮೀಟರ್ಗಳಿಂದ ಸಂಪರ್ಕ ಪಡೆದುಕೊಂಡರೆ, ಸಾಮರ್ಥ್ಯ ಮೀರಿ ವಿದ್ಯುತ್ ದೀಪಗಳನ್ನು ಅಳವಡಿಸಬಾರದು ಎಂದು ಹೇಳಿದರು.
ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯ ಪಿ.ಎಸ್.ಐ ವಿಜಯ್, ಗ್ರಾಮಾಂತರ ಠಾಣೆಯ ಪಿ.ಎಸ್.ಐ ಪ್ರದೀಪ್ಪೂಜಾರಿ, ಬೆಸ್ಕಾಂ ಇಲಾಖೆಯ ಎಇಇ ಪರಮೇಶಪ್ಪ, ನಗರಸಭೆಯ ಆರೋಗ್ಯ ಇಲಾಖೆಯ ಬಾಲಚಂದ್ರ, ಎಂಜಿನಿಯರ್ ಪ್ರಸಾದ್, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ವಿವಿಧ ಗ್ರಾಮಗಳು ಹಾಗೂ ನಗರದ ನಾಗರಿಕರು ಈ ಸಂದರ್ಭದಲ್ಲಿ ಹಾಜರಿದ್ದರು.