Home News ಸಿಟಿಜನ್ಸ್‌ ಸಿಲ್ಕ್‌ ರೀಲರ್ಸ್‌ ಕೈಗಾರಿಕಾ ಸಹಕಾರ ಸಂಘ ಉದ್ಘಾಟನೆ

ಸಿಟಿಜನ್ಸ್‌ ಸಿಲ್ಕ್‌ ರೀಲರ್ಸ್‌ ಕೈಗಾರಿಕಾ ಸಹಕಾರ ಸಂಘ ಉದ್ಘಾಟನೆ

0

ಸಹಕಾರ ಸಂಘವನ್ನು ಶಕ್ತಗೊಳಿಸುವ ಮೂಲಕ ರೇಷ್ಮೆಯನ್ನೇ ನಂಬಿ ಬದುಕುವವರಿಗೆ ಆರ್ಥಿಕ ಸುಭದ್ರತೆಯನ್ನು ಒದಗಿಸುವ ಕೆಲಸ ಮಾಡಬೇಕು ಎಂದು ಶಾಸಕ ವಿ.ಮುನಿಯಪ್ಪ ತಿಳಿಸಿದರು.
ನಗರದ ನಗರೇಶ್ವರ ಕಲ್ಯಾಣ ಮಂಟಪದಲ್ಲಿ ಗುರುವಾರ ಸಿಟಿಜನ್ಸ್‌ ಸಿಲ್ಕ್‌ ರೀಲರ್ಸ್‌ ಕೈಗಾರಿಕಾ ಸಹಕಾರ ಸಂಘವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಾವೆಲ್ಲಾ ಬೆಳೆದದ್ದು ಸಹಕಾರ ಸಂಘಗಳಿಂದಲೇ. ಸಹಕಾರ ಸಂಘಗಳ ನೀತಿ, ನಿಯಮ, ಧ್ಯೇಯೋದ್ದೇಶಗಳನ್ನು ಕಡ್ಡಾಯವಾಗಿ ಅಳವಡಿಸಿಕೊಂಡು ಪ್ರಾಮಾಣಿಕವಾಗಿ ಬೆಳೆಸಿದಲ್ಲಿ ಸಾವಿರಾರು ಕುಟುಂಬಗಳಿಗೆ ನೆರವಾಗಬಹುದು. ಸಾಲ ಕೊಡುವ ಶಕ್ತಿ ಬರುವುದರ ಜೊತೆಗೆ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಬಹುದು. ವೈದ್ಯನಾಥನ್ ಸಮಿತಿಯ ಶಿಫಾರಸುಗಳನ್ನು ಅನುಷ್ಠಾನಕ್ಕೆ ತಂದ ನಂತರ ಸಹಕಾರ ಸಂಸ್ಥೆಗಳು ಮರುಜೀವ ಪಡೆದಿವೆ. ಸಹಕಾರ ಸಂಘಕ್ಕೆ ಶೇರುದಾರರು ಹೆಚ್ಚಾಗಲಿ. ರೇಷ್ಮೆ ಉದ್ದಿಮೆ ಇದರಿಂದ ಶಕ್ತಿ ಪಡೆಯಲಿ ಮತ್ತು ರೈತರು, ರೀಲರುಗಳು ಹಾಗೂ ರೇಷ್ಮೆ ನಂಬಿ ಬದುಕುವವರಿಗೆ ಸಹಾಯವಾಗಲಿ ಎಂದು ಹೇಳಿದರು.
ಪ್ರಾರಂಭದ ಉತ್ಸಾಹ ಕಡೆಯವರೆಗೂ ಇರಲಿ. ತಕ್ಷಣ ಸಾಲ ಸಿಗುವ ಅವಕಾಶ ಕಷ್ಟದಲ್ಲಿರುವವರಿಗೆ ಸಿಗಲಿ. ಸಾಲವನ್ನು ಪ್ರಾಮಾಣಿಕವಾಗಿ ಹಿಂದಿರುಗಿಸಿದಲ್ಲಿ, ಇನ್ನಷ್ಟು ಜನರಿಗೆ ಸಾಲ ಸಿಗುವಂತಾಗುತ್ತದೆ. ಹಲವಾರು ಸಹಕಾರ ಸಂಘಗಳು ರೋಗಗ್ರಸ್ಥವಾಗಿವೆ, ಮುಚ್ಚಿವೆ. ಅವು ನಿಮಗೆ ಎಚ್ಚರಿಕೆಯಾಗಲಿ. ಇತರರಿಗೆ ಮಾದರಿಯಾಗುವಂತೆ ಸಂಘವನ್ನು ರೂಪಿಸಿ. ನಮ್ಮ ಶಿಡ್ಲಘಟ್ಟ ಹೆಸರಾಗಿರುವುದು ರೇಷ್ಮೆಯಿಂದ. ಲಕ್ಷಾಂತರ ಮಂದಿ ಇದನ್ನು ನಂಬಿ ಬದುಕುತ್ತಿದ್ದಾರೆ. ಅವರ ಬದುಕಿಗೆ ಆಸರೆಯಾಗುವ, ಉತ್ತೇಜಿಸುವ ಕಾರ್ಯಕ್ರಮಗಳನ್ನು ರೂಪಿಸಿ ಎಂದು ಸಲಹೆ ನೀಡಿದರು.
ರೇಷ್ಮೆ ಗೂಡಿನ ಮಾರುಕಟ್ಟೆಯ ಉಪನಿರ್ದೇಶಕ ಸುಭಾಷ್‌ ಬಿ ಸಾತೇನಹಳ್ಳಿ ಮಾತನಾಡಿ, ರೀಲರುಗಳಿಗೆ ಮೂರು ಲಕ್ಷದವರೆಗೂ ಬಡ್ಡಿ ರಹಿತ ಸಾಲವನ್ನು ನೀಡುವ ಅವಕಾಶ ಸಹಕಾರ ಸಂಘಕ್ಕಿದೆ. ಸಹಕಾರ ಸಂಘವನ್ನು ಸಶಕ್ತಗೊಳಿಸಿದರೆ ಮಾತ್ರ ರೀಲರುಗಳಿಗೆ ಅನುಕೂಲವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ರೇಷ್ಮೆ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಅಧಿಕಾರಿಗಳಾದ ಎನ್‌.ಕೆ.ಗುರುರಾಜರಾವ್‌, ರತ್ನಯ್ಯಶೆಟ್ಟಿ, ಜನಾರ್ಧನಮೂರ್ತಿ, ಫಿದಾಹುಸೇನ್‌, ವಾಜಿದ್‌, ಕೃಷ್ಣಮೂರ್ತಿ ಅವರನ್ನು ಗೌರವಿಸಲಾಯಿತು.
ಸಹಕಾರ ಅಭಿವೃದ್ಧಿ ಅಧಿಕಾರಿ ಎಂ.ಬಿ.ವೆಂಕಟೇಶಮೂರ್ತಿ, ನಗರಸಭಾ ಸದಸ್ಯ ಬಾಲಕೃಷ್ಣ, ಸಿಟಿಜನ್ಸ್‌ ಸಿಲ್ಕ್‌ ರೀಲರ್ಸ್‌ ಕೈಗಾರಿಕಾ ಸಹಕಾರ ಸಂಘದ ಅಧ್ಯಕ್ಷ ಮಹಮ್ಮದ್‌ ಮುರ್ತುಜ, ಕಾರ್ಯದರ್ಶಿ ಟಿ.ಶ್ರೀನಿವಾಸ್‌, ನರಸಿಂಹಮೂರ್ತಿ, ಫಕ್ರುದ್ದೀನ್‌ ಹಾಜರಿದ್ದರು.