Home News ಹಾರಾಟ ನಡೆಸಿವೆ ಚಿಟ್ಟೆಗಳು

ಹಾರಾಟ ನಡೆಸಿವೆ ಚಿಟ್ಟೆಗಳು

0

ಮುಂಗಾರು ಪ್ರಾರಂಭವಾದ ನಂತರ ಈಚೆಗೆ ತಾಲ್ಲೂಕಿನೆಲ್ಲೆಡೆ ರಸ್ತೆಗಳ ಅಂಚಿನಲ್ಲಿ ಪೊದೆಗಳಿರುವೆಡೆ ಯಥೇಚ್ಛವಾಗಿ ಹಳದಿ ಬಣ್ಣದ ಚಿಟ್ಟೆಗಳು ಕಂಡು ಬರುತ್ತಿವೆ. ನಗರದಿಂದ ಹೊರವಲಯಕ್ಕೆ ವಾಹನಗಳಲ್ಲಿ ಹೋಗುವಾಗ ರಸ್ತೆಯ ಅಂಚಿನಲ್ಲಿ ಚಿಟ್ಟೆಗಳ ಹಾರಾಟ ನಡೆಸಿವೆ.
ಈ ಚಿಟ್ಟೆಗಳು ವರ್ಷಪೂರ್ತಿ ಇದ್ದರೂ ಈ ತಿಂಗಳಿನಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಇದಕ್ಕೆ ಕಾರಣ ಮಳೆ ಬಿದ್ದ ನಂತರ ಅದರ ಆಹಾರ ಸಸ್ಯಗಳು ಚಿಗುರುತ್ತವೆ ಮತ್ತು ಚಿಗುರುವ ಸಸ್ಯಗಳನ್ನು ತಿಂದ ಲಾರ್ವಾಗಳೆಲ್ಲ ಕೋಶಾವಸ್ಥೆಗೆ ಹೋಗಿ ಚಿಟ್ಟೆಗಳಾಗುತ್ತಿವೆ.

ಶಿಡ್ಲಘಟ್ಟದ ಹೊರವಲಯದಲ್ಲಿ ಕಂಡುಬರುತ್ತಿರುವ ಕಾಮನ್‌ ಎಮಿಗ್ರೆಂಟ್‌ ಎಂದು ಆಂಗ್ಲ ಭಾಷೆಯಲ್ಲಿ ಕರೆಯಲ್ಪಡುವ ತಿಳಿಹಳದಿಬಣ್ಣದ ಚಿಟ್ಟೆ

ಒಂದೆಡೆ ವಾಹನಗಳಿಗೆಲ್ಲಾ ಬಡಿಯುತ್ತಾ ಪಟಪಟಿಸುತ್ತಾ ಹಲವಾರು ಹಳದಿ ಬಣ್ಣದ ಚಿಟ್ಟೆಗಳು ದಾರಿಹೋಕರಿಗೆ ಆಹ್ಲಾದವನ್ನುಂಟು ಮಾಡುತ್ತಿದ್ದರೆ, ಮತ್ತೊಂದೆಡೆ ವೇಗದ ವಾಹನಕ್ಕೆ ಬಡಿದು ಹಲವಾರು ಚಿಟ್ಟೆಗಳು ಇಹಲೋಕವನ್ನು ತ್ಯಜಿಸುತ್ತಿವೆ.
ಹೆಚ್ಚಾಗುತ್ತಿರುವ ನಾನಾ ಬಗೆಯ ಮಾಲಿನ್ಯಗಳ ಪರಿಣಾಮದಿಂದ ನಮ್ಮ ಮನೆಯಂಗಳದಲ್ಲಿ, ಉದ್ಯಾನಗಳಲ್ಲಿ ಯಥೇಚ್ಛವಾಗಿ ಕಾಣಸಿಗುತ್ತಿದ್ದ ಚಿಟ್ಟೆಗಳ ಸಂಖ್ಯೆ ಕ್ರಮೇಣ ಇಳಿಮುಖವಾಗುತ್ತಿದೆ ಎಂದು ಎಲ್ಲರೂ ಹೇಳುತ್ತಿರುತ್ತಾರೆ. ಆದರೆ ಈ ಹಳದಿ ಬಣ್ಣದ ಪಾತರಗಿತ್ತಿಗಳು ನಮ್ಮದೇ ಕನಸಿನ ತುಣುಕುಗಳಂತೆ ಕಂಡುಬರುತ್ತಿವೆ.
ಆರೋಗ್ಯಕರ ಪರಿಸರವಿದ್ದರೆ ಮಾತ್ರ ಹೆಚ್ಚಿನ ಸಂಖ್ಯೆಯಲ್ಲಿ ವಿವಿಧ ಪ್ರಭೇದಗಳ ಚಿಟ್ಟೆಗಳು ವಾಸಿಸಲು ಸಾಧ್ಯ. ಅಲ್ಪಾಯುಷಿಯದರೂ ಪ್ರಕೃತಿಯ ಪರಾಗ ಸ್ಪರ್ಶ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ.
ಶಿಡ್ಲಘಟ್ಟದ ಹೊರವಲಯದಲ್ಲಿ ಕಂಡುಬರುತ್ತಿರುವ ಕಾಮನ್‌ ಎಮಿಗ್ರೆಂಟ್‌ ಎಂದು ಆಂಗ್ಲ ಭಾಷೆಯಲ್ಲಿ ಕರೆಯಲ್ಪಡುವ ತಿಳಿಹಳದಿಬಣ್ಣದ ಚಿಟ್ಟೆ

‘ಮಕ್ಕಳಿಗೆ ಮುಂದಿನ ಪೀಳಿಗೆಗೆ ‘ಚಿಟ್ಟೆ’ಗಳ ಮಹತ್ವವನ್ನು ಪರಿಚಯಿಸುವ ಕ್ರಮವಾಗಿ ಚಿಟ್ಟೆ ಉದ್ಯಾನವನ್ನು ಪಟ್ರಹಳ್ಳಿಯ ಸಸ್ಯೋದ್ಯಾನದಲ್ಲಿ ಸ್ಥಾಪಿಸಲಿದ್ದೇವೆ. ನಾವೆಲ್ಲರೂ ಹೂ ಬಿಡುವ ಗಿಡಗಳನ್ನು ಮನೆಯಂಗಳದಲ್ಲಿ ಬೆಳೆಸುವುದು, ಉದ್ಯಾನಗಳಲ್ಲಿ ಚಿಟ್ಟೆಗಳನ್ನು ಸೆಳೆಯಲು ಸೂಕ್ತ ಸಸ್ಯವರ್ಗ ಪೋಷಿಸುವುದು, ಎಲ್ಲರಿಗೂ ಚಿಟ್ಟೆ ಜೀವನ ಕ್ರಮ ಹಾಗೂ ಅದರಿಂದ ನಮಗಾಗುವ ಅನುಕೂಲ ತಿಳಿಸುವ ಪ್ರಾತ್ಯಕ್ಷಿಕೆ ನೀಡುವುದು ಇವೆಲ್ಲವೂ ಚಿಟ್ಟೆಗಳ ಸಂತತಿ ವೃದ್ಧಿಸಲು ಸಹಾಯ ಮಾಡಬಲ್ಲವು‘ ಎನ್ನುತ್ತಾರೆ ವಲಯ ಅರಣ್ಯಾಧಿಕಾರಿ ತಿಮ್ಮರಾಯಪ್ಪ.