ಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿ ನೀತಿಯಿಂದ ಬಜೆಟ್ ರೂಪಿಸಿದೆ ಎಂದು ಆರೋಪಿಸಿ ಸಿ.ಐ.ಟಿ.ಯು ನೇತೃತ್ವದಲ್ಲಿ ಅಂಗನವಾಡಿ ನೌಕರರು, ಬಿಸಿಯೂಟ ನೌಕರರು, ಗ್ರಾಮ ಪಂಚಾಯತಿ ನೌಕರರು ತಾಲ್ಲೂಕು ಕಚೇರಿಯ ಮುಂದೆ ಮಂಗಳವಾರ ಪ್ರತಿಭಟಿಸಿದರು.
ಕೇಂದ್ರ ಸರ್ಕಾರ ಕೇವಲ ಕಾರ್ಪೊರೇಟ್ ಕಂಪೆನಿಗಳಿಗೆ ಪೂರಕವಾಗುವಂತೆ ಬಜೆಟ್ ಮಂಡಿಸಿದೆ. ಬಡ ಕಾರ್ಮಿಕರನ್ನು ಕಡೆಗಣಿಸಿದೆ. ಬಿಸಿಯೂಟ, ಅಂಗನವಾಡಿ, ಗ್ರಾಮ ಪಂಚಾಯತಿ ನೌಕರರು ಹಲವಾರು ವರ್ಷಗಳಿಂದ ದುಡಿಯುತ್ತಿದ್ದರೂ ಅವರ ಸೇವಾ ಭದ್ರತೆಯನ್ನು ನೀಡದೆ, ಕನಿಷ್ಠವೇತನ ಜಾರಿಗೊಳಿಸದೆ ಕೇಂದ್ರ ಸರ್ಕಾರ ನುಳುಚಿಕೊಳ್ಳುತ್ತಿದೆ. ಸಾಮಾಜಿಕ ನ್ಯಾಯದ ಭಾಗವಾಗಿರುವ ಬಿಸಿಯೂಟ ಯೋಜನೆಗೆ ಸರ್ಕಾರ ತನ್ನ ಬಜೆಟ್ನಲ್ಲಿ 13,215 ಕೋಟಿ ರೂಗಳಿಂದ 9,236 ಕೋಟಿ ರೂಪಾಯಿಗಳಿಗೆ ಅನುದಾನ ಇಳಿಸಿದೆ. ಇದರಿಂದಾಗಿ ಈ ಯೋಜನೆಯ ಮೇಲೆ ಕರಿನೆರಳು ಬೀಳುವ ಸಾಧ್ಯತೆಯಿದೆ.
ದುಡಿಯುವ ಮಹಿಳೆಯರಿಗೆ ಕೇಂದ್ರ ಸರ್ಕಾರ 7 ವರ್ಷದಿಂದ ಸಂಭಾವನೆ ಹೆಚ್ಚಿಸಿಲ್ಲ. ಆಶಾ ಕಾರ್ಯಕರ್ತೆಯರ ಪರಿಸ್ಥಿತಿ ಶೋಚನೀಯವಾಗಿದೆ. ದುಡಿಯುವ ವರ್ಗದ ಬಗ್ಗೆ ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ಪ್ರತಿಭಟಿಸುತ್ತಿರುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಕೃತಿಯನ್ನು ಧಹನ ಮಾಡಿದರು.
ತಹಶೀಲ್ದಾರ್ ಮನೋರಮಾ ಅವರಿಗೆ ಪ್ರತಿಭಟನಾಕಾರರು ಮನವಿ ಪತ್ರವನ್ನು ಸಲ್ಲಿಸಿದರು.
ಸಿಐಟಿಯು ಸಂಘಟನೆಯ ಮುನಿಲಕ್ಷ್ಮಮ್ಮ, ಎಂ.ಆರ್.ಗೀತಾ, ಅಶ್ವತ್ಥಮ್ಮ, ಡಿವೈಎಫ್ಐ ಮುನೀಂದ್ರ, ಆಶಾಕಾರ್ಯಕರ್ತೆಯರ ಅಧ್ಯಕ್ಷೆ ನಂಜಮ್ಮ ಮತ್ತಿತತರರು ಹಾಜರಿದ್ದರು.