ಹೆಣ್ಣುಮಕ್ಕಳು ಹೆಚ್ಚು ಓದಬೇಕು – ಜಿಲ್ಲಾಧಿಕಾರಿ ಆರ್.ಲತಾ

0
98

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ವಿಶೇಷ ತರಗತಿಗಳನ್ನು ನಡೆಸುತ್ತಿದ್ದು, ಆಗಿಂದಾಗ್ಗೆ ಅವರಿಗೆ ಅನಿರೀಕ್ಷಿತವಾಗಿ ಪರೀಕ್ಷೆಗಳನ್ನು ನಡೆಸುತ್ತೇವೆ. ನಮ್ಮ ಉದ್ದೇಶ ಮಕ್ಕಳನ್ನು ಶೈಕ್ಷಣಿಕವಾಗಿ ತಯಾರು ಮಾಡುವುದಾಗಿದೆ. ವಿದ್ಯಾರ್ಥಿಗಳು ಕೂಡ ಸಕಾರಾತ್ಮಕವಾಗಿ ಸ್ಪಂದಿಸಬೇಕು ಎಂದು ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದರು.
ನಗರದ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಸೋಮವಾರ ಗಿಡವನ್ನು ನೆಟ್ಟು ಅವರು ಪ್ರೌಢಶಾಲೆ ಮತ್ತು ಪದವಿ ಪೂರ್ವ ವಿದ್ಯಾರ್ಥಿಗಳೊಂದಿಗೆ ಸಂವಾದಿಸಿದರು.
ಕೇವಲ ಪಾಸಾಗುವುದಲ್ಲ, ಹೆಚ್ಚು ಅಂಕಗಳನ್ನು ಪಡೆದು ಮುಂದಿನ ಓದಿಗೆ ವಿದ್ಯಾರ್ಥಿಗಳು ಗುರಿಯನ್ನು ಹೊಂದಬೇಕು ಎನ್ನುವುದು ನಮ್ಮ ಆಶಯ. ನಾನು ಎಸ್ಸೆಸ್ಸೆಲ್ಸಿ ವರೆಗೂ ಕನ್ನಡ ಮಾಧ್ಯಮದಲ್ಲಿಯೇ ಓದಿದ್ದು. ಶ್ರದ್ಧೆ, ಆಸಕ್ತಿ, ಶಿಸ್ತು ಅಳವಡಿಸಿಕೊಂಡಲ್ಲಿ ಗುರಿಯು ನಿಚ್ಚಳವಾಗುತ್ತದೆ. ಹೆಣ್ಣುಮಕ್ಕಳು ಎಸ್ಸೆಸ್ಸೆಲ್ಸಿ, ಪಿಯುಸಿಗೆ ಓದನ್ನು ನಿಲ್ಲಿಸಬಾರದು. ಹೆಚ್ಚು ಓದಿ ತಮ್ಮ ಕಾಲ ಮೇಲೆ ತಾವು ನಿಲ್ಲುವ ಸಾಮರ್ಥ್ಯವನ್ನು ಪಡೆಯಬೇಕು. ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಈ ಬಾರಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆಂದೇ ವಿಶೇಷ ತರಗತಿಗಳನ್ನು ನಡೆಸಲಾಗುತ್ತಿದೆ. ಯಾವುದೇ ಅನುಮಾನಗಳಿದ್ದರೂ ಪರಿಹರಿಸಿಕೊಳ್ಳಿ. ಸಾಧಿಸಲಾಗದ್ದು ಯಾವುದೂ ಇಲ್ಲ. ಸಾಧನೆ ಕೊಂಚ ಪರಿಶ್ರಮವನ್ನು ಬೇಡುತ್ತದೆ ಅಷ್ಟೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಎ.ಬಿ.ವಿ.ಪಿ ಸದಸ್ಯರು, ಪದವಿ ಪೂರ್ವ ಕಾಲೇಜಿನ ನೂತನ ಕಟ್ಟಡ ಕಟ್ಟಿ ಕೇವಲ ಎಂಟೇ ವರ್ಷಗಳಾಗಿದ್ದರೂ ಅದು ಕಳಪೆ ಕಾಮಗಾರಿಯಿಂದಾಗಿ ಸೋರುತ್ತಿದೆ ಎಂದು ಜಿಲ್ಲಾಧಿಕಾರಿಯವರಿಗೆ ಕರೆದುಕೊಂಡು ಹೋಗಿ ತೋರಿಸಿದರು. ಸೂಕ್ತ ಭದ್ರತೆಯಿಲ್ಲದ ಕಾರಣ ಕಾಲೇಜಿನ ಕಟ್ಟಡದಿಂದ ಸಾಕಷ್ಟು ವಸ್ತುಗಳು ಕಳ್ಳತನವಾಗಿವೆ ಹಾಗೂ ಕುಡಿಯಲು ಮತ್ತು ಶೌಚಾಲಯಕ್ಕೆ ನೀರಿನ ಸಮಸ್ಯೆಯಿದೆ ಎಂದು ತಿಳಿಸಿದರು. ಹಿಂದುಳಿದ ವರ್ಗ ಹಾಗೂ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಯರ ಹಾಸ್ಟೆಲ್ ತುಂಬಾ ಅಗತ್ಯವಿದೆ. ಗಂಡು ಮಕ್ಕಳ ಹಾಸ್ಟೆಲ್ ಮೂಲಭೂತ ಸೌಕರ್ಯಗಳ ಕೊರತೆಯನ್ನು ಎದುರಿಸುತ್ತಿದೆ. ಅದನ್ನು ಕಲ್ಪಿಸಿಕೊಡಬೇಕೆಂದು ಮನವಿ ಮಾಡಿದರು.
ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಆರ್.ಲತಾ ಭರವಸೆ ನೀಡಿದರು.
ತಹಶೀಲ್ದಾರ್ ಎಂ.ದಯಾನಂದ್, ನಗರಸಭೆ ಪೌರಾಯುಕ್ತ ಶ್ರೀಕಾಂತ್, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಆನಂದ್, ಎ.ಬಿ.ವಿ.ಪಿ ಮಂಜುನಾಥರೆಡ್ಡಿ, ಸಿ.ಎಂ.ಟಿ ರಮೇಶ್, ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ನರೇಶ್, ಸರ್ವೋದಯ ಸ್ವಯಂಸೇವಾ ಸಂಸ್ಥೆ ಅಧ್ಯಕ್ಷೆ ಜಿ.ವಿ.ಗಾಯಿತ್ರಿ, ಎನ್.ಎಸ್.ಎಸ್. ಮುನಿರಾಜು ಹಾಜರಿದ್ದರು.

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!