Home News ಸ್ವಾತಂತ್ರ್ಯ ದಿನದಂದು ಸ್ವಾತಂತ್ರ್ಯ ಹೋರಾಟಗಾರರ ಕುರಿತ ನೆನಪುಗಳು

ಸ್ವಾತಂತ್ರ್ಯ ದಿನದಂದು ಸ್ವಾತಂತ್ರ್ಯ ಹೋರಾಟಗಾರರ ಕುರಿತ ನೆನಪುಗಳು

0

ಸ್ವಾತಂತ್ರ್ಯಕ್ಕಾಗಿ ಬಲಿದಾನವನ್ನು ನೀಡಿದ ಹಾಗೂ ಹಲವಾರು ಹೋರಾಟಗಾರರನ್ನು ಹೊಂದಿದ್ದ ಗ್ರಾಮ ಭಕ್ತರಹಳ್ಳಿ ಅಂದು ದೇಶಭಕ್ತರಹಳ್ಳಿ ಎಂದೇ ಪ್ರಸಿದ್ಧಿಯನ್ನು ಪಡೆದಿತ್ತು. ಸ್ವಾತಂತ್ರ್ಯ ಬಂದು ಒಂದು ತಲೆಮಾರೇ ಕಳೆದಿರುವ ಹೊತ್ತಿನಲ್ಲಿ ಅವರ ಕುರಿತ ನೆನಪುಗಳು ತಾಲ್ಲೂಕಿನ ಬಗ್ಗೆ ಹೆಮ್ಮೆಯ ಭಾವನೆಯನ್ನು ಮೂಡಿಸುತ್ತದೆ.
ಭಕ್ತರಹಳ್ಳಿ ಗ್ರಾಮದ ಹಿರಿಯರಾದ ಬಂಡಿ ನಾರಾಯಣಪ್ಪನವರ ಮನೆಯು ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರ ಕೇಂದ್ರವಾಗಿತ್ತು. ೧೯೪೭ರಲ್ಲಿ ಶಿಡ್ಲಘಟ್ಟದ ತಾಲ್ಲೂಕು ಕಚೇರಿಯ ಮೇಲೆ ರಾಷ್ಟ್ರಧ್ವಜ ಹಾರಿಸುವ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಮೇಲೆ ಪೊಲೀಸರು ನಡೆಸಿದ ಗೋಲೀಬಾರಿನಲ್ಲಿ ಭಕ್ತರಹಳ್ಳಿಯ ನಾರಾಯಣಪ್ಪನವರ ವೆಂಕಟರವಣಪ್ಪ ಮತ್ತು ಕುಂಬಾರು ದೊಡ್ಡ ನಾರಾಯಣಪ್ಪ ಎಂಬ ಇಬ್ಬರು ದೇಶಭಕ್ತರು ವೀರಮರಣವನ್ನಪ್ಪಿದರು. ಹಲವಾರು ಮಂದಿ ಜೈಲು ಪಾಲಾದರು. ಇದರಿಂದಾಗಿ ಭಕ್ತರಹಳ್ಳಿಯು ‘ದೇಶಭಕ್ತರಹಳ್ಳಿ’ ಎಂದೇ ಖ್ಯಾತಿಯಾಯಿತು.
‘ಸರ್ಕಾರಿ ಲೆಕ್ಕದಲ್ಲಿ ಭಕ್ತರಹಳ್ಳಿಯ ಕೇವಲ ೧೩ ಮಂದಿ ಮಾತ್ರ ಸ್ವಾತಂತ್ರ್ಯ ಹೋರಾಟಗಾರರೆಂದು ಗುರುತಿಸಲ್ಪಟ್ಟಿದ್ದಾರೆ. ಆದರೆ ಹಲವಾರು ಮಂದಿ ಈ ಹೋರಾಟದಲ್ಲಿ ಭಾಗಿಯಾಗಿದ್ದರು. ಬಂಡಿ ನಾರಾಯಣಪ್ಪ, ನಾಗಮಂಗಲದ ವೆಂಕಟರಾಯಪ್ಪ, ಪಟೇಲ್ ಮುನಿಶಾಮಿಗೌಡ, ಬಿ.ವೆಂಕಟರಾಯಪ್ಪ, ಬಿ.ಆರ್.ಕೆ.ಆರಾಧ್ಯ, ನಾರಾಯಣಸ್ವಾಮಿ ಗೌಡ, ಎಚ್.ಕಾಳಪ್ಪ, ಬಿ.ಆಂಜನೇಯಗೌಡ, ಬಂಡಿ ಕ್ಯಾತಣ್ಣ, ತೋಟಿ ರಂಗಪ್ಪ, ಬಿ.ಎನ್.ಪುಟ್ಟಣ್ಣ, ಬಿ.ಎಸ್.ಬಚ್ಚೇಗೌಡ, ಡಿ.ಮಾರಪ್ಪ, ತಳವಾರ ನಾರಾಯಣಪ್ಪ, ನಾಯಕರ ಮುನಿಯಪ್ಪ ಮತ್ತಿತರರು ಭಕ್ತರಹಳ್ಳಿಯ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರು. ಶಿಡ್ಲಘಟ್ಟ ಕ್ಷೇತ್ರದ ಮಾಜಿ ಶಾಸಕ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಭಕ್ತರಹಳ್ಳಿಯ ಬಿ.ವೆಂಕಟರಾಯಪ್ಪ ಸ್ವಾತಂತ್ರ್ಯ ಹೋರಾಟಗಾರರಿಗೆ ಸರ್ಕಾರ ನೀಡುವ ಪಿಂಚಣಿಯನ್ನೂ ಪಡೆಯುತ್ತಿರಲಿಲ್ಲ. ಇವರನ್ನೆಲ್ಲ ಗೌರವಿಸುವ ಸಲುವಾಗಿ ನಾನು ಗ್ರಾಮ ಪಂಚಾಯತಿ ಉಪಾಧ್ಯಕ್ಷನಾದಾಗ ಪಂಚಾಯತಿ ಕಚೇರಿ ಮುಂಭಾಗದಲ್ಲಿ ಗಾಂಧಿ ಪ್ರತಿಮೆ ಹಾಗೂ ಭಕ್ತರಹಳ್ಳಿಯ ಸ್ವಾತಂತ್ರ್ಯ ಹೋರಾಟಗಾರರ ಹೆಸರಿನ ಫಲಕವನ್ನು ಹಾಕಿಸಿದೆ’ ಎಂದು ಗ್ರಾಮದ ಧೀಮಂತ ವ್ಯಕ್ತಿಗಳನ್ನು ನೆನೆಯುತ್ತಾರೆ ಹಿರಿಯರಾದ ವೆಂಕಟಮೂರ್ತಿಯವರು.
ಭಕ್ತರಹಳ್ಳಿಯ ಹಿರಿಯ ಮುತ್ಸದ್ಧಿ ಬಂಡಿ ನಾರಾಯಣಪ್ಪನವರು ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದವರಿಗೆ ಹಣಕಾಸಿನ ನೆರವು, ಗುಪ್ತ ಪತ್ರ ರವಾನೆ, ಕಾರ್ಯಾಚರಣೆಗಳ ಯೋಜನೆ ಎಲ್ಲವನ್ನೂ ತಮ್ಮ ಮನೆಯಿಂದಲೇ ನಡೆಸುತ್ತಿದ್ದರು. ಬಂಡಿನಾರಾಯಣಪ್ಪ ಆಗಿನ ಕಾಲದಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಗೆ ಪರೋಕ್ಷವಾಗಿ ಮಹಾಪೋಷಕರಾಗಿದ್ದರು. ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಜನರ ಮನದಲ್ಲಿ ಹಚ್ಚಿದವರಲ್ಲಿ ಇವರು ಪ್ರಮುಖರು. ಆಗ ಸ್ವಾತಂತ್ರ್ಯ ಹೋರಾಟಗಾರರಿಗೆ ಪೋಷಕರ ಅತ್ಯಗತ್ಯವಿತ್ತು. ಆ ಸ್ಥಾನವನ್ನು ಇವರು ತುಂಬಿದ್ದಲ್ಲದೇ ತಮ್ಮ ಮಕ್ಕಳಾದ ಬಿ.ಎನ್.ಕ್ಯಾತಣ್ಣ ಮತ್ತು ಬಿ.ಎನ್.ಪುಟ್ಟಣ್ಣ ಅವರನ್ನೂ ಈ ರಾಷ್ಟ್ರೀಯ ಚಳವಳಿಗೆ ತಂದರು. ಬ್ರಿಟಿಷರ ವಿರುದ್ಧದ ಚಳುವಳಿಯಲ್ಲಿ ಬಂಡಿ ನಾರಾಯಣಪ್ಪನವರ ಮಕ್ಕಳು ಸೆರೆಮನೆ ಸೇರಿದರು.
ಭಕ್ತರಹಳ್ಳಿಯ ಗ್ರಾಮ ಪಂಚಾಯತಿ ಕಚೇರಿಯ ಆವರಣದಲ್ಲಿರುವ ಭಕ್ತರಹಳ್ಳಿಯ ಸ್ವಾತಂತ್ರ್ಯ ಹೋರಾಟಗಾರರ ಸ್ಮರಣಾರ್ಥ ಗಾಂಧಿ ಪ್ರತಿಮೆ ಮತ್ತು ಹೋರಾಟಗಾರರ ಹೆಸರಿನ ಫಲಕದ ಮುಂದೆ ನಿಂತಾಗ ನಮ್ಮ ಹಿರಿಯರ ನಿಸ್ವಾರ್ಥ ಸೇವೆ, ದೇಶಪ್ರೇಮ, ಸ್ವಾತಂತ್ರ್ಯದ ಕಿಚ್ಚು ರೋಮಾಂಚನವನ್ನು ಉಂಟುಮಾಡುತ್ತದೆ.