ನಗರದ ಹೊರವಲಯದ ಹನುಮಂತಪುರ ಗೇಟ್ ಬಳಿ ಇರುವ ಬಿಜಿಎಸ್ ವಿದ್ಯಾಸಂಸ್ಥೆಯಲ್ಲಿ ಗುರುವಾರ ಆಯೋಜಿಸಿದ್ದ ಮಾತೃಭೋಜನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಖ್ಯಾತ ಗಾಯಕಿ ಕಸ್ತೂರಿ ಶಂಕರ್ ಮಾತನಾಡಿದರು.
ಎಲ್ಲ ಮತಬಾಂಧವರೂ, ಧರ್ಮೀಯ ತಾಯಂದಿರು ಪ್ರೀತಿ ಮತ್ತು ಮಮತೆಯಿಂದ ಮಕ್ಕಳಿಗೆ ಉಣಬಡಿಸುವುದನ್ನು ಕಂಡು ನನಗೆ ದೇವಲೋಕದಲ್ಲಿರುವಂತೆ ಭಾಸವಾಯಿತು. ಇಲ್ಲಿ ಪ್ರೀತಿ ಉಕ್ಕಿ ಹರಿದಿದೆ, ತಾಯಿಯ ಮಮತೆಯಲ್ಲಿ ಮಕ್ಕಳು ಪುನೀತರಾಗಿದ್ದಾರೆ ಎಂದು ಅವರು ತಿಳಿಸಿದರು.
ತಾಯಿಯ ಹೃದಯ ಬಲು ಮೃದು, ತಾಯಿಯ ಅಡುಗೆ ಬಲು ರುಚಿ. ಏಕೆಂದರೆ ಅದರಲ್ಲಿ ಪ್ರೀತಿ ಬೆರೆತಿರುತ್ತದೆ. ಅದಕ್ಕಾಗಿಯೇ ಇಲ್ಲಿ ತಾಯಂದಿರು ಎಲ್ಲ ಮಕ್ಕಳಿಗೂ ಸಮಾನವಾಗಿ ಪ್ರೀತಿಯಿಂದ ಉಣಬಡಿಸಿರುತ್ತಾರೆ. ಇಷ್ಟೊಂದು ಪ್ರೀತಿಯಿಂದ ತುಂಬಿರುವ ಸ್ಥಳಕ್ಕೆ ಆಗಮಿಸಿ ನಾನೂ ಬೊಗಸೆಯಷ್ಟು ಪ್ರೀತಿಯನ್ನು ತುಂಬಿಕೊಂಡು ಹೋಗುತ್ತಿರುವುದಕ್ಕೆ ಹರ್ಷವಾಗುತ್ತಿದೆ ಎಂದು ನುಡಿದು, ಕಲಿಸು ಗುರುವೆ ಕಲಿಸು, ಕೆ.ಎಸ್.ನರಸಿಂಹಸ್ವಾಮಿಯವರ ಭಾವಗೀತೆ, ಬಿಳಿ ಹೆಂಡ್ತಿ ಚಲನಚಿತ್ರದ ರಂಗೇನಹಳ್ಳಿಯಾಗೆ ಹಾಡು ಮತ್ತು ಹೆಣ್ಣೀನ ಜನುಮಾಕ್ಕೆ ಎಂಬ ಜಾನಪದಗೀತೆಗಳನ್ನು ಹಾಡಿದರು.
ಆದಿಚುಂಚನಗಿರಿ ಶಾಖಾ ಮಠದ ಮಂಗಳಾನಂದನಾಥ ಸ್ವಾಮೀಜಿ ಆಶೀರ್ವಚನವನ್ನು ನೀಡಿ ಮಾತನಾಡಿ, ಮಕ್ಕಳಿಗೆ ಮನೆಯಲ್ಲಿ ಉತ್ತಮ ವಾತಾವರಣ ನಿರ್ಮಾಣ ಮಾಡಿಕೊಡುವಲ್ಲಿ ಪೋಷಕರು ಹೆಚ್ಚಿನ ಗಮನ ನೀಡಬೇಕು. ಮನೆಯೇ ಮೊದಲ ಪಾಠಶಾಲೆ ಎಂಬ ಹಿರಿಯರ ಮಾತಿನಂತೆ ಮಗುವಿನ ಶಿಕ್ಷಣ ಮನೆಯಿಂದಲೇ ಆರಂಭವಾಗುತ್ತದೆ ಹಾಗಾಗಿ ಮನೆಯಲ್ಲಿ ತಂದೆ-ತಾಯಿಗಳು ಮಕ್ಕಳಿಗೆ ಉತ್ತಮವಾದ ವಾತಾವರಣ ಕಲ್ಪಿಸಿದಿದ್ದಲ್ಲಿ ಮಕ್ಕಳು ಪರಿಪಕ್ವವಾಗಿ ಬೆಳೆಯಲು ಸಾಧ್ಯವಿಲ್ಲ ಎಂದರು.
ಮಕ್ಕಳಿಗೆ ಆದರ್ಶಮಯವಾದ ಶಿಕ್ಷಣದ ಜೊತೆ ಜೊತೆಗೆ ಉತ್ತಮ ಸಂಸ್ಕಾರವನ್ನು ಬೆಳೆಸುವ ಜವಾಬ್ದಾರಿ ತಾಯಿಯ ಮೇಲಿರುತ್ತದೆ. ಪ್ರತಿಯೊಬ್ಬ ಮಗುವೂ ದೇವರ ಪ್ರತಿರೂಪವಾದ ತಾಯಿಯನ್ನು ಗೌರವಿಸುವುದನ್ನು ರೂಡಿಸಿಕೊಳ್ಳಬೇಕು ಎಂದರು.
ಬಿಜಿಎಸ್ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಎನ್.ಶಿವರಾಮರೆಡ್ಡಿ ಮಾತನಾಡಿ, ಸಪ್ತ ಸೂತ್ರ ಶಿಕ್ಷಣದ ಮೂಲಕ ನಮ್ಮ ಸಂಸ್ಥೆಯಲ್ಲಿ ಗುಣಮಟ್ಟದ ಶಿಕ್ಷಣದೊಂದಿಗೆ ಮೌಲ್ಯ ಮತ್ತು ಸಂಸ್ಕಾರವನ್ನು ಕಲಿಸುತ್ತಿದ್ದೇವೆ. ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಶಿಕ್ಷಕರ ಹಾಗೂ ಪೋಷಕರ ಪಾತ್ರ ಬಹಳಷ್ಟು ಮಹತ್ತರವಾದದ್ದು ಹಾಗಾಗಿ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾಗಿರುವ ಸಹಕಾರವನ್ನು ಪೋಷಕರು ಶಿಕ್ಷಕರಿಗೆ ನೀಡಬೇಕು ಎಂದರು.
ಗಾಯಕಿ ಕಸ್ತೂರಿ ಶಂಕರ್ ಅವರ ಮಗಳು ಯಶಸ್ವಿನಿ ಉಮೇಶ್, ಮಕ್ಕಳ ಭಾಗ್ಯ ಚಲನಚಿತ್ರದ ಗುಡಿಯಲಿರುವ ಶಿಲೆಗಳೆಲ್ಲ ದೇವರಂತೆ, ಎಚ್.ಎಸ್.ವಿ ಅವರ ತೂಗುಮಂಚದಲ್ಲಿ ಕೂತು ಗೀತೆಗಳನ್ನು ಹಾಡಿದರು.
ಈ ಸಂದರ್ಭದಲ್ಲಿ ಗಾಯಕಿ ಕಸ್ತೂರಿ ಶಂಕರ್ ಮತ್ತು ಅವರ ಮಗಳು ಯಶಸ್ವಿನಿ ಉಮೇಶ್ ಅವರನ್ನು ಶಾಲಾ ಆಡಳಿತ ಮಂಡಳಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳ ಪೋಷಕರು ಮಾತೃಭೋಜನ ಸಮಾರಂಭಕ್ಕಾಗಿ ತಯಾರಿಸಿ ತಂದಿದ್ದ ವಿವಿಧ ರೀತಿಯ ತಿಂಡಿಗಳನ್ನು ಮಕ್ಕಳು ಹಾಗು ಪೋಷಕರು ಸವಿದರು.
ತಾಲ್ಲೂಕು ಪಂಚಾಯಿತಿ ಇಒ ಶಿವಕುಮಾರ್, ಪ್ರಾಂಶುಪಾಲ ಮಹದೇವ್, ಬಿಜಿಎಸ್ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರಾದ ಮೋಹನ್ ಕುಮಾರ್, ವಿಜಯಕುಮಾರ್, ಬೋರಯ್ಯ, ವಾರ್ಡನ್ ರಾಜು, ಲೋಕೇಶ್, ಕೆಂಪರೆಡ್ಡಿ, ಜೆ.ಎಸ್.ವೆಂಕಟಸ್ವಾಮಿ, ಪುರುಷೋತ್ತಮ್, ರವಿಪ್ರಕಾಶ್ ಹಾಜರಿದ್ದರು.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -







