ಮುಂಗಾರು ಮಳೆ ಪೂರ್ವದಲ್ಲಿ ನೆಲಕ್ಕೆ ಬಿದ್ದ ನೀರನ್ನು ಇಂಗಿಸಿಕೊಳ್ಳಲು ಹೊಲದಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಬದು ನಿರ್ಮಾಣ ಮಾಸಾಚರಣೆ ಅಭಿಯಾನ ಜೂನ್ 19 ರವರೆಗೂ ಜಾರಿಯಲ್ಲಿದೆ. ಪ್ರತಿ ಎಕರೆಗೆ 16 ಸಾವಿರ ರೂಗಳನ್ನು ಸರ್ಕಾರ ನೀಡುತ್ತದೆ. ರೈತರು ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಶಿವಕುಮಾರ್ ತಿಳಿಸಿದರು.
ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಬದುಗಳಲ್ಲಿ ನೀರು ನಿಲ್ಲುವುದರಿಂದ ಭೂಮಿಯ ತೇವಾಂಶ ಹೆಚ್ಚುತ್ತದೆ. ಬೆಳೆ ಇಳುವರಿ ಸಹ ಹೆಚ್ಚಾಗಿ ರೈತರಿಗೆ ಲಾಭವಾಗುತ್ತದೆ. ಸ್ವಂತ ಜಮೀನಿನಲ್ಲಿ ಕೆಲಸ ಮಾಡುವುದಕ್ಕೆ ದಿನವೊಂದಕ್ಕೆ 275 ರೂ ಹಾಗೂ ಸಲಕರಣೆ ವೆಚ್ಚ 10 ರೂ ಸೇರಿದಂತೆ 285 ರೂ ದಿನಗೂಲಿ ಸಿಗುತ್ತದೆ ಎಂದು ಹೇಳಿದರು.
ತಾಲ್ಲೂಕು ಪಂಚಾಯಿತಿಯ ತಾತಹಳ್ಳಿ ಗ್ರಾಮದ 100 ಎಕರೆ ಅರಣ್ಯ ಪ್ರದೇಶದಲ್ಲಿ ನರೇಗಾ ಯೋಜನೆಯಡಿ 14 ಕಾಮಗಾರಿಗಳನ್ನು ನಡೆಸಿದ್ದೇವೆ. ಒಟ್ಟು ಯೋಜನೆಯ ಅಂದಾಜು ಮೊತ್ತ 64.304 ಲಕ್ಷ ರೂಗಳಾಗಿದ್ದು, ಇದುವರೆಗೂ ಪಾವತಿಯಾದ ಮೊತ್ತ 14.4845 ಲಕ್ಷ ರೂಗಳು, ಪ್ರತಿಯೊಂದು ಕೆಲಸವೂ ಪಾರದರ್ಶಕವಾಗಿ ನಡೆದಿದೆ. ಆನ್ ಲೈನ್ ನಲ್ಲಿ ದಾಖಲಾಗಿದೆ ಎಂದು ಹೇಳಿದರು.
ನೂರು ಎಕರೆಯಲ್ಲಿದ್ದ ನೀಲಗಿರಿ ಮರಗಳ ಮಾರಾಟದಿಂದ 32 ಲಕ್ಷ ರೂಗಳು ಆದಾಯ ಬಂದಿತ್ತು. ಎರಡು ಕೊಳವೆ ಬಾವಿಗಳನ್ನು ಕೊರೆಸಲು 5.1 ಲಕ್ಷ ರೂಗಳನ್ನು ಖರ್ಚು ಮಾಡಲಾಗಿದೆ. ನರೇಗಾದಲ್ಲಿ ಒಟ್ಟಾರೆ ಈ ಯೋಜನೆಯಲ್ಲಿ ಹೆಚ್ಚೆಂದರೆ 23 ಲಕ್ಷ ರೂಗಳಷ್ಟೇ ಖರ್ಚು ಮಾಡಬಹುದಷ್ಟೇ. ತಾಲ್ಲೂಕು ಪಂಚಾಯಿತಿ ಅನುದಾನದಿಂದ 17 ಲಕ್ಷ ರೂ ಖರ್ಚು ಮಾಡಲಿದ್ದೇವೆ. 40 ಲಕ್ಷ ರೂಗಳಲ್ಲಿ ಈ ಯೋಜನೆಯನ್ನು ಪೂರ್ಣಗೊಳಿಸುವ ಉದ್ದೇಶವಿದೆ ಎಂದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಾಜಶೇಖರ್ ಮಾತನಾಡಿ, ಕೃಷಿ ಹೊಂಡಗಳಲ್ಲಿ ಪ್ಲಾಸ್ಟಿಕ್ ಪೇಪರ್ ಹೊದಿಸಿ ಮಳೆ ನೀರನ್ನು ಹಿಡಿದಿಡಲು ವ್ಯವಸ್ಥೆ ಮಾಡುವುದು, ಹನಿ ನೀರಾವರಿ ಅಳವಡಿಸುವುದು, ಹಾಕಿರುವ ಗಿಡಗಳು ಮರಗಳಾಗುವವರೆಗೂ ನಡುವೆ ಅವರೆ, ತೊಗರಿ, ರಾಗಿ ಮುಂತಾದ ಬೆಳೆಗಳನ್ನು ಬೆಳೆಯುವ ಉದ್ದೇಶವಿದೆ ಎಂದು ಹೇಳಿದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಾಜಶೇಖರ್, ನರೇಗಾ ಯೋಜನಾಧಿಕಾರಿ ಚಂದ್ರಪ್ಪ ಹಾಜರಿದ್ದರು.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -







