Home News ಸ್ವಚ್ಛತೆಯಿಂದ ಆರೋಗ್ಯ, ಆದಾಯ ಮತ್ತು ನೆಮ್ಮದಿ – ಶಾಸಕ ಎಂ.ರಾಜಣ್ಣ

ಸ್ವಚ್ಛತೆಯಿಂದ ಆರೋಗ್ಯ, ಆದಾಯ ಮತ್ತು ನೆಮ್ಮದಿ – ಶಾಸಕ ಎಂ.ರಾಜಣ್ಣ

0

ಮಕ್ಕಳು ಶೌಚಾಲಯ ನಿರ್ಮಿಸುವಂತೆ ಪೋಷಕರನ್ನು ಒತ್ತಾಯಿಸುವಂತೆ ಶಿಕ್ಷಕರು ಪ್ರೇರೇಪಿಸಬೇಕು. ಸ್ವಚ್ಛತೆಯಿಂದ ಆರೋಗ್ಯ, ಆದಾಯ ಮತ್ತು ನೆಮ್ಮದಿ ಎಂಬ ಮನಸ್ಥಿತಿ ಎಲ್ಲರಲ್ಲೂ ಮನೆಮಾಡಬೇಕು ಎಂದು ಶಾಸಕ ಎಂ.ರಾಜಣ್ಣ ಅಭಿಪ್ರಾಯಪಟ್ಟರು.
ತಾಲ್ಲೂಕಿನ ದಿಬ್ಬೂರಹಳ್ಳಿ ಗ್ರಾಮ ಪಂಚಾಯತಿ ಆವರಣದಲ್ಲಿ ಗುರುವಾರ ಗಾಂಧಿಜಯಂತಿ ಪ್ರಯುಕ್ತ ‘ಸ್ವಚ್ಛ ಭಾರತ ಅಭಿಯಾನ’ ಉದ್ಘಾಟಿಸಿ ಅವರು ಮಾತನಾಡಿದರು. ಕಸವನ್ನು ಚರಂಡಿ, ರಸ್ತೆ ಬದಿ ಹಾಗೂ ಎಲ್ಲೆಂದರಲ್ಲಿ ಹಾಕಬಾರದು. ಮಕ್ಕಳಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಬೇಕು. ನೀವಿರುವ ಸ್ಥಳ ಸ್ವಚ್ಛವಾಗಿರಲಿ. ಪ್ಲಾಸ್ಟಿಕ್‌ ಬಳಸುವುದನ್ನು ಕಡಿಮೆ ಮಾಡಿ. ನಮ್ಮ ಮನೆ ಮಾತ್ರ ಸ್ವಚ್ಛವಾಗಿದ್ದರೆ ಸಾಕು ಎಂಬ ಮನಸ್ಥಿತಿ ಬಿಡಬೇಕು. ಕೆರೆ ಅಥವಾ ನೀರಿನ ಮೂಲಗಳಿಗೆ ತ್ಯಾಜ್ಯ ಸೇರದಂತೆ ಎಚ್ಚರವಹಿಸಿ. ಮನೆಯ ಶೌಚಾಲಯದಂತೆ ಸಾರ್ವಜನಿಕ ಶೌಚಾಲಯವನ್ನು ಬಳಸಿ. ಸ್ವಚ್ಛ ಭಾರತ ನಿರ್ಮಾಣ ಸರ್ಕಾರಿ ಕಾರ್ಯಕ್ರಮವಲ್ಲ ನಮ್ಮ ಸ್ವಂತ ಕೆಲಸ ಎಂದು ಭಾವಿಸಿ ಎಂದು ಹೇಳಿದರು.
ಜಿಲ್ಲಾ ಯೋಜನಾಧಿಕಾರಿ ರಾಮಕೃಷ್ಣಪ್ಪ ಮಾತನಾಡಿ, ವಾರಕ್ಕೆರಡು ಗಂಟೆಯಂತೆ ವರ್ಷಕ್ಕೆ ನೂರು ಗಂಟೆಗಳ ಅವಧಿಯನ್ನು ಸಾರ್ವಜನಿಕರು ಶ್ರಮದಾನಕ್ಕೆ ಮೀಸಲಿಡಬೇಕು. ಪಂಚಾಯತಿ ವ್ಯಾಪ್ತಿಯಲ್ಲಿ ಸಭೆ ಕರೆದು ಸ್ವಚ್ಛತಾ ಆಂದೋಲನದ ಬಗ್ಗೆ ಅರಿವು ಮೂಡಿಸಿ ಗಾಂಧೀಜಿಯವರ ಆದರ್ಶವನ್ನು ಸಾಕಾರಗೊಳಿಸಬೇಕು.
ದಿಬ್ಬೂರಹಳ್ಳಿಯ ಬೀದಿಗಳಲ್ಲಿ ಕಸ ಗುಡಿಸುವ ಮೂಲಕ ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳು ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೆ ನೀಡಿದರು.
ತಹಶೀಲ್ದಾರ್‌ ಜಿ.ಎ.ನಾರಾಯಣಸ್ವಾಮಿ, ದಿಬ್ಬೂರಹಳ್ಳಿ ಪಂಚಾಯತಿ ಅಧ್ಯಕ್ಷ ಧನಂಜಯರೆಡ್ಡಿ, ಪ್ರಭಾರಿ ಕಾರ್ಯನಿರ್ವಾಹಣಾಧಿಕಾರಿ ಗಣಪತಿ ಸಾಕರೆ, ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.