ಗ್ರಾಮಸ್ಥರ ಒತ್ತಾಯದ ಮೇರೆಗೆ ಹಾಗೂ ಮಕ್ಕಳ ಹಿತದೃಷ್ಟಿಯಿಂದ ಹೊಸ ಕಟ್ಟಡಕ್ಕೆ ಅಂಗನವಾಡಿ ಕೇಂದ್ರವನ್ನು ಸ್ಥಳಾಂತರ ಮಾಡಿರುವುದಾಗಿ ಸಿ.ಡಿ.ಪಿ.ಒ ಕಚೇರಿಯ ಅಧಿಕಾರಿ ಮಮತ ತಿಳಿಸಿದರು.
ತಾಲ್ಲೂಕಿನ ಬಚ್ಚಹಳ್ಳಿ ಗ್ರಾಮದಲ್ಲಿ ಹೊಸ ಅಂಗನವಾಡಿ ಕಟ್ಟಡ ನಿರ್ಮಾಣವಾಗಿ ಆರು ತಿಂಗಳಾಗಿದ್ದರೂ, ಅದನ್ನು ಉದ್ಘಾಟಿಸದ ಕಾರಣ ಇನ್ನೂ ಹಳೆಯ ಕಟ್ಟಡದಲ್ಲಿಯೇ ಅಂಗನವಾಡಿ ಕೇಂದ್ರ ಕಾರ್ಯನಿರ್ವಹಿಸುತ್ತಿತ್ತು. ಕಟ್ಟಡ ಶಿಥಿಲವಾದ ಕಾರಣದಿಂದ ಮಳೆ ನೀರು ಜಿನುಗುತ್ತಿದ್ದುದರಿಂದ ಹಳೆಯ ಕಟ್ಟಡದ ಹೊರಕ್ಕೆ ಅಡುಗೆ ಸಾಮಾನುಗಳನ್ನು ಇಟ್ಟುಕೊಂಡು ರಸ್ತೆಯಲ್ಲಿ ಚಾಪೆ ಹಾಸಿ ಮಕ್ಕಳನ್ನು ಕುಳ್ಳಿರಿಸಿಕೊಳ್ಳುವ ಪರಿಸ್ಥಿತಿ ಮೂಡಿತ್ತು. ಈ ಬಗ್ಗೆ ಶನಿವಾರ ಫೋನ್ ಇನ್ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಕಚೇರಿಗೆ ಗ್ರಾಮಸ್ಥರು ದೂರವಾಣಿ ಕರೆ ಮಾಡಿ ವಿಷಯ ಮುಟ್ಟಿಸಿದರು.
ತಕ್ಷಣ ಉಪತಹಶೀಲ್ದಾರ್ ಮಂಜುನಾಥ್, ಆರ್.ಐ ಲಕ್ಷ್ಮೀನಾರಾಯಣ್ ಅವರನ್ನು ಸ್ಥಳ ಪರಿಶೀಲನೆಗೆ ಕಳುಹಿಸಿದರು. ಸಿ.ಡಿ.ಪಿ.ಒ ಕಚೇರಿಯ ಅಧಿಕಾರಿ ಗ್ರಾಮಕ್ಕೆ ಆಗಮಿಸಿ ಹೊಸ ಕಟ್ಟಡಕ್ಕೆಂಗನವಾಡಿಯನ್ನು ಸ್ಥಳಾಂತರಿಸಿದರು.
“ಅಂಗನವಾಡಿ ಹೊಸ ಕಟ್ಟಡ ನಿರ್ಮಿಸಿದ್ದರೂ, ಅದನ್ನು ಮಕ್ಕಳ ಉಪಯೋಗಕ್ಕೆ ಬಿಡದೆ ಹಾಗೆಯೇ ಬಿಟ್ಟಿದ್ದರು. ಹಳೆಯ ಕಟ್ಟಡ ಸೋರುತ್ತಿದ್ದುದರಿಂದ ಹಳ್ಳಿಯಲ್ಲಿ ಮಕ್ಕಳನ್ನು ಕಳುಹಿಸಲು ಪೋಷಕರು ಹೆದರುತ್ತಿದ್ದರು. ಈ ದಿನ ತಹಶಿಲ್ದಾರ್ ಕಚೇರಿಗೆ ವಿಷಯ ಮುಟ್ಟಿಸಿದ ಮೇಲೆ ಹೊಸ ಕಟ್ಟಡವನ್ನು ಮಕ್ಕಳು ಉಪಯೋಗಿಸಿಕೊಳ್ಳಲು ಅನುವು ಮಾಡಿಕೊಟ್ಟಿದ್ದಾರೆ” ಎಂದು ಗ್ರಾಮದ ಮುಖಂಡ ರವಿ ತಿಳಿಸಿದರು.
ಗ್ರಾಮಸ್ಥರಾದ ಸುಬ್ಬಣ್ಣ, ಶ್ರೀನಿವಾಸ್, ಗಣೇಶ್, ವೆಂಕಟೇಶ್, ಅಂಗನವಾಡಿ ಶಿಕ್ಷಕಿ ಮಂಜುಳ, ಸಹಾಯಕಿ ಕಮಲಮ್ಮ ಹಾಜರಿದ್ದರು.