ತಾಲ್ಲೂಕಿನ ರೈತರ ಜೀವನಮಟ್ಟ ಸುಧಾರಿಸಲು ಹೈನುಗಾರಿಕೆಯೇ ಮುಖ್ಯ ಕಾರಣವಾಗಿದೆ ಎಂದು ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ ಹೇಳಿದರು.
ತಾಲ್ಲೂಕಿನ ಮಳಮಾಚನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಗಿಲಡಪಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ೧೫ ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಲಾಗಿರುವ ನೂತನ ಕಟ್ಟಡದ ಉದ್ಘಾಟನೆಯನ್ನು ಗುರುವಾರ ನೆರವೇರಿಸಿ ವರು ಮಾತನಾಡಿದರು.
ಕಳೆದ ಮೂರು ದಶಕಗಳ ಹಿಂದೆ ಈ ಭಾಗದ ರೈತರ ಉಪಕಸುಬಾಗಿದ್ದ ಹೈನುಗಾರಿಕೆ ಇದೀಗ ಮುಖ್ಯ ಕಸುಬಾಗಿ ರೂಪುಗೊಂಡಿದೆ. ಈ ಭಾಗದಲ್ಲಿ ಕುಡಿಯುವ ನೀರಿಗೂ ಆಹಾಕಾರ ಶುರುವಾಗಿದ್ದು ಕೃಷಿ ಮಾಡಲಾಗದೇ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಹೈನುಗಾರಿಕೆಯನ್ನು ಅವಲಂಬಿಸಿದ್ದಾರೆ. ಪ್ರತಿನಿತ್ಯ ತಾಲ್ಲೂಕಿನಿಂದ ಸುಮಾರು ೧ ಲಕ್ಷ ಲೀಟರಿಗೂ ಹೆಚ್ಚು ಹಾಲು ಡೈರಿಗಳ ಮುಖಂತರ ಒಕ್ಕೂಟಕ್ಕೆ ಪೂರೈಸಲಾಗುತ್ತಿದೆ ಎಂದರು.
ಶಿಬಿರ ಘಟಕದ ಉಪವ್ಯವಸ್ಥಾಪಕ ಡಾ.ಬಿ.ವಿ.ಚಂದ್ರಶೇಖರ್ ಮಾತನಾಡಿ, ಶಿಡ್ಲಘಟ್ಟ ತಾಲ್ಲೂಕು ಹಾಲು ಉತ್ಪಾದನೆ ಮತ್ತು ಗುಣಮಟ್ಟದಲ್ಲಿ ಜಿಲ್ಲೆಯಲ್ಲಿಯೇ ಮೊದಲನೇ ಸ್ಥಾನದಲ್ಲಿದೆ. ಈ ಭಾಗದ ರೈತರು ತಮ್ಮ ರಾಸುಗಳಿಗೆ ವಿಮೆ ಮಾಡಿಸುವ ಮೂಲಕ ಕೋಚಿಮುಲ್ ನಿಂದ ಸಿಗುವ ಎಲ್ಲಾ ಸವಲತ್ತುಗಳನ್ನು ಪಡೆದುಕೊಂಡು ಆರ್ಥಿಕವಾಗಿ ಮತ್ತಷ್ಟು ಮುಂದುವರೆಯಬೇಕು ಎಂದರು.
ಅತಿ ಹೆಚ್ಚಿನ ಹಾಲು ಸರಬರಾಜು ಮಾಡಿರುವ ರೈತರಾದ ಶಿವನಂಜುಂಡಸ್ವಾಮಿ, ರಾಮರೆಡ್ಡಿ ಮತ್ತು ನಾರಾಯಣಗೌಡರನ್ನು ಸನ್ಮಾನಿಸಲಾಯಿತು.
ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಚಂದ್ರೇಗೌಡ, ಮುಗಿಲಡಪಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎಂ.ನಂಜಪ್ಪ, ನಿರ್ದೇಶಕರಾದ ಮುನಿಕದಿರಪ್ಪ, ಆರ್.ವೆಂಕಟೇಶ್, ಗಂಗಪ್ಪ, ನರಸಿಂಹಪ್ಪ, ವಿ.ವೆಂಕಟೇಶ್, ಚನ್ನಮ್ಮ ಹಾಜರಿದ್ದರು.