Home News ಹುಟ್ಟಿದ ಊರಿಗೆ ಕೀರ್ತಿ ತರಬೇಕು

ಹುಟ್ಟಿದ ಊರಿಗೆ ಕೀರ್ತಿ ತರಬೇಕು

0

ರೈತ, ಶಿಕ್ಷಕ ಮತ್ತು ಸೈನಿಕರಿಗೆ ಸಮಾಜ ಋಣಿಯಾಗಿರಬೇಕು. ಹುಟ್ಟಿದ ಊರಿಗೆ ಕೀರ್ತಿ ತರಬೇಕು ಮತ್ತು ತಂದೆತಾಯಿಯರಿಗೆ ಗೌರವ ಸಿಗುವಂತೆ ಬದುಕುವುದೇ ಸಾರ್ಥಕ ಜೀವನ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಆರ್‌.ಅನಂತಕೃಷ್ಣ ತಿಳಿಸಿದರು.
ತಾಲ್ಲೂಕಿನ ಮಳ್ಳೂರು ಗ್ರಾಮದ ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕನ್ನಡದಲ್ಲಿ ನೂರಕ್ಕೆ ನೂರು ಅಂಕ ಗಳಿಸಿದ ವಿದ್ಯಾರ್ಥಿಗಳಾದ ಸಿ.ಆರ್‌.ವಂದನಾ ಮತ್ತು ಬಿ.ಎನ್‌.ವರ್ಷ ಹಾಗೂ ವಾಣಿಜ್ಯ ವಿಭಾಗದಲ್ಲಿ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದಿರುವ ಎಂ.ತನುಶ್ರೀ ಅವರನ್ನು ಕ.ಸಾ.ಪ ವತಿಯಿಂದ ಪುರಸ್ಕರಿಸಿ ಅವರು ಮಾತನಾಡಿದರು.
ವಿದ್ಯೆ ಕದಿಯಲಾಗದ ಆಸ್ತಿ. ವಿದ್ಯಾರ್ಥಿ ಜೀವನದಲ್ಲಿ ಕಷ್ಟಪಟ್ಟಷ್ಟೂ ಮುಂದಿನ ಜೀವನದಲ್ಲಿ ಸುಖವಾಗಿರಬಹುದು. ತಲೆತಗ್ಗಿಸಿ ಪುಸ್ತಕವನ್ನು ಓದಿದಲ್ಲಿ ಅದರಿಂದ ಲಭಿಸುವ ಜ್ಞಾನ ತಲೆಯೆತ್ತುವಂತೆ ಮಾಡುತ್ತದೆ. ಪ್ರತಿಯೊಬ್ಬರೂ ಕನ್ನಡ ಸಾಹಿತ್ಯವನ್ನು ಓದಬೇಕು ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಂಗಮಕೋಟೆ ಹೋಬಳಿ ಅಧ್ಯಕ್ಷ ಆರ್‌.ಎ.ಉಮೇಶ್‌ ಮಾತನಾಡಿ, ನಮ್ಮ ಗ್ರಾಮೀಣ ಮಕ್ಕಳು ಕನ್ನಡದ ವಿಷಯದಲ್ಲಿ ಶೇಕಡಾ ನೂರರಷ್ಟು ಅಂಕ ಗಳಿಸಿರುವುದು ಹೆಮ್ಮೆಯ ಸಂಗತಿ. ಕನ್ನಡದ ಬಗ್ಗೆ ಪ್ರೀತಿ, ಅಭಿಮಾನ, ಕಾಳಜಿ ಸದಾ ಇರಲಿ. ತಾಂತ್ರಿಕ ಶಿಕ್ಷಣಕ್ಕಾಗಿ ಮುಂದೆ ಇಂಗ್ಲೀಷ್‌ ಭಾಷೆಯ ಮೂಲಕ ಕಲಿಕೆ ನಡೆಸಿದರೂ ತಾಯಿ ನುಡಿಗೆ ಹೆಚ್ಚಿನ ಆದ್ಯತೆಯನ್ನು ಕೊಡಿ. ಪರಿಸರ ಸಂರಕ್ಷಣೆಯ ಕಾಳಜಿ ಇರಲಿ. ಸಾಧ್ಯವಾದಷ್ಟು ಸಸಿಗಳನ್ನು ನೆಟ್ಟು ಭವಿಷ್ಯಕ್ಕಾಗಿ ಹಸಿರನ್ನು ಕೊಡುಗೆಯಾಗಿ ನೀಡಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಶಿಡ್ಲಘಟ್ಟ ತಾಲ್ಲೂಕು ಹಾಗೂ ಜಂಗಮಕೋಟೆ ಹೋಬಳಿ ಘಟಕದ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುಸ್ತಕ ಮತ್ತು ತಲಾ ಐನೂರು ರೂಗಳನ್ನು ನೀಡಿ ಪುರಸ್ಕರಿಸಲಾಯಿತು.
ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಉಪಾಧ್ಯಕ್ಷ ಸಿ.ಪಿ.ಈ.ಕರಗಪ್ಪ, ಗೌರವ ಕಾರ್ಯದರ್ಶಿ ಎ.ಎಂ.ತ್ಯಾಗರಾಜ್‌, ಪ್ರಧಾನ ಸಂಚಾಲಕ ಸುದರ್ಶನ್, ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಚಂದ್ರಕುಮಾರ್‌, ಉಪನ್ಯಾಸಕರಾದ ಲೋಕೇಶ್‌, ಸುರೇಂದ್ರ, ಭಾರತಿ, ಪುರಸ್ಕೃತ ವಿದ್ಯಾರ್ಥಿಗಳ ಪೋಷಕರು ಈ ಸಂದರ್ಭದಲ್ಲಿ ಹಾಜರಿದ್ದರು.

error: Content is protected !!