Home News ಹಿಪ್ಪುನೇರಳೆ ರೇಷ್ಮೆ ಬೆಳೆಗಾರನ ಮನೆಯ ಬಳಿ ಬಂದ ಟಸ್ಸಾರ್ ರೇಷ್ಮೆ ಪತಂಗ

ಹಿಪ್ಪುನೇರಳೆ ರೇಷ್ಮೆ ಬೆಳೆಗಾರನ ಮನೆಯ ಬಳಿ ಬಂದ ಟಸ್ಸಾರ್ ರೇಷ್ಮೆ ಪತಂಗ

0

ತಾಲ್ಲೂಕಿನ ಕೊತ್ತನೂರು ಗ್ರಾಮದ ರೇಷ್ಮೆ ಬೆಳೆಗಾರ ವೆಂಕಟಶಿವಾರೆಡ್ಡಿ ಅವರ ಮನೆಗೆ ಟಸ್ಸಾರ್ ರೇಷ್ಮೆ ಪತಂಗ ಭೇಟಿ ನೀಡಿರುವ ಸೋಜಿಗದ ಘಟನೆ ಶುಕ್ರವಾರ ನಡೆದಿದೆ.
ಎಂದಿನಂತೆ ವೆಂಕಟಶಿವಾರೆಡ್ಡಿ ಅವರು ಶುಕ್ರವಾರ ಬೆಳಿಗ್ಗೆ ಮನೆ ಮುಂದಿನ ರೇಷ್ಮೆ ಸಾಕಾಣಿಕಾ ಮನೆಗೆ ಹೋಗುವಾದ ಪಕ್ಕದಲ್ಲೇ ಬೆಳೆದಿದ್ದ ತೊಗರಿ ಗಿಡದ ಮೇಲೆ ಏನೋ ಹೊಸ ಬಣ್ಣ ಕಂಡಂತಾಗಿದೆ. ತಕ್ಷಣ ಹತ್ತಿರ ಹೋಗಿ ನೋಡಿದಾಗ ದೊಡ್ಡ ಗಾತ್ರದ ಪತಂಗ ಕಾಣಿಸಿದೆ. ಕಂದು ಬಣ್ಣದ ಸುಂದರವಾದ ಪತಂಗದ ರೆಕ್ಕೆಗಳ ಮೇಲೆ ಕಪ್ಪು, ಕೆಂಪು ಗುರುತುಗಳಿದ್ದು ಆಕರ್ಷಕವಾಗಿತ್ತು. ಅಗಲವಾದ ಅದರ ರೆಕ್ಕೆಗಳ ಮೇಲೆ ದೊಡ್ಡ ಕಣ್ಣುಗಳ ರೀತಿಯ ಗುರುತುಗಳಿದ್ದವು. ಪಾರದರ್ಶಕವಾಗಿ ಕನ್ನಡಿಯಂತೆ ಹೊಳ್ಳೆಯುತ್ತಿದ್ದ ಕಣ್ಣಿನಂಥ ಆಕೃತಿಯಲ್ಲಿ ಪ್ರತಿಬಿಂಬವನ್ನು ಕಾಣಬಹುದಿತ್ತು. ಅಚ್ಚರಿಗೊಂಡ ಅವರು ಮನೆಯವರನ್ನೆಲ್ಲಾ ಕರೆದು ತೋರಿಸಿದ್ದಾರೆ.
ಅದೇ ಗ್ರಾಮದ ಸ್ನೇಕ್ ನಾಗರಾಜ್ ಅವರನ್ನು ಕರೆದು ವಿಚಿತ್ರವಾದ, ಅಪರೂಪದ ಚಿಟ್ಟೆ ಬಂದಿದೆ ಎಂದು ತೋರಿಸಿದ್ದಾರೆ. ಅದನ್ನು ಕಂಡ ಸ್ನೇಕ್ ನಾಗರಾಜ್, ಅದನ್ನು ಟಸ್ಸಾರ್ ಪತಂಗವೆಂದು ಗುರುತಿಸಿದ್ದಾರೆ. ಟಸ್ಸಾರ್ ರೇಷ್ಮೆ ಹೆಚ್ಚಾಗಿ ಕಂಡು ಬರುವುದು ಈಶಾನ್ಯ ರಾಜ್ಯಗಳು, ಪಶ್ಚಿಮ ಬಂಗಾಳ ಮತ್ತು ಬಿಹಾರ ರಾಜ್ಯಗಳಲ್ಲಿ. ಅಷ್ಟು ದೂರದ ರಾಜ್ಯಗಳಲ್ಲಿ ಕಂಡುಬರುವ ಈ ಟಸ್ಸಾರ್ ರೇಷ್ಮೆ ಪತಂಗ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಅದರಲ್ಲೂ ರೇಷ್ಮೆ ಬೆಳೆಗಾರರ ಮನೆಯ ಮುಂದಿನ ಸಸ್ಯದ ಮೇಲೆ ಕಂಡು ಬಂದುದು ಅಚ್ಚರಿಯ ಸಂಗತಿಯಾಗಿದೆ.
ಬಾಂಬಿಕ್ಸ್ ತಳಿಯ ಹಿಪ್ಪುನೇರಳೆಗಿಡದ ಸೊಪ್ಪನ್ನು ತಿಂದು ಬೆಳೆಯುವ ರೇಷ್ಮೆ ಹುಳುಗಳನ್ನು ಸಾಕುವುದು ನಮ್ಮಲ್ಲಿ ರೂಢಿಯಲ್ಲಿದೆ. ಇಲ್ಲಿನ ಗ್ರಾಮೀಣ ಜನರಿಗೆ ಉದ್ಯೋಗ ಸೃಷ್ಠಿಸಿ, ಅಧಿಕ ಲಾಭ ತರುವ ಜನಪ್ರಿಯ ಕೃಷಿಯಾಗಿದೆ. ಅದೇ ಪಶ್ಚಿಮ ಬಂಗಾಳ ಮತ್ತು ಈಶಾನ್ಯ ರಾಜ್ಯಗಳಲ್ಲಿ ಟಸ್ಸಾರ್ ರೇಷ್ಮೆಯನ್ನು ಉತ್ಪಾದಿಸಲಾಗುತ್ತದೆ. ಆದರೆ ಅದರಿಂದ ರೇಷ್ಮೆ ತಗೆಯುವ ರೀತಿ ಮಾತ್ರ ವಿಭಿನ್ನವಾದುದು.
ನಮ್ಮಲ್ಲಿಯ ರೇಷ್ಮೆಯಲ್ಲಾದರೆ ಕುದಿಯುವ ನೀರಿಗೆ ರೇಷ್ಮೆಹುಳುಗಳ ಸಮೇತ ಗೂಡನ್ನು ಹಾಕಿ ನೂಲನ್ನು ತೆಗೆಯುತ್ತಾರೆ. ಟಸ್ಸಾರ್ನಲ್ಲಿ ಹಾಗಲ್ಲ. ರೇಷ್ಮೆಹುಳು ಗೂಡುಕಟ್ಟಿ ಅದರಿಂದ ಪತಂಗ ಹೊರಹೋದ ಮೇಲೆ ಆ ಗೂಡುಗಳನ್ನು ಸಂಸ್ಕರಿಸಿ ನೂಲು ತಯಾರಿಸಿ ರೇಷ್ಮೆ ಸೀರೆ ತಯಾರಿಸುತ್ತಾರೆ. ಟಸ್ಸರ್ ರೇಷ್ಮೆಯನ್ನು ವನ್ಯ ರೇಷ್ಮೆ ಎನ್ನುವರು. ಈಶಾನ್ಯ ರಾಜ್ಯಗಳ ಬುಡಕಟ್ಟು ಜನರು ದಟ್ಟ ಕಾಡುಗಳಲ್ಲಿ ಈ ರೇಷ್ಮೆಗೂಡುಗಳನ್ನು ಹುಡುಕಿ ತರುತ್ತಾರೆ. ಮೊದಲೆಲ್ಲ ಟಸ್ಸರ್ ರೇಷ್ಮೆ ನುಣುಪಿರುವುದಿಲ್ಲವೆಂದು ಹೆಣ್ಣುಮಕ್ಕಳಿಗೆ ಅಂಥ ಇಷ್ಟ ಆಗುತ್ತಿರಲಿಲ್ಲ. ಆದರೆ ವಿಭಿನ್ನತೆಯ ನೆವದಲ್ಲಿ ಮತ್ತು ಅಹಿಂಸಾ ರೇಷ್ಮೆ ಎಂಬ ಕಾರಣಕ್ಕೆ ಟಸ್ಸರ್ ರೇಷ್ಮೆಯನ್ನು ಈಗ ಇಷ್ಟಪಡುತ್ತಿದ್ದಾರೆ.
ಕೊತ್ತನೂರಿಗೆ ಬಂದಿದ್ದ ಟಸ್ಸಾರ್ ರೇಷ್ಮೆ ಪತಂಗ ಸೂರ್ಯನ ಬೆಳಕಿಗೆ ಮತ್ತು ಬೀಸುತ್ತಿದ್ದ ಆಷಾಢ ಮಾಸ ಗಾಳಿಗೆ ಕದಲಿ ರೆಕ್ಕೆ ಬಿಚ್ಚಿ ಗಗನಕ್ಕೆ ಹಾರಿತು. ತಾನೆಲ್ಲಿಂದ ಬಂದೆ ಎಂಬ ನಿಗೂಢತೆಯನ್ನು ತನ್ನೊಡಲಿನಲ್ಲಿಯೇ ಬಚ್ಚಿಚ್ಚುಕೊಂಡು ದೂರದಲ್ಲಿನ ಎತ್ತರದ ಮರಗಳ ಎಲೆಗಳ ಮಧ್ಯೆ ಕಣ್ಮರೆಯಾಯಿತು.

error: Content is protected !!