ಯಾವುದೆ ಪರವಾನಗಿ ಇಲ್ಲದೆ ತೆರೆದಿದ್ದ ಹಾಗೂ ದುರ್ನಾತ ಬೀರುತ್ತಿದ್ದ ನಗರದ ರೇಷ್ಮೆ ಪ್ಯೂಪಾ ಘಟಕಕ್ಕೆ ನಗರಸಭೆ ಅಧಿಕಾರಿಗಳು ಸೋಮವಾರ ಬೀಗ ಜಡಿದಿದ್ದಾರೆ. ಘಟಕಕ್ಕೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಘಟಕದಲ್ಲಿನ ಯಂತ್ರಗಳನ್ನು ಹಾಗೂ ಇತರೆ ಪರಿಕರಗಳನ್ನು ಸಾಗಿಸಿಕೊಳ್ಳಲು 24 ಗಂಟೆಗಳ ಕಾಲಾವಕಾಶ ನೀಡಲಾಗಿದೆ.
ಶಿಡ್ಲಘಟ್ಟ ನಗರದಲ್ಲಿನ ನ್ಯಾಯಾಲಯ ಸಂಕೀರ್ಣದ ಸಮೀಪದಲ್ಲೆ ಅಮ್ಜದ್ ಎನ್ನುವವರಿಗೆ ಸೇರಿದ ಪ್ಯೂಪಾ ಘಟಕಕ್ಕೆ ನಗರಸಭೆ, ಪರಿಸರ ಮಾಲಿನ್ಯ ಮಂಡಳಿ ಸೇರಿದಂತೆ ಸಂಬಂಧಿಸಿದ ಇಲಾಖೆ, ಅಧಿಕಾರಿಗಳಿಂದ ಪರವಾನಗಿ ಪಡೆದಿರಲಿಲ್ಲ.
ಜತೆಗೆ ವಸತಿ ಪ್ರದೇಶಗಳ ನಡುವೆಯೆ ಇದ್ದ ಈ ಘಟಕದಿಂದ ದುರ್ನಾತ ಬೀರುತ್ತಿದ್ದು, ನ್ಯಾಯಾಲಯದ ಸಂಕೀರ್ಣದವರೆಗೂ ದುರ್ನಾತ ತಾಗುತ್ತಿದ್ದು ಈ ಬಗ್ಗೆ ನ್ಯಾಯಾಧೀಶರು, ವಕೀಲರು, ನೆರೆ ಹೊರೆಯ ನಾಗರಿಕರು ಅನೇಕ ಸಲ ದೂರಿದ್ದರು.
ಈ ಹಿನ್ನಲೆಯಲ್ಲಿ ನಗರಸಭೆ ಪೌರಾಯುಕ್ತ ಆರ್.ಶ್ರೀಕಾಂತ್ ಹಾಗೂ ಸಿಬ್ಬಂದಿಯು ನಗರಠಾಣೆಯ ಪೊಲೀಸರ ಜತೆಗೂಡಿ ಅಮ್ಜದ್ ಮಾಲೀಕತ್ವದ ಪ್ಯೂಪಾ ಘಟಕಕ್ಕೆ ಬೀಗ ಜಡಿದಿದ್ದಾರೆ. ಮಾಲೀಕರ ಮನವಿ ಮೇರೆಗೆ ಘಟಕದಲ್ಲಿನ ವಸ್ತುಗಳು ಯಂತ್ರಗಳನ್ನು ಸಾಗಿಸಲು ಒಂದು ದಿನದ ಗಡುವನ್ನು ನೀಡಿದ್ದಾರೆ. ಮತ್ತೆ ಪ್ಯೂಪಾ ಘಟಕದಲ್ಲಿ ಕಾರ‍್ಯ ನಿರ್ವಹಿಸದಂತೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ.