Home News ಸೇನಾದಿನದಂದು ಯೋಧನಿಗೆ ಸನ್ಮಾನ

ಸೇನಾದಿನದಂದು ಯೋಧನಿಗೆ ಸನ್ಮಾನ

0

ಭಾರತೀಯ ಸೇನಾಪಡೆ ಇಂದು ತನ್ನ 70ನೇ ಸೇನಾ ದಿನವನ್ನು ಆಚರಿಸುತ್ತಿದೆ. ದೇಶವನ್ನು ರಕ್ಷಿಸಲು ತಮ್ಮ ಜೀವವನ್ನು ತ್ಯಾಗ ಮಾಡಿದ ಭಾರತೀಯ ವೀರ ಯೋಧರಿಗೆ ಗೌರವ ಸಲ್ಲಿಸಲು ಪ್ರತಿ ವರ್ಷ ಜನವರಿ 15 ರಂದು ರಾಷ್ಟ್ರೀಯ ಸೇನಾ ದಿನವನ್ನು ಆಚರಿಸಲಾಗುತ್ತದೆ ಎಂದು ಹಂಡಿಗನಾಳ ಗ್ರಾಮ ಪಂಚಾಯಿತಿ ಸದಸ್ಯ ಎ.ಎಂ.ತ್ಯಾಗರಾಜ್ ತಿಳಿಸಿದರು.
ತಾಲ್ಲೂಕಿನ ಯಣ್ಣಂಗೂರು ಗ್ರಾಮದಲ್ಲಿ ಸೋಮವಾರ ಬಿಎಸ್ಎಫ್ ಯೋಧ ವೈ.ಎಂ.ರವಿಕುಮಾರ್ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು.
1949ರ ಈ ದಿನ ಸೇನೆಯ ಮೊತ್ತ ಮೊದಲ ಕಮಾಂಡರ್ ಇನ್ ಚೀಫ್ ಆಗಿ ಜನರಲ್ ಕಾರಿಯಪ್ಪನವರು ಅಧಿಕಾರ ಸ್ವೀಕಾರ ಮಾಡಿದ ದಿನವಿದು. ಅಂದಿನಿಂದ ಜನವರಿ15ನ್ನು ಸೇನಾದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ಭಾರತದ ಸೈನಿಕರು ಗಡಿಯಲ್ಲಿ ತಮ್ಮ ಪ್ರಾಣ ಒತ್ತೆ ಇಟ್ಟು ಯುದ್ದ, ನೈಸರ್ಗಿಕ ವಿಕೋಪಗಳಂಥ ಸನ್ನಿವೇಶಗಳೊಂದಿಗೆ ಹೋರಾಡುತ್ತಾರೆ. ಧೈರ್ಯದಿಂದ ಎಲ್ಲಾ ತೊಂದರೆ, ಸವಾಲುಗಳನ್ನು ಎದುರಿಸಿ ರಾಷ್ಟ್ರ ಹಾಗೂ ರಾಷ್ಟ್ರದ ಜನರನ್ನು ಉಳಿಸಲು ಸದಾ ಸಿದ್ಧರಾಗಿರುತ್ತಾರೆ. ನಮ್ಮ ತಾಲ್ಲೂಕಿನ ಯೋಧ ರವಿಕುಮಾರ್ ಅವರನ್ನು ಗೌರವಿಸುವ ಸೌಭಾಗ್ಯದೊಂದಿಗೆ ಸೇನಾದಿನವನ್ನು ಆಚರಿಸುವ ಮೂಲಕ ಸಂಕ್ರಾಂತಿ ಹಬ್ಬಕ್ಕೆ ಮೆರುಗನ್ನು ತಂದಂತಾಗಿದೆ ಎಂದರು.
ಯೋಧ ಮತ್ತು ರೈತ ಎರಡು ಕಣ್ಣುಗಳಿದ್ದಂತೆ. ಇಬ್ಬರ ಹಬ್ಬವೂ ಒಂದೇ ದಿನ ಬಂದಿರುವುದು ನಮ್ಮ ಅದೃಷ್ಟ. ಸಂಕ್ರಾಂತಿ ಮತ್ತು ಸೇನಾ ದಿನವನ್ನು ಒಂದೇ ದಿನ ಆಚರಿಸುವಂತಾಗಿದೆ ಎಂದು ಹೇಳಿದರು.
ಬಿಎಸ್ಎಫ್ ಯೋಧ ವೈ.ಎಂ.ರವಿಕುಮಾರ್ ಮಾತನಾಡಿ, ನಮ್ಮ ದೇಶದ ವಿವಿಧ ಧರ್ಮ, ಜಾತಿ ಪಂಥಗಳಿಗೆ ವಿವಿಧ ಹಬ್ಬಗಳಿದ್ದಂತೆ ಸೇನೆಗೆ ರಾಷ್ಟ್ರೀಯ ಸೇನಾ ದಿನ ವಿಶಿಷ್ಟವಾದ ಹಬ್ಬವಿದ್ದಂತೆ. ಸೈನ್ಯವು ನಿಜವಾದ ಸಮರ್ಪಣೆ ಮತ್ತು ಗೆಲ್ಲಲು ಹೋರಾಟ ಎಂಬ ಧ್ಯೇಯದೊಂದಿಗೆ ಕಾರ್ಯನಿರ್ವಹಿಸುತ್ತದೆ. ನಮ್ಮ ತಾಲ್ಲೂಕು ಮತ್ತು ಜಿಲ್ಲೆಯಿಂದ ಯುವಕರು ಸೇನೆ ಸೇರಿ ದೇಶ ಸೇವೆ ಮಾಡುವಂತಾಗಲಿ ಎಂದು ನುಡಿದರು.
ಈ ಸಂದರ್ಭದಲ್ಲಿ ಸಂಕ್ರಾಂತಿ ಶುಭಾಶಯಗಳೊಂದಿಗೆ ಎಳ್ಳು ಬೆಲ್ಲವನ್ನು ಎಲ್ಲರಿಗೂ ಹಂಚಲಾಯಿತು.
ಅಪ್ಪೇಗೌಡನಹಳ್ಳಿ ನರಸಿಂಹಮೂರ್ತಿ, ಆಕಾಶ್, ಕಿಶೋರ್, ಭಾರ್ಗವ್, ಕೇಶವ, ಮುನಿಯಪ್ಪ, ಅಶೋಕ್, ನಾಗೇಶ್, ರಘು ಹಾಜರಿದ್ದರು.