26.1 C
Sidlaghatta
Friday, November 14, 2025

ಜೂನ್ 12 ರ ಸೋಮವಾರ ಸ್ವಯಂಪ್ರೇರಿತರಾಗಿ ಬಂದ್ ಆಚರಣೆ

- Advertisement -
- Advertisement -

ರೇಷ್ಮೆ ಗೂಡಿನ ಮಾರುಕಟ್ಟೆಯೂ ಸೇರಿದಂತೆ ತಾಲ್ಲೂಕಿನಾದ್ಯಂತ ನೀರಿಗಾಗಿ ಆಗ್ರಹಿಸಿ ಜೂನ್ 12 ರ ಸೋಮವಾರ ಸ್ವಯಂಪ್ರೇರಿತರಾಗಿ ಬಂದ್ ಆಚರಿಸುವುದಾಗಿ ಶಾಶ್ವತ ನೀರಾವರಿ ಹೋರಾಟ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ಮಳ್ಳೂರು ಹರೀಶ್‌ ತಿಳಿಸಿದರು.
ನಗರದ ಪ್ರವಾಸಿಮಂದಿರದಲ್ಲಿ ಶುಕ್ರವಾರ ನೀರಾವರಿ ಹೋರಾಟ ಸಮಿತಿ ಸದಸ್ಯರು, ರೈತ ಸಂಘಟನೆಗಳು, ಕನ್ನಡ ಪರ ಸಂಘಟನೆಗಳು, ರೀಲರುಗಳು, ದಲಿತ ಪರ ಸಂಘಟನೆಗಳು ಮುಂತಾದವರುಗಳೊಂದಿಗೆ ನಡೆಸಿದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಕಳೆದ 20 ವರ್ಷಗಳಿಂದ ಸತತವಾಗಿ ಬಯಲು ಸೀಮೆಗೆ ಶಾಶ್ವತ ನೀರಾವರಿ ಕಲ್ಪಿಸಬೇಕೆಂದು ಸತತವಾಗಿ ಹೋರಾಟ ನಡೆಸುತ್ತಾ ಬಂದಿದ್ದೇವೆ. ಆದರೆ ನಮ್ಮನ್ನಾಳುವ ಸರ್ಕಾರಗಳು ಬಯಲುಸೀಮೆಯನ್ನು ಕಡೆಗಣಿಸಿವೆ. ಟ್ರಾಕ್ಟರ್‌ ರ್ಯಾಗಲಿ, ಬೈಕ್‌ ರ್ಯಾ ಲಿ, ಚದಲಪುರ ಕ್ರಾಸ್‌ ಬಳಿ 169 ದಿನಗಳ ಅನಿರ್ಧಿಷ್ಟ ಕಾಲಾವಧಿ ಧರಣಿ, ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಸಿ ಹೋರಾಟ, ರೈಲು ತಡೆ, ಹೆದ್ದಾರಿ ತಡೆ, ಜಿಲ್ಲಾ ಬಂದ್‌ಗಳು, ಜಿಲ್ಲಾ ಕಚೇರಿ ಮತ್ತು ತಾಲ್ಲೂಕು ಕಚೇರಿಗಳ ಮುತ್ತಿಗೆ ನಡೆಸುತ್ತಾ ಬಂದಿದ್ದೇವೆ. ಈ ತಿಂಗಳ 12 ಕ್ಕೆ ಕೋಲಾರದಲ್ಲಿ ನಡೆಯುತ್ತಿರುವ ನೀರಾವರಿ ಧರಣಿ ಒಂದು ವರ್ಷಕ್ಕೆ ಕಾಲಿಡಲಿದೆ. ಇಷ್ಟಾದರೂ ಸರ್ಕಾರ ನೀರಿನ ತೊಂದರೆ ಬಗೆ ಹರಿಸಲು ಶಾಶ್ವತ ಯೋಜನೆ ರೂಪಿಸಲಿಲ್ಲ.
ಕನ್ನಡ ಪರ ಸಂಘಟನೆಗಳು, ವಿವಿಧ ರೈತ ಪರ ಸಂಘಟನೆಗಳು ಹಾಗೂ ವಿವಿಧ ಸಂಘಟನೆಗಳೆಲ್ಲಾ ಒಗ್ಗೂಡಿ ಈಗ ಸರ್ಕಾರಕ್ಕೆ ನಮ್ಮ ನೋವನ್ನು ತಿಳಿಸಲು ನೀರಿನ ಜ್ವಲಂತ ಸಮಸ್ಯೆಗೆ ಪರಿಹಾರವನ್ನು ನೀಡಬೇಕೆಂದು ಬಂದ್‌ ಆಚರಿಸಲು ತೀರ್ಮಾನಿಸಿದ್ದೇವೆ. ನಮ್ಮ ಭಾಗದ ಎಲ್ಲಾ ಸಂಘಟನೆಗಳು ಕೂಡ ಬಂದ್‌ಗೆ ಬೆಂಬಲ ಸೂಚಿಸಿವೆ.
ಮಾರ್ಚ್‌ 6 ರಂದು ನಡೆದ ಸಭೆಯಲ್ಲಿ ಮುಖ್ಯಮಂತ್ರಿಗಳು, ಬಯಲು ಸೀಮೆಗೆ ಪ್ರತ್ಯೇಕ ನೀರಾವರಿ ನಿಗಮ, ಈ ಭಾಗಕ್ಕೆ ಯಾವ ಮೂಲಗಳಿಂದ ನೀರು ತರಲು ಸಾಧ್ಯವೆಂಬುದನ್ನು ತಿಳಿಸುವ ತಜ್ಞರ ಸಮಿತಿ ರಚನೆ ಮತ್ತು ಸಮನ್ವಯ ಸಮಿತಿ ರಚಿಸುವ ಬಗ್ಗೆ ತಿಳಿಸಿದ್ದು ಕೇವಲ ಪತ್ರಗಳಲ್ಲೇ ಉಳಿದಿವೆ. ಯಾವುದೂ ಕಾರ್ಯ ರೂಪಕ್ಕೆ ಬಂದಿಲ್ಲ.
ವಿಧಾನಸಭಾ ಅಧಿವೇಶನ ಜೂನ್‌ 5 ರಂದು ಪ್ರಾರಂಭವಾಗುವುದೆಂದು ನೀರಾವರಿ ಹೋರಾಟ ಸಮಿತಿ ಸದಸ್ಯರು ಬಯಲು ಸೀಮೆಯ ಶಾಸಕರು, ವಿಧಾನ ಪರಿಷತ್‌ ಸದಸ್ಯರು ಹಾಗೂ ವಿರೋಧ ಪಕ್ಷದ ನಾಯಕರನ್ನು ಭೇಟಿಯಾಗಿ ಬಯಲುಸೀಮೆಯ ನೀರಿನ ಬವಣೆ ಹಾಗೂ ಪರಿಹಾರದ ಬಗ್ಗೆ ಸದನದಲ್ಲಿ ಪಕ್ಷಾತೀತವಾಗಿ ದನಿ ಎತ್ತಬೇಕೆಂದು ಮನವಿ ಸಲ್ಲಿಸಿದ್ದೆವು. ಈಗಾಗಲೇ ಅಧಿವೇಶನ ಪ್ರಾರಂಭವಾದರೂ ಇನ್ನೂ ನಮ್ಮ ಜನಪ್ರತಿನಿಧಿಗಳು ಈ ಬಗ್ಗೆ ಮಾತನಾಡಿಲ್ಲ.
ಒಂದೆಡೆ ಅಂತರ್ಜಲ ಕುಸಿದಿದೆಯೆಂದು ಸರ್ಕಾರ ಕೊಳವೆ ಬಾವಿಗಳನ್ನು ಕೊರೆಯಬಾರದೆಂದು ಆದೇಶಿಸಿದ್ದರೆ, ಮತ್ತೊಂದೆಡೆ ಕೊಳವೆ ಬಾವಿಗಳನ್ನು ಕೊರೆಯಲು ಅನುದಾನಗಳು ಬಿಡುಗಡೆಯಾಗುತ್ತಾ ನೀರು ಸಿಗದೆ ಹಣ ಪೋಲಾಗುತ್ತಿದೆ. ಈ ರೀತಿ ಹಣವನ್ನು ವ್ಯರ್ಥ ಮಾಡುವುದರ ಬದಲು ಹಣವನ್ನು ಕ್ರೂಡೀಕರಿಸಿ ಶಾಶ್ವತವಾದ ಯೋಜನೆಗೆ ತೊಡಗಿಸಬೇಕಿದೆ. ವಲಸೆ ತಪ್ಪಿಸಬೇಕಿದೆ.
ಕೃಷ್ಣಾ ಬಿ ಸ್ಕೀಮ್‌ ಮೂಲಕ ನೀರು ತರಬಹುದು, ಮೇಕೆದಾಟು ಯೊಜನೆಯಿಂದಲೂ ನೀರು ಹರಿಸಬಹುದು, ಪಶ್ಚಿಮ ವಾಹಿನಿ ನದಿಗಳ ನೀರನ್ನು ಕೂಡ ತರಬಹುದು. ಆದರೆ ಸರ್ಕಾರ ಅವೈಜ್ಞಾನಿಕವಾದ ಎತ್ತಿನಹೊಳೆ ಯೋಜನೆ ಮಾಡುತ್ತಿದೆ. ಎತ್ತಿನ ಹೊಳೆ ನೀರನ್ನು ಬೆಂಗಳೂರಿಗೆ ಹರಿಸುತ್ತೇವೆ, ಬೆಂಗಳೂರಿನ ಕೊಳಚೆ ನೀರು ಸಂಸ್ಕರಿಸಿ ನಮ್ಮ ಭಾಗಕ್ಕೆ ಹರಿಸುವುದಾಗಿ ಭರವಸೆ ನೀಡುತ್ತಿದ್ದಾರೆ. ತ್ಯಾಜ್ಯ ರಾಸಾಯನಿಕಗಳುಳ್ಳ ನೀರು ನಮ್ಮ ಭಾಗಕ್ಕೆ ಹರಿದು ಭವಿಷ್ಯದಲ್ಲಿ ದುಷ್ಪರಿಣಾಮ ಬೀರುವುದರ ಅಧ್ಯಯನವಾಗಬೇಕಿದೆ. ಇವುಗಳಿಂದ ನಮ್ಮ ಕೆರೆಗಳು ತುಂಬುವುದಿಲ್ಲ. ಎತ್ತಿನಹೊಳೆ ಯೋಜನೆ ನಡೆಯುತ್ತಿರುವ ಭಾಗದಲ್ಲಿ ಮಳೆ ಮಾಪನವನ್ನು ಇನ್ನೂ ಅಳವಡಿಸಿಲ್ಲ. ಸರ್ಕಾರ ವೈಜ್ಞಾನಿಕ ರೀತಿಯಲ್ಲಿ ನೀರಾವರಿ ಯೋಜನೆಗೆ ಚಾಲನೆ ನೀಡಬೇಕಿದೆ.
ಬಯಲುಸೀಮೆಗೆ ಬೇಕಾದ ಸೂಕ್ತ ಯೋಜನೆಯನ್ನು ಮಾಡದೆ ಸರ್ಕಾರ ಹೋರಾಟಗಾರರನ್ನು ಧಮನ ಮಾಡಲು ಪ್ರಯತ್ನಿಸುತ್ತಿದೆ. ಸಂಘಟನೆಗಳನ್ನು ಒಡೆಯುತ್ತಿದೆ. ಪೊಲೀಸನ್ನು ಬಳಸಿಕೊಂಡು ರೈತರನ್ನು, ನೀರಾವರಿ ಹೋರಾಟಗಾರರನ್ನು ಹತ್ತಿಕ್ಕುತ್ತಿದೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ರೀಲರುಗಳ ಸಂಘದವರು ಕೂಡ ಬಂದ್‌ಗೆ ಬೆಂಬಲಿಸುತ್ತಿರುವುದಾಗಿ ಜಿ.ರೆಹಮಾನ್‌, ಅನ್ಸರ್‌ಪಾಷ ತಿಳಿಸಿದರು. ಸರ್ಕಾರಿ ನೌಕರರು, ಲಾರಿ, ಬಸ್‌ ಮಾಲಿಕರು, ವಕೀಲರ ಸಂಘ ಬೆಂಬಲ ಸೂಚಿಸಿರುವುದಾಗಿ ಪ್ರಕಟಿಸಲಾಯಿತು. ಕರ್ನಾಟಕ ರಕ್ಷಣಾ ವೇದಿಕೆಯ ಹರೀಶ್‌, ರಮೇಶ್‌, ಸಂತೋಷ್‌, ಬಾಲರಾಜ್‌, ರೈತ ಸಂಘದ ರವಿಪ್ರಕಾಶ್‌, ಪ್ರತೀಶ್‌, ಮಾರಣ್ಣ, ಮಂಜುನಾಥ್‌, ಅಬ್ಲೂಡು ಆರ್‌.ದೇವರಾಜ್‌, ಆನೂರು ದೇವರಾಜ್‌, ಸಿ.ಎ.ದೇವರಾಜ್‌, ದಲಿತ ಸಂಘರ್ಷ ಸಮಿತಿಯ ತಿರುಮಳೇಶ್‌, ಎಚ್‌.ಜಿ.ಗೋಪಾಲಗೌಡ, ಎಚ್‌.ಕೆ.ಸುರೇಶ್‌ ಬಂದ್‌ಗೆ ಬೆಂಬಲ ಸೂಚಿಸಿದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!