Home People ಜಂಗಮಕೋಟೆಯ ಕೆ.ಎನ್.ನಾರಾಯಣಸ್ವಾಮಿ

ಜಂಗಮಕೋಟೆಯ ಕೆ.ಎನ್.ನಾರಾಯಣಸ್ವಾಮಿ

0

ತಾಲ್ಲೂಕಿನ ಜಂಗಮಕೋಟೆಯವರಾದ ಇವರು ಗಾರುಡಿಗೊಂಬೆ ಕುಣಿತ ಕಲೆಯಲ್ಲಿ ಅಸಾಧಾರಣವಾದ ಪರಿಣತಿ ಪಡೆದು ಸಾಧನೆ ಮಾಡಿದ್ದಾರೆ. ಪ್ರಮುಖವಾಗಿ ಗಾರುಡಿಗೊಂಬೆಯನ್ನು ತಯಾರಿಸುವುದರಲ್ಲಿ ಹಾಗೂ ಕೀಲುಕುದುರೆಗಳನ್ನು ಕುಣಿಸುವುದರಲ್ಲಿ ಇವರು ಪ್ರಖ್ಯಾತರು. ಗೌರಿ ಮತ್ತು ಗಣೇಶನ ವಿಗ್ರಹಗಳು, ಕೀಲುಕುದುರೆ, ಗಾರುಡಿಗೊಂಬೆ, ಜಿರಾಫೆ, ನವಿಲು ಮುಂತಾದ ಆಕೃತಿಗಳನ್ನು ಮಣ್ಣಿನಲ್ಲಿ ಅಥವಾ ಬಿದಿರಿನಲ್ಲಿ ಹಾಗೂ ಸರಿಹೊಂದಬಹುದಾದ ಇನ್ನಾವುದೇ ವಸ್ತುಗಳಿಂದ ತಯಾರಿಸಿ ಆ ಆಕೃತಿಗಳಿಗೆ ರೂಪಕೊಟ್ಟು ಅವುಗಳಿಗೆ ಜೀವತುಂಬಿ ಕುಣಿಸುವುದು ಇವರಿಗೆ ವಂಶಪಾರಂಪರ್ಯವಾಗಿ ಬಂದ ಕಲೆ.
ಇವರು ಕಲೆಗಾಗಿ ಸತತವಾಗಿ ಶ್ರಮಪಟ್ಟು ತಂದೆ ಮುನಿಯಪ್ಪ ಅವರಿಂದ ತರಬೇತಿ ಪಡೆದು ಇತರರಿಗೂ ಕಲಿಸಿ ಜಾನಪದ ಕಲೆಯನ್ನು ಜೀವಂತವಾಗಿ ಇರಿಸಿದ್ದಾರೆ. ನಾಟಕ ಮತ್ತು ಯಕ್ಷಗಾನಗಳ ಕಿರೀಟಗಳನ್ನು ಪಾತ್ರಗಳಿಗೆ ತಕ್ಕಂತೆ ವಿನೂತನ ರೀತಿಯಲ್ಲಿ ತಯಾರಿಸಿ ರಂಗಭೂಮಿಗೂ ಸಹ ತಮ್ಮ ಸೇವೆಯನ್ನು ವಿಸ್ತಿರಿಸಿದ್ದಾರೆ. ಜಿಲ್ಲೆಯ ನಾನಾ ಕಡೆ ರಥೋತ್ಸವ ಪಲ್ಲಕ್ಕಿ ಉತ್ಸವಗಳಾದಾಗ ಅಲ್ಲಿಗೆ ಹೋಗಿ ವಿವಿಧ ರೀತಿಯಲ್ಲಿ ಮುತ್ತಿನ ಪಲ್ಲಕ್ಕಿಗಳನ್ನು ನಿರ್ಮಿಸಿಕೊಡುತ್ತಾರೆ.
ತಾಲ್ಲೂಕಿನ ಜಂಗಮಕೋಟೆ, ಕೋಲಾರ ತಾಲ್ಲೂಕಿನ ವೇಮಗಲ್, ಬೆಂಗಳೂರು, ತಿರುಪತಿಗಳಲ್ಲಿ ತರಬೇತಿ ನೀಡಿ ತಂಡಗಳನ್ನು ರಚಿಸಿದ್ದಾರೆ. ಮಂಡ್ಯದಲ್ಲಿರುವ ಜಾನಪದಲೋಕಕ್ಕೆ ತಮ್ಮ ಸಂಗ್ರಹದಲ್ಲಿನ ಹಲವು ಅಮೂಲ್ಯವಾದ ಜಾನಪದ ಗೊಂಬೆಗಳನ್ನು. ಅಮೂಲ್ಯ ಕಲಾಕೃತಿಗಳನ್ನು ಕೊಡುಗೆಯಾಗಿ ನೀಡಿದ್ದಾರೆ.
ಬೃಹತ್‌ಗಾತ್ರದ ಹತ್ತರಿಂದ ಹನ್ನೆರಡು ಅಡಿ ಎತ್ತರದ ಗಾರುಡಿಗೊಂಬೆಗಳು ಮಣ್ಣು ಮತ್ತು ಬಿದಿರು ಸೇರಿಸಿ ಹಗುರವಾಗಿ ನಿರ್ಮಿಸುವ ಕಲೆಯನ್ನು ಕಲಿತಿರುವ ರಾಜ್ಯದ ಕೆಲವೇ ಮಂದಿಯಲ್ಲಿ ನಾರಾಯಣಸ್ವಾಮಿ ಒಬ್ಬರು.