Home News ಸಿಂಗಾಪೂರಿನ ದುಡಿದ ಹಣದಲ್ಲಿ ಗ್ರಾಮೀಣ ಮಕ್ಕಳಿಗೆ ಸಮವಸ್ತ್ರ

ಸಿಂಗಾಪೂರಿನ ದುಡಿದ ಹಣದಲ್ಲಿ ಗ್ರಾಮೀಣ ಮಕ್ಕಳಿಗೆ ಸಮವಸ್ತ್ರ

0

ಸಿಂಗಾಪೂರಿನಲ್ಲಿ ವಾಸಿಸುವ ಭಾರತೀಯ ಮೂಲದ ಹದಿನಾರು ವರ್ಷದ ಬಾಲಕಿ ನಂದಿನಿ ಐಯರ್ ಬೇಸಿಗೆ ರಜೆಯಲ್ಲಿ ದುಡಿದ ಹಣದಲ್ಲಿ ಶಾಲಾ ಮಕ್ಕಳಿಗೆ ಬಟ್ಟೆಗಳನ್ನು ನೀಡಲು ತಿಳಿಸಿದ್ದು ‘ನಮ್ಮ ಮುತ್ತೂರು’ ಸಂಸ್ಥೆ ಆಕೆಯ ಅಭಿಲಾಷೆಯನ್ನು ಪೂರೈಸುತ್ತಿದೆ ಎಂದು ನಿವೃತ್ತ ಸಮಾಜಶಾಸ್ತ್ರ ಪ್ರಾಧ್ಯಾಪಕಿ ಡಾ. ಖದೀಜಾ ಗುಪ್ತ ತಿಳಿಸಿದರು.
ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ನಡೆದ ಉಚಿತ ಸಮವಸ್ತ್ರ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೋಲಾರದ ಜಿಲ್ಲಾಧಿಕಾರಿಯಾಗಿದ್ದ ದಿವಂಗತ ಸಂಜೀವ್ ದಾಸ್‌ಗುಪ್ತ ಅವರ ನೆನೆಪಿಗಾಗಿ ‘ನಮ್ಮ ಮುತ್ತೂರು’ ಸಂಸ್ಥೆಯನ್ನು ಸ್ಥಾಪಿಸಿ ಆ ಮೂಲಕ ಹಲವಾರು ಸಾಮಾಜಿಕ ಕಾರ್ಯಗಳನ್ನು ನಡೆಸುತ್ತಿದ್ದೇವೆ. ನಮ್ಮ ಪರಿಚಿತ ಹಾಗೂ ಸ್ನೇಹಿತರಿಗೂ ಈ ರೀತಿಯ ಸಾಮಾಜಿಕ ಕೆಲಸಗಳಲ್ಲಿ ಕರೆತರುತ್ತಿರುವುದಾಗಿ ತಿಳಿಸಿದರು.
ಗ್ರಾಮ ಪಂಚಾಯಿತಿ ಸದಸ್ಯ ತ್ಯಾಗರಾಜು ಮಾತನಾಡಿ, ಸಮಾಜದಲ್ಲಿ ತುಂಬಾ ಶ್ರೀಮಂತರಿದ್ದೂ ಎಲ್ಲರೂ ಸಮಾಜ ಕಾರ್ಯಗಳನ್ನು ಮಾಡುವುದಿಲ್ಲ. ಕೆಲ ಮಂದಿ ಹೃದಯವಂತರು ಮಾತ್ರ ತಾವು ಸಂಪಾದಿಸಿದ ಹಣದಲ್ಲಿ ಸೇವೆಯನ್ನು ಮಾಡುತ್ತಾರೆ. ಹದಿನಾರು ವರ್ಷದ ಬಾಲಕಿ ವಿದೇಶದಲ್ಲಿ ವಾಸವಾಗಿದ್ದರೂ ನಮ್ಮ ಗ್ರಾಮೀಣ ಭಾಗದ ಮಕ್ಕಳ ಬಗ್ಗೆ ತುಡಿತ ಹೊಂದಿರುವುದುನಿಜಕ್ಕೂ ಶ್ಲಾಘನೀಯ. ಅಂಥಹವರ ಸಂಖ್ಯೆ ಹೆಚ್ಚಲಿ ಎಂದು ಆಶಿಸಿದರು.
ಚಿಕ್ಕಬಳ್ಳಾಪುರ ಮತ್ತು ಶಿಡ್ಲಘಟ್ಟ ತಾಲ್ಲೂಕಿ ದೊಡ್ಡಮರಳಿ, ಕೊಂಡೇನಹಳ್ಳಿ, ಶೆಟ್ಟಹಳ್ಳಿ, ಅಪ್ಪೇಗೌಡನಹಳ್ಳಿ ಸೇರಿದಂತೆ 8 ಸರ್ಕಾರಿ ಶಾಲೆಗಳ ಮಕ್ಕಳಿಗೆ ಸಮವಸ್ತ್ರವನ್ನು ಆಯಾ ಶಾಲೆಗಳ ಮುಖ್ಯ ಶಿಕ್ಷಕರಿಗೆ ಈ ಸಂದರ್ಭದಲ್ಲಿ ನೀಡಲಾಯಿತು.
‘ನಮ್ಮ ಮುತ್ತೂರು ಸಂಸ್ಥೆ’ಯ ಉಷಾಶೆಟ್ಟಿ , ಶಿಕ್ಷಣ ಇಲಾಖೆಯ ಜಿಲ್ಲಾ ಪರಿವೀಕ್ಷಕಿ ನಾಗರತ್ನಮ್ಮ, ಗ್ರಾಮ ಪಂಚಾಯಿತಿ ಸದಸ್ಯರಾದ ಉಮಾಚನ್ನೇಗೌಡ, ನೇತ್ರಾವತಿ, ಎಸ್.ಡಿ.ಎಂ.ಸಿ ಅಧ್ಯಕ್ಷೆ ಪುಷ್ಪರಾಮಚಂದ್ರ, ಶಾಲೆಯ ಶಿಕ್ಷಕರು ಮತ್ತು ಗ್ರಾಮಸ್ಥರು ಈ ಸಂದರ್ಭದಲ್ಲಿ ಹಾಜರಿದ್ದರು.