Home News ಸ್ವಂತ ದುಡಿಮೆಯಿಂದ ವೃದ್ದರಿಗೆ ಆಶ್ರಯ ನೀಡುತ್ತಿರುವ ಗೊರಮಡಗು ಗ್ರಾಮದ ಓಬಣ್ಣ

ಸ್ವಂತ ದುಡಿಮೆಯಿಂದ ವೃದ್ದರಿಗೆ ಆಶ್ರಯ ನೀಡುತ್ತಿರುವ ಗೊರಮಡಗು ಗ್ರಾಮದ ಓಬಣ್ಣ

0

ವೃದ್ಧರು, ಅಶಕ್ತರು, ನಿರ್ಗತಿಕರ ನೆರವಿಗೆ ಬರುವವರು ವಿರಳ. ಲಾಭದ ಅಪೇಕ್ಷೆಯಿಲ್ಲದೆ ಅದಕ್ಕಾಗಿ ಸಮಯ ಹಾಗೂ ಹಣವನ್ನು ಮೀಸಲಿಡುವವರು ಇನ್ನೂ ವಿರಳ. ಆದರೆ ತಾಲ್ಲೂಕಿನ ಗೊರಮಡಗು ಗ್ರಾಮದ ಓಬಣ್ಣ ತಮ್ಮ ಹೊಲದಲ್ಲೇ ಪುಟ್ಟ ಮನೆಯೊಂದನ್ನು ಕಟ್ಟಿ ವೃದ್ದರಿಗೆ ಆಶ್ರಯ ನೀಡಿದ್ದಾರೆ. ಯಾವುದೇ ಸರ್ಕಾರಿ ಅಥವಾ ಎನ್.ಜಿ.ಒ ಸಹಾಯ ಪಡೆಯದೇ ತಮ್ಮ ದುಡಿಮೆಯಿಂದಲೇ ವೃದ್ಧರ ಪೋಷಣೆಗೆ ಮುಂದಾಗಿದ್ದಾರೆ.
ನಾಲ್ಕು ಎಕರೆ ಜಮೀನನ್ನು ಹೊಂದಿರುವ ಓಬಣ್ಣ ಅರ್ಧ ಎಕರೆ ಭೂಮಿಯನ್ನು ವೃದ್ಧಾಶ್ರಮಕ್ಕೇ ಮೀಸಲಿಟ್ಟಿದ್ದಾರೆ. ಗ್ರಾಮದಿಂದ ಪಟ್ಟಣಕ್ಕೆ ಬಸ್ ಸೌಕರ್ಯವಿರದಿರುವುದರಿಂದ ಸರ್ಕಾರಿ ಆಸ್ಪತ್ರೆಗೆ ವೃದ್ಧರನ್ನು ಚಿಕಿತ್ಸೆಗಾಗಿ ಕರೆತರಬೇಕಾದರೆ ತಮ್ಮ ದ್ವಿಚಕ್ರ ವಾಹನವನ್ನೇ ಅವಲಂಬಿಸುತ್ತಾರೆ. ವೃದ್ಧರು ಚಟುವಟಿಕೆಯಿಂದಿರಲೆಂದು ಮೇಣದಬತ್ತಿ ತಯಾರಿಕೆ, ಸೋಪ್, ಪೌಡರ್ ಮುಂತಾದವುಗಳನ್ನು ತಯಾರಿಕೆಯ ಬಗ್ಗೆ ಅವರಿಗೆ ತರಬೇತಿಯನ್ನು ಕೊಡಿಸುತ್ತಾರೆ. ಎರಡು ಹಸುಗಳನ್ನು ಸಾಕಿದ್ದು, ಕೆಲ ವೃದ್ಧರು ಅವುಗಳ ಪೋಷಣೆಗೂ ನೆರವಾಗುತ್ತಾರೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯವರು, ಸಾಂತ್ವನ ಕೇಂದ್ರದವರು ಹಾಗೂ ಈ ಆಶ್ರಮದ ಬಗ್ಗೆ ಮಾಹಿತಿ ಇರುವವರು ಎಲ್ಲಾದರು ವೃದ್ಧರು ಮತ್ತು ಅಶಕ್ತರು ಕಂಡಲ್ಲಿ ಇವರಿಗೆ ಮಾಹಿತಿ ನೀಡಿ, ಕೆಲವೊಮ್ಮೆ ಕರೆತಂದು ಸೇರಿಸುತ್ತಾರೆ. ಕೆಲವರು ಮಾನಿಸಿಕ ಅಸ್ವಸ್ಥರೂ ಇದ್ದರೆ, ಇನ್ನು ಕೆಲವರು ವಯೋ ಸಹಜ ದೌರ್ಭಲ್ಯ, ಖಾಯಿಲೆಗಳಿಂದ ನರಳುತ್ತಿರುತ್ತಾರೆ. ಶಸ್ತ್ರಚಿಕಿತ್ಸೆಯ ಅಗತ್ಯವಿರುವುದರಿಂದ ಮನೆಯವರಿಂದ ದೂರವಾದವರೂ ಇದ್ದಾರೆ. ಸುಮಾರು ಆರು ವರ್ಷಗಳಿಂದ ನಡೆಸುತ್ತಿರುವ ಈ ವೃದ್ಧಾಶ್ರಮದಲ್ಲಿ ಈಗ 12 ಮಂದಿಯಿದ್ದಾರೆ.
‘ನಮ್ಮ ತಂದೆಯವರು ಕಾಲವಾದ ನಂತರ ವೃದ್ಧರ ಸೇವೆ ಮಾಡಿ ಅವರಲ್ಲಿ ತಂದೆ ತಾಯಿರನ್ನು ಕಾಣುತ್ತಿದ್ದೇನೆ. ಈ ಕಾರ್ಯದಲ್ಲಿ ನನ್ನ ಪತ್ನಿಯ ಸಹಕಾರವಿದೆ. ವೃದ್ಧರಿಗೆಲ್ಲಾ ಬೇಸರಿಸದೆ ಅಡುಗೆ ಮಾಡುತ್ತಾಳೆ. ಸರ್ಕಾರದ ಅಥವಾ ಸಂಘ ಸಂಸ್ಥೆಗಳ ಹಣವನ್ನು ಅಪೇಕ್ಷಿಸದೇ ನನ್ನ ಶಕ್ತ್ಯಾನುಸಾರ ನಮ್ಮ ಸ್ಥಳದಲ್ಲೇ ಜೀವೋದಯ ಟ್ರಸ್ಟ್ ಎಂಬ ಹೆಸರಿನಲ್ಲಿ ವೃದ್ಧಾಶ್ರಮ ನಡೆಸುತ್ತಿದ್ದೇನೆ. ನಮ್ಮ ಹೊಲದಲ್ಲೇ ಬೆಳೆಯುವ ತರಕಾರಿ, ರಾಗಿ ತಿನ್ನಲು ಬಳಸುತ್ತೇವೆ. ಕೆಲ ಸ್ನೇಹಿತರು ಸಹಾಯವನ್ನೂ ಮಾಡುತ್ತಾರೆ. ಯಾರಿಂದಲೂ ನಾನು ಸಹಾಯ ಬಯಸುವುದಿಲ್ಲ. ಆದರೆ ಶಾಲಾ ಕಾಲೇಜಿನ ಶಿಕ್ಷಕರಲ್ಲಿ ಮನವಿ ಮಾಡುತ್ತಿರುತ್ತೇನೆ. ವಿದ್ಯಾರ್ಥಿಗಳನ್ನು ಕರೆತಂದು ಸ್ವಲ್ಪ ಹೊತ್ತು ವೃದ್ಧರೊಂದಿಗೆ ಸಮಯವನ್ನು ಕಳೆಯಿರಿ, ಒಡನಾಡಿ. ಇದರಿಂದ ವೃದ್ಧರಿಗೂ ಚೈತನ್ಯ ಬರುತ್ತದೆ ಮತ್ತು ವಿದ್ಯಾರ್ಥಿಗಳಲ್ಲೂ ಉತ್ತಮ ಭಾವನೆಗಳು ಉಂಟಾಗುತ್ತವೆ’ ಎನ್ನುತ್ತಾರೆ ಓಬಣ್ಣ.
ಓಬಣ್ಣ ಅವರ ಮೊಬೈಲ್ ನಂ. 9972009189.