Home News ಹತ್ತು ಅಡಿ ಎತ್ತರದ ಬದನೆ ಗಿಡ

ಹತ್ತು ಅಡಿ ಎತ್ತರದ ಬದನೆ ಗಿಡ

0

ಕೆಲವು ವರ್ಷಗಳ ಹಿಂದೆ ಎಲ್ಲೆಡೆ ಬಿ.ಟಿ. ಬದನೆ ಅರ್ಥಾತ್ ಕುಲಾಂತರಿ ಬದನೆಯದ್ದೇ ಚರ್ಚೆ ನಡೆಯುತ್ತಿತ್ತು. ಸದ್ಯಕ್ಕೆ ಬಿ.ಟಿ ಬದನೆ ದೇಶಕ್ಕೆ ಬೇಡ ಎಂದು ಕೇಂದ್ರ ಸರ್ಕಾರ ತೀರ್ಮಾನಿಸಿದೆ.
ಈ ಬದನೆ ಗಿಡಗಳು ಮೂರು ನಾಲ್ಕು ವರ್ಷಗಳವರೆಗೂ ಕುಬ್ಜಮರಗಳಾಗಿ ಬೆಳೆಯುತ್ತವೆ ಮತ್ತು ಅಡುಗೆಕೋಣೆಯಲ್ಲಿ ಬದನೆ ಮೇಳಕ್ಕೆ ಕಾರಣವಾಗುತ್ತವೆ. ಆದರೆ ನಗರದ ಇದ್ಲೂಡು ರಸ್ತೆಯಲ್ಲಿರುವ ಎಸ್.ಶಂಕರ್ ಅವರ ಮನೆಯಲ್ಲಿ ಹತ್ತು ಅಡಿಗೂ ಹೆಚ್ಚು ಎತ್ತರಕ್ಕೆ ಬೆಳೆದಿರುವ ಬದನೆ ಗಿಡ ಆಕರ್ಷಣೆಗೆ ಹಾಗೂ ಅಚ್ಚರಿಗೆ ಕಾರಣವಾಗಿದೆ.
ಎರಡು ವರ್ಷಗಳ ಹಿಂದೆ ಮನೆ ಬಳಕೆಗೆಂದು ನಾಟಿ ಮಾಡಿದ ಬದನೆ ಗಿಡ ಕಾಯಿಗಳನ್ನು ಬಿಡುತ್ತಲೇ ನೋಡನೋಡುತ್ತಿದ್ದಂತೆಯೇ ಎತ್ತರೆತ್ತರಕ್ಕೆ ಬೆಳೆದಿದೆ. ಈಗ ಸುಮಾರು ಹತ್ತು ಅಡಿಯಷ್ಟು ಬೆಳೆದಿರುವ ಬದನೆ ಗಿಡ ಇನ್ನೂ ಬೆಳೆಯುತ್ತಲೇ ಸಾಗಿದೆ.
19oct1‘ಬದನೆಗೆ ಹೆಚ್ಚಿನ ಪೋಷಣೆಯ ಅಗತ್ಯವಿಲ್ಲ. ಬೀಜಗಳಿಂದ ಸಸ್ಯಾಭಿವೃದ್ಧಿ ಮಾಡಬಹುದು. ಬೆಳೆಸಬಹುದು. ಕುಂಡಗಳಲ್ಲೂ ಬೆಳೆಸಬಹುದು. ಗಿಡ ವರ್ಷದಲ್ಲಿ ನಾಲ್ಕರಿಂದ ಐದು ಸಲ ಕಾಯಿ ಬಿಡುತ್ತವೆ. ಹಾಗಾಗಿ ಮನೆಯ ಬಳಿ ನಾಟಿ ಮಾಡಿದೆವು. ನಾಟಿ ತಳಿಯಾದ್ದರಿಂದ ಸಾಕಷ್ಟು ಬದನೆಕಾಯಿಗಳು ಬಿಡುತ್ತಿವೆ. ನಮಗೆ ಹೆಚ್ಚಾಗಿದ್ದು ಪರಿಚಿತರು, ಅಕ್ಕಪಕ್ಕದ ಮನೆಯವರಿಗೆ ಕೊಡುತ್ತೇವೆ. ಅದರ ಬೆಳವಣಿಗೆ ಮಾತ್ರ ನಮಗೂ ಸೇರಿದಂತೆ ಹಲವರು ಅಚ್ಚರಿ ಪಡುವ ರೀತಿಯಲ್ಲಿದೆ. ಸಾಮಾನ್ಯವಾಗಿ ನಾವು ಮೈ ಬಗ್ಗಿಸಿ ಕಾಯಿ ಕೀಳುವ ಗಿಡವು ಈಗ ತಲೆ ಎತ್ತಿ ಕಾಯಿ ಕೀಳುವಂತೆ ಬೆಳೆದಿದೆ’ ಎಂದು ಎಸ್.ಶಂಕರ್ ತಿಳಿಸಿದರು.
’ಮಾಗಿದ ಎರಡು ಬದನೆ ಹಣ್ಣು ಕೊಯ್ದು ಬೀಜ ಬೇರ್ಪಡಿಸಿ, ತೊಳೆದು ಬಿಸಿಲಲ್ಲಿ ಒಣಗಿಸಿ ನಂತರ ಹತ್ತಿಬಟ್ಟೆಯಲ್ಲಿ ಕಟ್ಟಿ ಅದನ್ನು ಯಾವುದೋ ಡಬ್ಬದಲ್ಲಿಟ್ಟು ಭದ್ರವಾಗಿ ಕಾಪಿಡುತ್ತೇವೆ. ಸ್ವಲ್ಪ ಸೆಗಣಿಯೊಂದಿಗೆ ಒಂದು ಹಿಡಿ ಬೀಜಗಳನ್ನು ಸೇರಿಸಿ ಮಿಶ್ರಮಾಡಿ ಹತ್ತಿಬಟ್ಟೆಯಲ್ಲಿ ಕಟ್ಟಿ, ಅದಕ್ಕೆ ನೀರು ಸಿಂಪಡಣೆ ಮಾಡಿ ತೂಗು ಹಾಕುತ್ತೇವೆ. ಹೀಗೆ ಎರಡು ವಾರ ಮಾಡಿ, ಆ ಬಳಿಕ ಈ ಗಂಟು ಬಿಚ್ಚಿನೋಡಿದರೆ ಬೀಜಗಳಲ್ಲಿ ಪುಟಾಣಿ ಸಸ್ಯಗಳು ಜೀವತಾಳಿರುತ್ತವೆ. ಆ ಬಳಿಕ ಪಾತಿ ಮಾಡಿ ನಟ್ಟರಾಯಿತು. ಮತ್ತೆರಡು ತಿಂಗಳಲ್ಲಿ ಬದನೆ ಗಿಡದಲ್ಲಿ ಹೂ, ಮತ್ತೆ ಕೆಲ ದಿನದಲ್ಲಿ ಕಾಯಿ ಆಗಮನ. ಬದನೆ ಹೂಗಳನ್ನು ಮಾತನಾಡಿಸಲು ಬರುವ ಪಾತರಗಿತ್ತಿಗಳ ಲೋಕವೇ ಬೇರೆ’ ಎಂದು ವಿವರಿಸಿದರು.