Cheemangala, Sidlaghatta : ಧರ್ಮಸ್ಥಳ ಸಂಸ್ಥೆಯ ಮಾತೃಶ್ರೀ ಹೇಮಾವತಿ ಅಮ್ಮನವರ ಮಾರ್ಗದರ್ಶನದಲ್ಲಿ ಮಹಿಳೆಯರಿಗೆ ಬೇರೆ ಬೇರೆ ಸ್ವ ಉದ್ಯೋಗಕ್ಕೆ ಪೂರಕವಾದ ತರಬೇತಿಯನ್ನು ರಾಜ್ಯದಾದ್ಯಂತ ಗ್ರಾಮೀಣ ಭಾಗದಲ್ಲಿ ನಡೆಸಲಾಗುತ್ತಿದೆ. ಇವತ್ತು ಲಕ್ಷಾಂತರ ಮಂದಿ ಇದರ ಸದುಪಯೋಗವನ್ನು ಪಡೆದುಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಧರ್ಮಸ್ಥಳ ಸಂಸ್ಥೆಯ ಸಹಭಾಗಿತ್ವದಲ್ಲಿ ರುಡ್ ಸೆಟ್ ಹಾಗೂ ಆರ್ ಸೆಟ್ ಎನ್ನುವ ತರಬೇತಿ ಸಂಸ್ಥೆಗಳಿದ್ದು ಪ್ರತಿ ತಿಂಗಳು ಇಲ್ಲಿ ಉಚಿತ ಊಟ ವಸತಿಯೊಂದಿಗೆ ತರಬೇತಿಯನ್ನು ಕೊಟ್ಟು ಸದಸ್ಯರನ್ನು ಸ್ವಾವಲಂಬಿಯನ್ನಾಗಿ ಮಾಡಲಾಗುತ್ತಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯ (SKDRDP) ಜಿಲ್ಲಾ ನಿರ್ದೇಶಕ ಸಿ.ಎಸ್.ಪ್ರಶಾಂತ್ ಅವರು ತಿಳಿಸಿದರು.
ಶಿಡ್ಲಘಟ್ಟ ತಾಲ್ಲೂಕಿನ ಚೀಮಂಗಲ ಹಾಲು ಉತ್ಪಾದಕರ ಸಹಕಾರ ಸಂಘದ ಸಭಾ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ 2 ತಿಂಗಳು ಉಚಿತವಾಗಿ ನಡೆದ ಹೊಲಿಗೆ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಹನುಮಪ್ಪ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಡಿಯಲ್ಲಿ ಮಹಿಳೆಯರಿಗಾಗಿ ಇರುವ ಸ್ವಉದ್ಯೋಗ ತರಬೇತಿಗಳು ಹಾಗೂ ಮಾಹಿತಿ ಕಾರ್ಯಾಗಾರಗಳು ನಮಗೆ ತಿಳಿದೇ ಇರಲಿಲ್ಲ. ಇವತ್ತಿನ ದಿನ ಹೊಲಿಗೆ ತರಬೇತಿಯಲ್ಲಿ ಭಾಗವಹಿಸಿದ ನಮ್ಮ ಗ್ರಾಮದ ಮಹಿಳೆಯರನ್ನು ಕಂಡು ತುಂಬಾ ಸಂತೋಷವಾಗುತ್ತಿದೆ. ಕ್ಷೇತ್ರದ ಪ್ರತಿಯೊಂದು ಕಾರ್ಯಕ್ರಮವು ಉಪಯುಕ್ತವಾಗಿದ್ದು ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕೆಂದರು.
ತರಬೇತಿಯಲ್ಲಿ ಭಾಗವಹಿಸಿದ 28 ಮಂದಿ ಸದಸ್ಯರಿಗೆ ಪ್ರಮಾಣಪತ್ರವನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ತಾಲ್ಲೂಕು ಯೋಜನಾಧಿಕಾರಿ ಪ್ರಕಾಶ್‌ಕುಮಾರ್, ಒಕ್ಕೂಟದ ಅಧ್ಯಕ್ಷೆ ಸುಜಾತ, ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ಶಶಿಧರ್, ತರಭೇತಿ ಶಿಕ್ಷಕಿ ನಳಿನ, ಜ್ಞಾನವಿಕಾಸ ಸಮನ್ವಯಾಧಿಕಾರಿ ಸುಮಂಗಲ, ಸೇವಾಪ್ರತಿನಿಧಿಗಳಾದ ಭಾಗ್ಯಲಕ್ಷ್ಮಿ, ಮಂಜುಳಾ, ವೀಣಾ ಹಾಜರಿದ್ದರು.