ಶ್ರೀಮದ್ಭಗವದ್ಗೀತೆ, ಉಪನಿಷತ್ತುಗಳು, ಬ್ರಹ್ಮಸೂತ್ರಗಳಿಗೆ ಭಾಷ್ಪಗಳನ್ನು ಬರೆದ ಮೊದಲಿಗರು ಶಂಕರಾಚಾರ್ಯರು ಎಂದು ಹಿರಿಯ ವಕೀಲ ಟಿ.ಎಸ್.ವಿಜಯಶಂಕರ್ ತಿಳಿಸಿದರು.
ನಗರದ ಅಗ್ರಹಾರ ಬೀದಿಯಲ್ಲಿರುವ ಏಕಾಂಬರೇಶ್ವರಸ್ವಾಮಿ ದೇವಾಲಯದಲ್ಲಿ ಹಾಗೂ ಶಂಕರ ಮಠದಲ್ಲಿ ಮಂಗಳವಾರ ರಾತ್ರಿ ‘ಶ್ರೀ ಶಂಕರ ವಿಜಯ’ ವಿಷಯದ ಕುರಿತಂತೆ ಉಪನ್ಯಾಸ ನೀಡಿ ಅವರು ಶಂಕರಾಚಾರ್ಯರ ಬಗ್ಗೆ ವಿವರಿಸಿದರು.
ಶಂಕರಾಚಾರ್ಯರ ಜೀವನ ಸಾಧನೆ ಹಿಮಾಲಯದಂತೆ ಮಹೋನ್ನತವಾದುವು. ನಶಿಸಿ ಹೋಗುತ್ತಿದ್ದ ಹಿಂದೂ ಧರ್ಮದ ಜಾಗೃತಿಗಾಗಿ ಅವರ ಸೇವೆ ಅನನ್ಯ. ಕಡಿಮೆ ವಯಸ್ಸಿನಲ್ಲಿ ಅವರು ಮನುಕುಲಕ್ಕೆ ಬೋಧಿಸಿದ ಉಪದೇಶಗಳು ಮತ್ತು ಚಿಂತನೆಗಳು ಹೃದಯ- ಮನಸ್ಸು ತಣಿಸಿ, ಭಾವಬುದ್ಧಿಗಳಿಗೆ ಪ್ರಚೋದನೆ ನೀಡುವಂತಹವು.
ಹಿಂದೂ ಧರ್ಮೀಯರಲ್ಲಿ ಆತ್ಮವಿಶ್ವಾಸ ಹುಟ್ಟಿಸಿ ದೇಶದ ಮೂಲೆ ಮೂಲೆಗಳಲ್ಲಿ ಸಂಚರಿಸಿ ತಮ್ಮ ಅದ್ವೈತ ತತ್ವದ ಮೂಲಕ ಧರ್ಮ ಜಾಗೃತಿಯನ್ನುಂಟುಮಾಡಿ ಹಿಂದೂ ಧರ್ಮವನ್ನು ಪುನರುತ್ತಾನಗೊಳಿಸಿದವರು ಶಂಕರಾಚಾರ್ಯರು. ತಾವು ಬದುಕಿದ್ದು ಕೇವಲ 32 ವರ್ಷಗಳಷ್ಟೇ ಆದರೂ ಆದಿ ಶಂಕರರು ಮಾಡಿದ ಕಾರ್ಯ, ಗಳಿಸಿದ ಕೀರ್ತಿ , ಅಪಾರವಾದುದು. ವೇದಗಳಲ್ಲಿನ ಸತ್ವವನ್ನೂ, ಸಾರವನ್ನು ತಮ್ಮದೇ ಆದ ನೆಲೆಯಲ್ಲಿ ನಿಷ್ಕರ್ಷಿಸುವ ಮೂಲಕ ಜಗತ್ತಿಗೆ ಪ್ರಕಾಶಪಡಿಸಿದವರು ಆಚಾರ್ಯ ಶಂಕರರು ಎಂದು ಹೇಳಿದರು.
ಹಿರಿಯ ವಕೀಲ ಟಿ.ಎಸ್.ವಿಜಯಶಂಕರ್ ಅವರನ್ನು ಶಿಡ್ಲಘಟ್ಟ ಬ್ರಾಹ್ಮಣ ಸಂಘದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು. ಜಿಲ್ಲಾ ಬ್ರಾಹ್ಮಣ ಸಭಾ ಅಧ್ಯಕ್ಷ ಎಂ.ವಾಸುದೇವರಾವ್, ತಾಲ್ಲೂಕು ಅಧ್ಯಕ್ಷ ಎ.ಎಸ್. ರವಿ, ಯುವಕ ಸಂಘದ ಅಧ್ಯಕ್ಷ ವಿ.ಕೃಷ್ಣ, ಜಿಲ್ಲಾ ಬ್ರಾಹ್ಮಣ ಸಂಘದ ಖಜಾಂಚಿ ಎಸ್.ವಿ. ನಾಗರಾಜ ರಾವ್, ವಿಪ್ರ ಪ್ರತಿಭಾ ಪುರಸ್ಕಾರ ಸೇವಾ ಟ್ರಸ್ಟ್ ಅಧ್ಯಕ್ಷ ಬಿ.ಆರ್. ಅನಂತಕೃಷ್ಣ, ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.