Home News ಹಾಲು ಉತ್ಪಾದಕರ ಸಹಕಾರ ಸಂಘದ ಮೊದಲನೇ ಅಂತಸ್ತಿನ ಕಟ್ಟಡದ ಉದ್ಘಾಟನೆ

ಹಾಲು ಉತ್ಪಾದಕರ ಸಹಕಾರ ಸಂಘದ ಮೊದಲನೇ ಅಂತಸ್ತಿನ ಕಟ್ಟಡದ ಉದ್ಘಾಟನೆ

0

ಬಯಲುಸೀಮೆಯ ರೈತರ ಜೀವನಮಟ್ಟ ಸುಧಾರಣೆಗೆ ಹೈನುಗಾರಿಕೆ ಕಾರಣವಾಗಿದೆ ಎಂದು ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ ತಿಳಿಸಿದರು.
ತಾಲ್ಲೂಕಿನ ತುಮ್ಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಂತಡಪಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಮೊದಲನೇ ಅಂತಸ್ತಿನ ಕಟ್ಟಡದ ಉದ್ಘಾಟನೆಯನ್ನು ಮಂಗಳವಾರ ನೆರವೇರಿಸಿ ಅವರು ಮಾತನಾಡಿದರು.
ಕಳೆದ ಮೂರು ದಶಕಗಳ ಹಿಂದೆ ಈ ಭಾಗದ ರೈತರ ಉಪಕಸುಬಾಗಿದ್ದ ಹೈನುಗಾರಿಕೆ ಇದೀಗ ಮುಖ್ಯ ಕಸುಬಾಗಿದೆ. ಅವಿಭಜಿತ ಜಿಲ್ಲೆಯಲ್ಲಿ ಇಂದು ಕುಡಿಯುವ ನೀರಿಗೂ ಪರಿತಪಿಸುವ ವಾತಾವರಣ ನಿರ್ಮಾಣವಾಗಿದ್ದು ರೈತರು ಕೃಷಿ ಮಾಡಲಾಗುತ್ತಿಲ್ಲ. ಬಹುತೇಕ ರೈತರು ಮನೆಯಲ್ಲಿ ಒಂದೆರಡು ಹಸುಗಳನ್ನು ಸಾಕಿ ಜೀವನ ನಡೆಸುವಂತಾಗಿದೆ ಎಂದರು.
ಕುಡಿಯುವ ನೀರಿಗೂ ಪರದಾಡುವ ಸ್ಥಿತಿಯಿದ್ದರೂ ಈ ಭಾಗದ ರೈತರು ಅದರಲ್ಲಿಯೂ ಮಾತೆಯರು ಹಾಲಿನ ಉತ್ಪಾದನೆಯಲ್ಲಿ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದು ಹಾಲು ಉತ್ಪಾದನೆಯಲ್ಲಿ ಗುಣಮಟ್ಟ ಕಾಯ್ದುಕೊಳ್ಳುವಂತೆ ಕರೆ ನೀಡಿದರು.
ಎಚ್.ಡಿ.ದೇವೇಗೌಡ ಹಾಗೂ ಜಯಪ್ರಕಾಶ್ ನಾರಾಯಣ್ ಚಾರಿಟೆಬಲ್ ಟ್ರಸ್ಟ್ನ ಅಧ್ಯಕ್ಷ ಬಿ.ಎನ್.ರವಿಕುಮಾರ್ ಮಾತನಾಡಿ, ಯಾವುದೇ ಒಂದು ಸಂಘ ಅಭಿವೃದ್ಧಿಯಾಗಬೇಕಾದರೆ ಅದಕ್ಕೆ ಸಂಘದ ಎಲ್ಲಾ ಸದಸ್ಯರೂ ಮತ್ತು ಹಾಲು ಉತ್ಪಾದಕರ ಸಹಕಾರ ಅತ್ಯಗತ್ಯ ಎಂದರು. ಸಹಕಾರ ಸಂಘಗಳಲ್ಲಿ ಯಾವುದೇ ರೀತಿಯ ರಾಜಕೀಯ ಬೆರೆಸದೇ ಸಂಘದ ಏಳಿಗೆಗಾಗಿ ಎಲ್ಲರೂ ಶ್ರಮಿಸಬೇಕು. ಹಾಲು ಉತ್ಪಾದಕರು ಗುಣಮಟ್ಟದ ಹಾಲು ಪೂರೈಸುವುದರೊಂದಿಗೆ ಒಕ್ಕೂಟದಿಂದ ಸಿಗುವ ಎಲ್ಲಾ ಸವಲತ್ತುಗಳನ್ನು ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದರು.
ಶಿಡ್ಲಘಟ್ಟ ಕೋಚಿಮುಲ್ ಶಿಬಿರ ಘಟಕದ ಉಪವ್ಯವಸ್ಥಾಪಕ ಹನುಮಂತರಾವ್ ಮಾತನಾಡಿ, ರಾಸುಗಳಿಗೆ ಕಡ್ಡಾಯವಾಗಿ ವಿಮೆ ಮಾಡಿಸುವಂತೆ ಹಾಲು ಉತ್ಪಾದಕರಲ್ಲಿ ಮನವಿ ಮಾಡಿದರು. ಕಾಲ ಕಾಲಕ್ಕೆ ರಾಸುಗಳಿಗೆ ಲಸಿಕೆ ಹಾಕಿಸಬೇಕೆಂದು ಹೇಳಿದರು.
ಮುಖಂಡ ದೊಣ್ಣಹಳ್ಳಿ ರಾಮಣ್ಣ, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಚೀಮನಹಳ್ಳಿ ಸಿ.ಎಂ.ಗೋಪಾಲ್ ಮತ್ತಿತರರು ಮಾತನಾಡಿದರು.
ಈ ಸಂದರ್ಭದಲ್ಲಿ ಎಚ್.ಡಿ.ಡಿ ಹಾಗೂ ಜೆ.ಪಿ.ಎನ್ ಟ್ರಸ್ಟ್ ವತಿಯಿಂದ ವಿಕಲಚೇತನರಿಗೆ ಸಾಧನಾ ಸಲಕರಣೆ ವಿತರಿಸಲಾಯಿತು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ವಿ.ನಾಗರಾಜ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಲಕ್ಷ್ಮಿನಾರಾಯಣರೆಡ್ಡಿ, ಉಪಾಧ್ಯಕ್ಷ ಎಚ್.ನರಸಿಂಹಯ್ಯ, ಸದಸ್ಯ ರಾಜಶೇಖರ್, ಮುಖಂಡರಾದ ತುಮ್ಮನಹಳ್ಳಿ ರಾಮಕೃಷ್ಣಪ್ಪ, ಗೊರಮಡುಗು ರಾಮಾಂಜಿನಪ್ಪ, ತಾದೂರುರಘು, ಶ್ರೀನಿವಾಸಗೌಡ, ಜೆ.ಎಂ.ವೆಂಕಟೇಶ್, ಸಂಘದ ಅಧ್ಯಕ್ಷ ಸಿ.ಎಂ.ಮಾರೇಗೌಡ, ವಿಸ್ತರಣಾಧಿಕಾರಿ ಎಂ.ಬಿ.ಮಂಜುನಾಥ್ ಹಾಜರಿದ್ದರು.