Home News ಸೈನಿಕನ ಆತ್ಮತೃಪ್ತಿ

ಸೈನಿಕನ ಆತ್ಮತೃಪ್ತಿ

0

ಸೇನೆಯಲ್ಲಿದ್ದು ದೇಶ ಸೇವೆ ಮಾಡುವಾಗ ಸಿಗುವ ಆತ್ಮತೃಪ್ತಿ ಬೇರೆಲ್ಲಾ ವೃತ್ತಿಗಳಿಗಿಂತ ಉನ್ನತವಾದದ್ದು ಎಂದು ತಾಲ್ಲೂಕಿನ ಮುತ್ತೂರು ಮೂಲದ ಮೇಜರ್ ಸುನಿಲ್ಕುಮಾರ್ ತಿಳಿಸಿದರು.
ತಾಲ್ಲೂಕಿನ ಮೇಲೂರು ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿರುವ ಸಮುದಾಯ ಭವನದಲ್ಲಿ ಮಂಗಳವಾರ ‘ಭಾರತೀಯ ಸೈನ್ಯ ಮತ್ತು ನಾಗರಿಕ ಕರ್ತವ್ಯಗಳು’ ಎಂಬ ವಿಷಯದ ಕುರಿತಂತೆ ಮೇಲೂರು, ಮಳ್ಳೂರು, ಮುತ್ತೂರು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಅವರು ಪ್ರಾತ್ಯಕ್ಷಿಕೆಯ ಮೂಲಕ ನೀಡಿದ ಉಪನ್ಯಾಸದಲ್ಲಿ ಮಾತನಾಡಿದರು.
ನಮ್ಮ ದೇಶದ ಸಮಸ್ಯೆ ಬಡತನ ಅಥವಾ ನಿರುದ್ಯೋಗವಲ್ಲ, ಮೂಲಭೂತ ಕರ್ತವ್ಯಗಳನ್ನು ಪಾಲಿಸದಿರುವುದೇ ಅತಿ ದೊಡ್ಡ ಸಮಸ್ಯೆಯಾಗಿದೆ. ವಿದ್ಯಾರ್ಥಿಗಳು ಉನ್ನತ ಗುರಿಯನ್ನು ಹೊಂದಬೇಕು. ತಮ್ಮ ಕನಸುಗಳನ್ನು ಸಾಕಾರಗೊಳಿಸಲು ಸಾಧನೆ ಮಾಡಬೇಕು. ಇತರರಿಗೆ ಸಹಾಯ ಮಾಡುತ್ತಾ, ಒಳ್ಳೆಯ ಕೆಲಸಗಳನ್ನು ಮಾಡುತ್ತಿರುವವರಿಗೆ ಆ ದೇವರೂ ಕೆಟ್ಟದ್ದು ಮಾಡುವುದಿಲ್ಲ. ದೇಶ ಸೇವೆಗಾಗಿ ಸೇನೆಯನ್ನು ಸೇರಬಯಸುವವರಿಗೆ ಗಂಡು ಹೆಣ್ಣು ಬೇಧವಿಲ್ಲದೆ ಮುಕ್ತ ಅವಕಾಶವಿದ್ದು, ಈಗಿಂದಲೇ ಅದರತ್ತ ಸಾಧನೆ ಮಾಡಲು ಪ್ರಾರಂಭಿಸಿ. ಉತ್ತಮ ನಾಗರಿಕರಾಗಿ ಜವಾಬ್ದಾರಿಯುತ ಜೀವನ ನಡೆಸುವುದು ಕೂಡ ದೇಶ ಸೇವೆಯೇ ಎಂದು ಅವರು ವಿವರಿಸಿದರು.
ಈ ಸಂದರ್ಭದಲ್ಲಿ ಭಾರತೀಯ ಸೇನೆಯ ಕುರಿತಂತೆ, ಕನಸನ್ನು ಸಾಕಾರಗೊಳಿಸುವುದು, ಸಹಾಯ ಹಸ್ತ, ಪ್ರಯತ್ನಶೀಲತೆ, ನಾಯಕತ್ವ ಗುಣ ಮುಂತಾದ ವಿಷಯಗಳ ಕುರಿತಂತೆ ವೀಡಿಯೋ ಚಿತ್ರಣಗಳ ಮೂಲಕ ವಿವರಿಸಿದರು.
ತಾಲ್ಲೂಕು ವಿಪ್ರ ಪ್ರತಿಭಾ ಪುರಸ್ಕಾರ ಸೇವಾ ಟ್ರಸ್ಟ್ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಮಾತನಾಡಿ, ನಮ್ಮ ನೆರೆಯ ಗ್ರಾಮದ ವ್ಯಕ್ತಿಯೊಬ್ಬರು ಸೇನೆಯ ಮೇಜರ್ ಹುದ್ದೆಯಲ್ಲಿರುವುದರಿಂದ ಅವರನ್ನು ಪರಿಚಯಿಸಿ ಮಕ್ಕಳಿಗೆ ಸೇನೆಯ ಬಗ್ಗೆ ಆಸಕ್ತಿ ಹುಟ್ಟಿಸುವುದು ಈ ಕಾರ್ಯಕ್ರಮದ ಉದ್ದೇಶ ಎಂದು ಹೇಳಿದರು.
ಮೇಲೂರಿನ ಡಾ.ರಾಜ್ಕುಮಾರ್ ಅಭಿಮಾನಿಗಳ ಸಂಘದ ಸದಸ್ಯರು ಮುತ್ತೂರು ಮೂಲದ ಮೇಜರ್ ಸುನಿಲ್ಕುಮಾರ್ ಅವರನ್ನು ಸನ್ಮಾನಿಸಿದರು.
ಗ್ರಾಮ ಪಂಚಾಯತಿ ಅಧ್ಯಕ್ಷೆ ಜಮುನಾ ಧರ್ಮೇಂದ್ರ, ಡಾ.ರಾಜ್ಕುಮಾರ್ ಅಭಿಮಾನಿಗಳ ಸಂಘದ ಧರ್ಮೇಂದ್ರ, ಸುಧೀರ್, ಸುದರ್ಶನ್, ಶ್ರೀನಿವಾಸ್, ಆನಂದ್, ಶಿವ, ತಾಲ್ಲೂಕು ವಿಪ್ರ ಪ್ರತಿಭಾ ಪುರಸ್ಕಾರ ಸೇವಾ ಟ್ರಸ್ಟ್ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ಮುತ್ತೂರು ಪ್ರೌಢಶಾಲೆಯ ಮುಖ್ಯಶಿಕ್ಷಕ ಆಂಜನೇಯ, ಶಿಕ್ಷಕರಾದ ಶಿವಕುಮಾರ್ ಪಟ್ಟೇದಾರ್, ಶ್ರೀನಿವಾಸ್, ಮೇಲೂರು, ಮಳ್ಳೂರು, ಮುತ್ತೂರು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.