Home News ಸಿದ್ದಾರ್ಥನಗರದ ನಿವಾಸಿಗಳ ಪ್ರತಿಭಟನೆ

ಸಿದ್ದಾರ್ಥನಗರದ ನಿವಾಸಿಗಳ ಪ್ರತಿಭಟನೆ

0

ನಗರದಲ್ಲಿ ಸಮರ್ಪಕವಾಗಿ ಕಸ ವಿಲೇವಾರಿ ಮಾಡದ ಅಧಿಕಾರಿಗಳ ನಿರ್ಲಕ್ಷ್ಯದಿಂದ ನಗರದ ದಲಿತ ಕಾಲೋನಿಗಳ ಜನರು ವಿವಿಧ ಖಾಯಿಲೆಗಳಿಗೆ ತುತ್ತಾಗುವಂತಾಗಿದೆ ಎಂದು ಆರೋಪಿಸಿ ಸಿದ್ದಾರ್ಥನಗರದ ನಿವಾಸಿಗಳು ಮಂಗಳವಾರ ನಗರಸಭೆ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿ ನಗರಸಭೆ ಮುಂಭಾಗದಲ್ಲಿ ಕಸ ಸುರಿದು ಪ್ರತಿಭಟನೆ ನಡೆಸಿದರು.
ನಗರದ ವಾರ್ಡ್ ಸಂಖ್ಯೆ ೭, ೮, ೯ ನೇ ವಾರ್ಡುಗಳಲ್ಲಿ ಬಹುತೇಕ ದಲಿತ ಕುಟುಂಬಗಳು ವಾಸಿಸುತ್ತಿದ್ದು ಅಲ್ಲಿನ ಜನರು ಕೂಲಿಯಿಂದ ಜೀವನ ನಡೆಸುತ್ತಿದ್ದಾರೆ. ಇಂತಹ ರಸ್ತೆಗಳಲ್ಲಿ ಕಳೆದ ಒಂದು ವಾರದಿಂದ ಕಸವನ್ನು ವಿಲೇವಾರಿ ಮಾಡದೆ ಇರುವುದರಿಂದ ಕಸ ಹಾಕಿರುವ ಸ್ಥಳದಲ್ಲಿ ಕೊಳೆತು ದುರ್ನಾತ ಬೀರುತ್ತಿದ್ದರೂ ಸಂಬಂದಪಟ್ಟ ಯಾವುದೇ ಅಧಿಕಾರಿಗಳು ಈವರೆಗೂ ವಾರ್ಡಿಗೆ ಭೇಟಿ ನೀಡಿಲ್ಲ. ಕಳೆದ ಮಾರ್ಚ ೨ ನೇ ತಾರೀಖಿನಂದು ವಾರ್ಡಿನ ಕೆಲ ಚರಂಡಿಗಳಿಗೆ ಬ್ಲೀಚಿಂಗ್ ಪೌಡರ್ ಸಿಂಪಡಣೆ ಮಾಡಿದ್ದನ್ನು ಹೊರತುಪಡಿಸಿದರೆ, ಪುನಃ ಈ ಕಡೆಗೆ ಯಾವುದೇ ಅಧಿಕಾರಿ ತಿರುಗಿಯೂ ನೋಡಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಮನೆಗಳ ಸಮೀಪದಲ್ಲಿ ತುಂಬಾ ಇಕ್ಕಟ್ಟಾದ ಪರಿಸ್ಥಿತಿ ಇರುವುದರಿಂದ ಕಸವನ್ನು ಬೇರೆ ಕಡೆಗಳಲ್ಲಿ ಹಾಕಲು ಸ್ಥಳಾವಕಾಶವಿಲ್ಲದೆ ನಾಗರಿಕರು ಪರದಾಡುವಂತಾಗಿದೆ. ಮನೆಗಳ ಸಮೀಪದಲ್ಲಿ ಸ್ವಚ್ಛವಾಗಿಟ್ಟುಕೊಳ್ಳುವಂತೆ ಅಧಿಕಾರಿಗಳು ಹೇಳುತ್ತಾರಾದರೂ, ವಾರವಾದರೂ ನಗರಸಭೆಯ ಸಿಬ್ಬಂದಿ ಸರಿಯಾಗಿ ಕಸ ವಿಲೇವಾರಿ ಮಾಡುವುದಿಲ್ಲ. ವಾರ್ಡಿನ ಚರಂಡಿಗಳೆಲ್ಲವೂ ತುಂಬಿ ನೀರು ಸರಾಗವಾಗಿ ಮುಂದೆ ಹೋಗದೆ ಸೊಳ್ಳೆಗಳ ಉಗಮ ಸ್ಥಾನಗಳಾಗಿ ಪರಿವರ್ತನೆಯಾಗಿವೆ. ಹೀಗೆ ನಿಂತ ನೀರಿನಿಂದ ದುರ್ವಾಸನೆ ಬರಲು ಆರಂಭವಾಗಿದ್ದು ಇದರಿಂದ ರಾತ್ರಿಯ ಸಮಯದಲ್ಲಿ ಮನೆಗಳಲ್ಲಿ ಇರಲು ಸಾಧ್ಯವಾಗುತ್ತಿಲ್ಲ. ಸೊಳ್ಳೆಗಳ ಕಾಟ ಜಾಸ್ತಿಯಾಗಿದ್ದು ಜನರು ವಿವಿಧ ಖಾಯಿಲೆಗಳಿಗೆ ತುತ್ತಾಗುವಂತಾಗಿದೆ.
ನಗರದ ೦೮ ನೇ ವಾರ್ಡಿನ ಸದಸ್ಯರಾದ ಸುಮಿತ್ರಮ್ಮ ರಮೇಶ್ ನಗರಸಭೆ ಉಪಾಧ್ಯಕ್ಷರಾಗಿದ್ದರೂ ಅಧಿಕಾರಿಗಳು ಅವರ ಮಾತಿಗೆ ಬೆಲೆ ನೀಡುವುದಿಲ್ಲ. ದಲಿತ ಕಾಲೋನಿಗಳ ಬೇಡಿಕೆಗಳಿಗಾಗಿ ಪ್ರತಿಭಟನೆಗಳನ್ನು ಮಾಡಿದಾಗ ಮಾತ್ರ ನ್ಯಾಯ ಒದಗಿಸಿಕೊಡುವ ಭರವಸೆ ನೀಡುವ ಅಧಿಕಾರಿಗಳು ಮತ್ತೆ ಮತ್ತೆ ನಮಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ಮುಖ್ಯಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನಾಕಾರ ಮನವಿ ಸ್ವೀಕರಿಸಿ ಮುಖ್ಯಾಧಿಕಾರಿ ಎಸ್.ಎ.ರಾಮ್‌ಪ್ರಕಾಶ್ ಮಾತನಾಡಿ ಕಳೆದ ಒಂದು ತಿಂಗಳ ಕಾಲ ನಾನು ರಜೆಯ ಮೇಲೆ ತೆರಳಿದ್ದರಿಂದ ಈ ರೀತಿಯ ಹಲವು ಸಮಸ್ಯೆಗಳು ಉದ್ಭವವಾಗಿದ್ದು ಪ್ರತಿನಿತ್ಯ ಅಧಿಕಾರಿಗಳಿಗೆ ಸ್ವಚ್ಚತೆಯ ಬಗ್ಗೆ ಹೆಚ್ಚು ಕಾಳಜಿವಹಿಸುವಂತೆ ಎಚ್ಚರಿಕೆ ನೀಡಲಾಗುತ್ತದೆ.
ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ರೀತಿಯ ತೊಂದರೆಯಾಗಿದ್ದು ಕೂಡಲೇ ನಗರಸಭೆಯ ಎಲ್ಲಾ ಸಿಬ್ಬಂದಿಯನ್ನು ನಗರದ ೭,೮ ಮತ್ತು ೯ ನೇ ವಾರ್ಡುಗಳಿಗೆ ಕಳುಹಿಸಿ ಸಂಗ್ರಹವಾಗಿರುವ ಕಸವನ್ನು ಸ್ವಚ್ಛಗೊಳಿಸುವುದಾಗಿ ಭರವಸೆ ನೀಡಿದರು.
ಎಸ್.ಎಂ.ರಮೇಶ್, ಶ್ರೀನಿವಾಸ್, ನಾಗರಾಜು, ಮುನಿರಾಜು, ದೇವರಾಜು, ಮುನಿಕೃಷ್ಣ, ಸುಬ್ರಮಣಿ, ಮಧು, ಮಂಜುನಾಥ, ವೆಂಕಟರಾಜು, ಶಿವಪ್ಪ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.