ವಾತಾವರಣದ ಏರುಪೇರಿನಿಂದಾಗಿ ತೋಟಗಳಲ್ಲಿ ಹಿಪ್ಪುನೇರಳೆ ಸರಿಯಾಗಿ ಬೆಳವಣಿಗೆಯಾಗದ ಕಾರಣ ಹಿಪ್ಪುನೇರಳೆ ಸೊಪ್ಪಿನ ಬೆಲೆ ಗಗನಮುಖಿಯಾಗಿದೆ.
ವಾತಾವರಣದಲ್ಲಿ ಹೆಚ್ಚಾಗಿರುವ ತೇವಾಂಶದಿಂದಾಗಿ ಹಿಪ್ಪುನೇರಳೆ ತೋಟಗಳಲ್ಲಿ ನಿಧಾನಗತಿಯಲ್ಲಿ ಬೆಳೆಯುತ್ತಿರುವ ಹಿಪ್ಪುನೇರಳೆ ಸೊಪ್ಪಿಗೆ ಬೇಡಿಕೆ ಹೆಚ್ಚಾಗಿದ್ದು, ಬಂಗಾರದ ಬೆಲೆ ಬಂದಿದೆ.
ಡಿಸೆಂಬರ್ ಆರಂಭದಿಂದ ಬೆಳಗಿನ ಜಾವ ಮಂಜಿನ ಹನಿಗಳು ದಟ್ಟವಾಗಿ ಬೀಳುತ್ತಿದ್ದವು. ಜನವರಿ ಕಳೆಯುವಷ್ಟರಲ್ಲಿ ಚಳಿ ಕಡಿಮೆಯಾಗಿ ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಾಗುವುದರಿಂದ ಸೊಪ್ಪು ಹುಲುಸಾಗಿ ಬೆಳೆಯುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ರೈತರ ಪಾಲಿಗೆ ವಾತಾವರಣ ವಿಭಿನ್ನವಾಗಿದೆ.
ಫೆಬ್ರುವರಿ ತಿಂಗಳಲ್ಲಿ ಅರ್ಧ ತಿಂಗಳು ಕಳೆಯುತ್ತಿದ್ದರೂ ಚಳಿ ಕಡಿಮೆಯಾಗಲಿಲ್ಲ ಇದರಿಂದ ಹಲವಾರು ತೋಟಗಳಿಗೆ ಬೂದುರೋಗ ಬಿದ್ದು ಬೆಳೆ ಕುಂಠಿತವಾಗಿದೆ. ಹಿಪ್ಪುನೇರಳೆ ಬೆಳೆ ಒಂದು ಬಾರಿ ಕಟಾವಾದ ನಂತರ 50 ದಿನಗಳಿಗೆ ಮತ್ತೊಂದು ಕಟಾವು ಮಾಡಬಹುದಾಗಿದೆ. ಚಳಿ ಹೆಚ್ಚಾಗಿರುವ ಕಾರಣ, ಕುಡಿ ಒಡೆಯದೆ 70 ದಿನಗಳಾದರು ಸೊಪ್ಪು ಬೆಳೆಯುತ್ತಿಲ್ಲ, ಚಳಿಗಾಲದಲ್ಲಿ ರೇಷ್ಮೆಹುಳು ಬೆಳೆ ಚೆನ್ನಾಗಿ ಆಗುತ್ತದೆ. ಹುಳುಸಾಕಾಣಿಕೆ ಮನೆಗಳಲ್ಲಿ ಉಷ್ಣಾಂಶವನ್ನು ಕಾಪಾಡಿಕೊಂಡರೆ, ಉತ್ತಮ ಇಳುವರಿ ಬರುತ್ತದೆ. ಸೊಪ್ಪಿನ ಕೊರತೆಯಿಂದಾಗಿ ಇಳುವರಿಯು ಕಡಿಮೆಯಾಗುವ ಆತಂಕ ಕಾಡುತ್ತಿದೆ.
2017 ಅಕ್ಟೋಬರ್, ನವೆಂಬರ್ ತಿಂಗಳಿನಲ್ಲಿ ಎಲ್ಲೆಡೆ ಹಿಪ್ಪುನೇರಳೆ ತೋಟಗಳಿಗೆ ಕಾಡಿದ ಎಲೆಸುರುಳಿ ರೋಗದಿಂದಾಗಿ ಬಹಳಷ್ಟು ತೋಟಗಳಲ್ಲಿನ ಸೊಪ್ಪನ್ನು ಕಟಾವು ಮಾಡಿ ದನಕರುಗಳಿಗೆ ಹಾಕಿದ್ದರು. ರೇಷ್ಮೆ ಬೆಳೆಗಾರರು ಸೊಪ್ಪಿನ ಕೊರತೆಯಿಂದಾಗಿ ಉದ್ಯಮದಿಂದ ಹಿಂದೆ ಸರಿದಿದ್ದರು. ಇತ್ತಿಚೆಗೆ ಬೆಳೆದಿರುವ ಸೊಪ್ಪುಗಳನ್ನು ನಂಬಿಕೊಂಡು ಪುನಃ ಹುಳು ಸಾಕಾಣಿಕೆಯ ಕಡೆಗೆ ಗಮನಹರಿಸಿರುವ ರೈತರ ಪಾಲಿಗೆ ಸೊಪ್ಪಿನ ಬೆಲೆಗಳು ನಿರಾಸೆಯನ್ನುಂಟು ಮಾಡುತ್ತಿದೆ ಎಂದು ರೈತ ರಾಮಣ್ಣ ಹೇಳಿದರು.
₨400 ರಿಂದ 450 ಇದ್ದ ಒಂದು ಮೂಟೆ ಸೊಪ್ಪಿನ ಬೆಲೆ ಈಗ ತೋಟಗಳಲ್ಲಿ ₨ 650 ರಿಂದ 700 ವರೆಗೂ ಏರಿಕೆಯಾಗಿದೆ. ಹುಳು ಸಾಕಾಣಿಕೆ ಮನೆಗಳಿಗೆ ಸೊಪ್ಪುತರುವಷ್ಟರಲ್ಲಿ ಒಂದು ಮೂಟೆ ಸೊಪ್ಪಿನ ಬೆಲೆ ₨ 1000 ಆಗುತ್ತಿದೆ. ದಿನಕ್ಕೆ ಹುಳುಗಳಿಗೆ ಮೂರು ಬಾರಿ ಬೆಳಿಗ್ಗೆ 4 ಗಂಟೆ, ಮಧ್ಯಾಹ್ನ 12 ಗಂಟೆ ಸಂಜೆ 6 ಗಂಟೆಗೆ ಸೊಪ್ಪು ನೀಡುತ್ತಾರೆ. 100 ಮೊಟ್ಟೆ ಹುಳು ಆರಂಭದಿಂದ ಹಣ್ಣಾಗುವ ತನಕ ಸುಮಾರು 40 ಮೂಟೆಗಳಷ್ಟು ಸೊಪ್ಪು ಬೇಕಾಗುತ್ತದೆ. ₨ 40,000 ದಷ್ಟು ಹಣವನ್ನು ಸೊಪ್ಪಿಗೆ ರೈತರು ಖರ್ಚು ಮಾಡಬೇಕಾಗಿದೆ.
ತೋಟಗಳಲ್ಲಿ ಸೊಪ್ಪು ಕಟಾವು ಮಾಡಿದ ನಂತರ ಎಷ್ಟು ಮೂಟೆ ಕಟಾವು ಮಾಡಿಕೊಂಡಿದ್ದರೆ, ಅಷ್ಟು ಹಣವನ್ನು ಸ್ಥಳದಲ್ಲೆ ಕೊಟ್ಟು ಬರಬೇಕಾದಂತಹ ಅನಿವಾರ್ಯತೆ ರೈತರದ್ದಾಗಿದೆ. ಪರಿಚಯವಿರುವ ರೈತರಷ್ಟೆ ಸಾಲವಾಗಿ ಸೊಪ್ಪು ಕೊಡುತ್ತಾರೆ. ಗೂಡು ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ ನಂತರ ಹಣ ಕೊಡುತ್ತಾರೆ. ಸೊಪ್ಪು ಸಿಗದ ಕಾರಣ ಬೆಳೆಗಾರರಲ್ಲಿ ಪೈಪೋಟಿ ಶುರುವಾಗಿದೆ.
ತೀವ್ರ ನೀರಿನ ಕೊರತೆ ಮತ್ತು ಹವಾಮಾನ ವೈಪರೀತ್ಯದಿಂದಾಗಿ ಹಿಪ್ಪುನೇರಳೆ ಸೊಪ್ಪಿನ ಬೆಲೆಗಳು ಗಗನಕ್ಕೇರಿವೆ. ರೈತ ಉತ್ತಮ ರೇಷ್ಮೆ ಬೆಳೆ ಬೆಳೆದರೂ ಲಾಭವಾಗುತ್ತಿಲ್ಲ