Home News ಸ್ಥಳೀಯ ಕಲಾವಿದರನ್ನು ಪ್ರೋತ್ಸಾಹಿಸಿ ಬೆಳೆಸಬೇಕು

ಸ್ಥಳೀಯ ಕಲಾವಿದರನ್ನು ಪ್ರೋತ್ಸಾಹಿಸಿ ಬೆಳೆಸಬೇಕು

0

ಕಲೆಯನ್ನು ಗುರುತಿಸುವ ಮತ್ತು ಪ್ರೋತ್ಸಾಹ ಮಾಡುವ ಮೂಲಕ ಸ್ಥಳೀಯ ಕಲಾವಿದರನ್ನು ಬೆಳೆಸುವಂತಹ ಕಾರ್ಯವಾಗಬೇಕು ಎಂದು ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ತಿಳಿಸಿದರು.
ನಗರದ ಆಶಾಕಿರಣ ಅಂಧ ಮಕ್ಕಳ ವಸತಿ ಶಾಲೆಯಲ್ಲಿ ಬುಧವಾರ ಸ್ಥಳೀಯ ನೃತ್ಯ ಕಲಾವಿದ ಮುನಿರಾಜು ಅವರ ೪೨ ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಮ್ಮಲ್ಲಿ ಕಲಾವಿದರ ಕೊರತೆ ಇಲ್ಲ, ಆದರೆ ಇಲ್ಲಿ ಅವರಿಗೆ ಅವಕಾಶದ ಕೊರತೆ ಇದೆ, ಅವರನ್ನು ಗುರುತಿಸಿ ಕಲೆಗೆ ಪ್ರೋತ್ಸಾಹ ನೀಡುವ ಮನಸ್ಸುಗಳು ಹೆಚ್ಚಬೇಕು. ಕಲೆಯೆಂಬುದು ಒಬ್ಬರ ಸ್ವತ್ತಲ್ಲ, ಕಲೆಯು ಜಾತಿ, ಮತ, ಪ್ರಾದೇಶಿಕತೆ, ಗಡಿಯನ್ನು ಮೀರಿದಂತಹದ್ದು. ಕಲಾವಿದ ತನ್ನ ಆನಂದಕ್ಕಾಗಿ, ಬಾಳಿನ ಸಾರ್ಥಕತೆಗಾಗಿ ಕಲೆಯನ್ನು ಆರಾಧಿಸುತ್ತಾರೆ.

ಆಶಾಕಿರಣ ಅಂಧಮಕ್ಕಳ ಶಾಲೆಯಲ್ಲಿ ನೃತ್ಯ ಕಲಾವಿದ ಮುನಿರಾಜು ಅವರನ್ನು ನಟ ಚಿರಂಜೀವಿ ಅಭಿಮಾನಿಗಳ ಸಂಘದ ಸದಸ್ಯರು ಗೌರವಿಸಿದರು

ಯಾವುದೇ ಕಲಾವಿದನಿಗೆ ಅವರ ಕಲೆಯನ್ನು ಗುರುತಿಸಿ ಪ್ರೋತ್ಸಾಹಿಸಿ ಸನ್ಮಾನಿಸಿದರೆ, ಅವರಿಗೆ ಆಗುವ ಆನಂದ ಅಷ್ಟಿಷ್ಟಲ್ಲ. ಅಂತಹ ಆನಂದವನ್ನು ನಾವು ಕಾಣಬಹುದು. ಯಾವುದೇ ಕಲಾವಿದನಿಗೆ ಮನ್ನಣೆ ದೊರೆತರೆ ಅವನ ಬಾಳು ಸಾರ್ಥಕವಾಗುತ್ತದೆ. ಅದರಲ್ಲೂ ತನ್ನ ಸುತ್ತಲಿನವರು, ಊರವರು ಗುರುತಿಸಿ ಗೌರವಿಸಿದರೆ ಇನ್ನಷ್ಟು ಬೆಳೆಯಲು, ಸಾಧಿಸಲು ಪ್ರೇರಣೆಯಾಗುತ್ತದೆ.
ಸ್ಥಳೀಯ ನೃತ್ಯ ಕಲಾವಿದ ಮುನಿರಾಜು ಅವರು ತಂತ್ರಜ್ಞಾನವನ್ನು ಬಳಸಿ ಬೆಳೆದವರು. ಫೇಸ್ ಬುಕ್, ಯೂಟ್ಯೂಬ್ನಲ್ಲಿ ತನ್ನ ಕಲೆಯನ್ನು ಬಹುಜನಕ್ಕೆ ತೋರಿಸುವ ಮೂಲಕ ಪ್ರಸಿದ್ಧಿಗೆ ಬಂದರು. ಸ್ಥಳೀಯರ ಪ್ರೇರಣೆ, ಪ್ರೋತ್ಸಾಹದಿಂದ ಈಗ ಕಿರುಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಹೀಗೆಯೇ ಮುಂದುವರೆದು ಕಿರುತೆರೆ ಮತ್ತು ಚಲನಚಿತ್ರಗಳಲ್ಲೂ ನಟಿಸಿ ತಾಲ್ಲೂಕಿಗೆ ಕೀರ್ತಿ ತರಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಅಂಧಮಕ್ಕಳಿಂದ ಕೇಕ್ ಕತ್ತರಿಸುವ ಮೂಲಕ ಮುನಿರಾಜು ಅವರ ಹುಟ್ಟುಹಬ್ಬವನ್ನು ಆಚರಿಸಲಾಯಿತು. ನಟ ಚಿರಂಜೀವಿ ಅಭಿಮಾನಿ ಸಂಘದ ಸದಸ್ಯರು ಸಿ.ಎನ್.ಮುನಿರಾಜು ಅವರನ್ನು ಗೌರವಿಸಿದರು. ಅಂಧ ಮಕ್ಕಳಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.
ಕನ್ನಡ ಸಾರಸ್ವತ ಪರಿಚಾರಿಕೆ ಕಾರ್ಯದರ್ಶಿ ಎ.ಎಂ.ತ್ಯಾಗರಾಜ್, ಚಲನಚಿತ್ರ ನಟಿ ರಾಜಶ್ರೀ, ಕಿರುತೆರೆ ನಿರ್ದೇಶಕರಾದ ದೇವನಹಳ್ಳಿ ಗಜೇಂದ್ರ, ಮೇಲೂರು ರಂಗ, ನಾರಾಯಣಸ್ವಾಮಿ, ಕಿರುಚಿತ್ರ ನಟಿಯರಾದ ಸುಷ್ಮಾ, ಅರ್ಚನಗೌಡ, ನಿವೃತ್ತ ಶಿಕ್ಷಕ ಸುಂದರನ್, ಚಿರಂಜೀವಿ ಅಭಿಮಾನಿಗಳ ಸಂಘದ ಅಧ್ಯಕ್ಷ ದಿನೇಶ್ಬಾಬು, ದೇವರಾಜು, ಎಚ್.ವೆಂಕಟರೆಡ್ಡಿ, ವಿ.ವೆಂಕಟರಮಣ, ತ್ಯಾಗರಾಜು, ಮಾಮಯ್ಯ, ಮುನಿಕೃಷ್ಣ, ರಾಧಾಕೃಷ್ಣ, ಮಂಜುನಾಥ್, ರಾಮದಾಸ್, ವೀರಪ್ಪ ಹಾಜರಿದ್ದರು.