Home News ಹಣ ಬಾಕಿ ಉಳಿಸಿಕೊಂಡ ಕಸಾಪ ಜಿಲ್ಲಾಧ್ಯಕ್ಷರ ಬಗ್ಗೆ ಶಾಸಕ ಎಂ.ರಾಜಣ್ಣ ಅಸಮಧಾನ

ಹಣ ಬಾಕಿ ಉಳಿಸಿಕೊಂಡ ಕಸಾಪ ಜಿಲ್ಲಾಧ್ಯಕ್ಷರ ಬಗ್ಗೆ ಶಾಸಕ ಎಂ.ರಾಜಣ್ಣ ಅಸಮಧಾನ

0

‘ಕನ್ನಡ ನಾಡು ನುಡಿಯನ್ನು ಕಟ್ಟುವ ಕಸಾಪದ ಹಣಕಾಸಿನ ವಿಚಾರದಲ್ಲಿ ಪರಿಶುದ್ಧವಾಗಿರಬೇಕು. ಅತ್ಯುತ್ತಮವಾಗಿ ಕಸಾಪ ಕಾರ್ಯಕ್ರಮಗಳನ್ನು ಮಾಡಿರುವ ನಿಕಟ ಪೂರ್ವ ಅಧ್ಯಕ್ಷರಿಗೆ ಒಂಭತ್ತು ತಿಂಗಳುಗಳಾದರೂ ಹಣ ಬಾಕಿ ಉಳಿಸಿಕೊಂಡಿರುವುದು ಸರಿಯಲ್ಲ. ತಕ್ಷಣವೇ ಹಣ ಸಂದಾಯಮಾಡಿ’ ಎಂದು ಶಾಸಕ ಎಂ.ರಾಜಣ್ಣ ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಕೈವಾರ ಶ್ರೀನಿವಾಸ್ಗೆ ಸೂಚಿಸಿದರು.
ನಗರದಲ್ಲಿ ಬುಧವಾರ ಜಿಲ್ಲಾ ಕಸಾಪ ಸಮ್ಮೇಳನಕ್ಕೆ ಪತ್ರಮುಖೇನ ಶಾಸಕ ಎಂ.ರಾಜಣ್ಣ ಅವರನ್ನು ಆಹ್ವಾನಿಸಲು ಬಂದಿದ್ದ ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಕೈವಾರ ಶ್ರೀನಿವಾಸ್ ಅವರ ಕಾರ್ಯವೈಖರಿಯ ಬಗ್ಗೆ ಅಸಮಧಾನ ವ್ಯಕ್ತಪಡಿಸಿ ಅವರು ಮಾತನಾಡಿದರು.
ಕನ್ನಡದ ಕೆಲಸದಲ್ಲಿ ತೊಡಗಿರುವವರೆಲ್ಲ ಹೊಂದಾಣಿಕೆಯಿಂದ ಇರಬೇಕು. ಕಸಾಪ ನಿಕಟಪೂರ್ವ ತಾಲ್ಲೂಕು ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಅತ್ಯುತ್ತಮವಾಗಿ ಕೆಲಸ ಮಾಡಿದ್ದು ನಮ್ಮ ಗಮನಕ್ಕೂ ಬಂದಿದೆ. ಅವರಿಗೆ ಕೊಡಬೇಕಾದ ಕೇಂದ್ರ ಕಸಾಪ ಅನುದಾನ 30,600 ರೂ ಹಣವನ್ನು ಏಕೆ ತಡೆಹಿಡಿದಿದ್ದೀರ. ತಕ್ಷಣವೇ ಹಣವನ್ನು ಚುಕ್ತಾ ಮಾಡಿ ಎಂದು ಹೇಳಿದರು.
ತನಗೆ ಕಸಾಪ ಅನುದಾನದ ಹಣವೇ ಬಂದಿಲ್ಲ ಎಂದ ಜಿಲ್ಲಾ ಘಟಕದ ಅಧ್ಯಕ್ಷ ಕೈವಾರ ಶ್ರೀನಿವಾಸ್, ನಿಕಟಪೂರ್ವ ತಾಲ್ಲೂಕು ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಅವರು ಕೇಂದ್ರ ಕಸಾಪ ಗೌರವಾಧ್ಯಕ್ಷರಿಂದ ಹಣ ನೀಡಿರುವ ಬಗ್ಗೆ ಪತ್ರವನ್ನು ತೋರಿಸಿದ ನಂತರ ಒಪ್ಪಿಕೊಂಡರು.
ಕಸಾಪ ನಿಕಟಪೂರ್ವ ತಾಲ್ಲೂಕು ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಮಾತನಾಡಿ, ಕಸಾಪ ತಾಲ್ಲೂಕು ಅಧ್ಯಕ್ಷನಾಗಿ ಸುಮಾರು ಮುನ್ನೂರು ಕಾರ್ಯಕ್ರಮವನ್ನು ಮಾಡಿದ್ದೇನೆ. ಆರು ದತ್ತಿ ಕಾರ್ಯಕ್ರಮಗಳ ಹಣ 8,100 ರೂಗಳು, ಕಚೇರಿ ನಿರ್ವಹಣೆ ಎರಡನೇ ಕಂತು 7,500 ರೂಗಳು, 102ನೇ ವರ್ಷದ ಸಂಸ್ಥಾಪನಾ ದಿನಾಚರಣೆಯ 5,000 ರೂಗಳು ಮತ್ತು ಕರ್ನಾಟಕ ಏಕೀಕರಣ ವಜ್ರಮಹೋತ್ಸವ ಕಾರ್ಯಕ್ರಮದ್ದು 10 ಸಾವಿರ ರೂಗಳು ಸೇರಿದಂತೆ ಒಟ್ಟಾರೆ 30,600 ರೂಗಳು ಬರಬೇಕು. ಈ ಎಲ್ಲಾ ಕಾರ್ಯಕ್ರಮಗಳ ಆಹ್ವಾನ ಪತ್ರಿಕೆ, ಪತ್ರಿಕಾ ವರದಿ, ಛಾಯಾಚಿತ್ರಗಳು, ಕಾರ್ಯಕ್ರಮಗಳ ಖರ್ಚು ವೆಚ್ಚದ ರಸೀದಿಗಳನ್ನು ಲಗತ್ತಿಸಿ ಆಗಿನ ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಬೈಯಣ್ಣ ಅವರಿಗೆ ನೀಡಿ ಹಿಂಬರಹ ಪಡೆದಿದ್ದೇನೆ. ಕೊಟ್ಟು ವರ್ಷವಾಗುತ್ತಾ ಬಂದರೂ ಹಣ ನೀಡದೇ ಸತಾಯಿಸುತ್ತಿದ್ದಾರೆ. ಈ ಬಗ್ಗೆ ಕೇಂದ್ರ ಕಸಾಪದ ವಿವಿಧ ಪದಾಧಿಕಾರಿಗಳಿಗೆ ನಾನು ಪತ್ರ ಬರೆದಿದ್ದು, ಅವರಿಂದ ಜಿಲ್ಲಾಧ್ಯಕ್ಷರಿಗೆ ಹಣ ನೀಡಿರುವುದಾಗಿ ಮಾಹಿತಿ ಬಂದಿದೆ.
ವೈವಿಧ್ಯಮಯವಾಗಿ ಕಾರ್ಯಕ್ರಮವನ್ನು ಮಾಡಿ ಕಸಾಪವನ್ನು ತಾಲ್ಲೂಕಿನ ಮೂಲೆಮೂಲೆಗೂ ಮುಟ್ಟಿಸಲು ಸಫಲರಾದರೂ ಒಂದೇ ವರ್ಷಕ್ಕೆ ಅವಧಿಯನ್ನು ಮೊಟಕುಗೊಳಿಸಿ ಬೇರೊಬ್ಬರನ್ನು ಅಧ್ಯಕ್ಷರನ್ನಾಗಿ ನಿಯೋಜಿಸಿದರು. ಅಂದಿನಿಂದ ಕಸಾಪ ಕಾರ್ಯಕ್ರಮಗಳು ಸ್ಥಗಿತಗೊಂಡವು. ದತ್ತಿ ಕಾರ್ಯಕ್ರಮಗಳು ನಡೆದಿಲ್ಲ. ಶಾಲೆಗೊಂದು ಕನ್ನಡ ಕಾರ್ಯಕ್ರಮ ಉದ್ಘಾಟನೆ ದಿನವೇ ಸಮಾರೋಪ ಮಾಡಿದ ಕೀರ್ತಿ ಇವರದ್ದು, ಶಾಲೆಗಳಲ್ಲಿ ಕನ್ನಡದ ಕಾರ್ಯಕ್ರಮ ಮಾಡದೆ ತಾಲ್ಲೂಕು ಕಸಾಪ ನಿಷ್ಕ್ರಿಯವಾಗಿದೆ. ತನ್ನ ಏಕಮುಖ ನಿರ್ಣಯ ಮತ್ತು ಸರ್ವಾಧಿಕಾರಿ ಧೋರಣೆಯಿಂದ ಜಿಲ್ಲಾಧ್ಯಕ್ಷರು ಕಸಾಪಗೆ ಕಪ್ಪುಚುಕ್ಕೆಯಂತಾಗಿದ್ದಾರೆ ಎಂದು ಆರೋಪಿಸಿದರು.
ಶಾಸಕರ ಸೂಚನೆಯ ಮೇರೆಗೆ ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಕೈವಾರ ಶ್ರೀನಿವಾಸ್ ಶನಿವಾರದಂದು ಹಣವನ್ನು ಪೂರ್ತಿಯಾಗಿ ಸಂದಾಯ ಮಾಡುವುದಾಗಿ ಒಪ್ಪಿಕೊಂಡರು.
ಕಸಾಪ ಗುಡಿಬಂಡೆ ತಾಲ್ಲೂಕು ಘಟಕದ ಅಧ್ಯಕ್ಷೆ ಅನುರಾಧಾ ಆನಂದ್, ಜಿಲ್ಲಾ ಘಟಕದ ಉಪಾಧ್ಯಕ್ಷ ಎಸ್.ಶಂಕರ್, ಗುಡಿಬಂಡೆ ಆನಂದ್, ಮಾಜಿ ಪುರಸಭಾ ಸದಸ್ಯ ಲಕ್ಷ್ಮಿನಾರಾಯಣ್ ಹಾಜರಿದ್ದರು.